ಪರೋಪಕಾರಕ್ಕಾಗಿ ಜೀವನ ಮೀಸಲಿಡಬೇಕು
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ.3
ಪರೋಪಕಾರಕ್ಕಾಗಿ ಇರುವ ಮನುಷ್ಯ ಜೀವನವನ್ನು ಇಂದು ಕೇವಲ ಸ್ವಾರ್ಥಕ್ಕೆ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಪರೋಪಕಾರದಿಂದ ಜೀವನ ತೃಪ್ತಿಯಾಗಿರುತ್ತದೆ. ಒಬ್ಬ ವ್ಯಕ್ತಿಯ ಮರುಹುಟ್ಟಿಗೆ ಕಾರಣವಾಗುವ ರಕ್ತದಾನ ಶ್ರೇಷ್ಠದಾನ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದಲ್ಲಿ ಲಿಂ. ಶಿವಲಿಂಗ ಶಿವಯೋಗಿಗಳ 97ನೇ ಜಯಂತಿ ನಿಮಿತ್ತ ಸೋಮವಾರ ನಡೆದ ರಕ್ತದಾನ ಶಿಬಿರ ಹಾಗೂ ಅಕ್ಷರ ದಾಸೋಹ ಅಡುಗೆ ಕೊಠಡಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಲಿಂ. ಶಿವಲಿಂಗ ಶ್ರೀಗಳ ಜಯಂತಿ ಆಚರಣೆಗಷ್ಟೇ ಸೀಮಿತವಾಗದೇ ಅದು ಸಮಾಜದ ಅಭಿವೃದ್ಧಿಗೆ ಸಹಾಯಕವಾಗಬೇಕು. ಅನೇಕ ಕಾರ್ಯಗಳನ್ನು ಮಾಡುವ ಮೂಲಕ ಶ್ರೀಗಳ ಜಯಂತಿಗೆ ಅರ್ಥವನ್ನು ಕಲ್ಪಿಸುವ ಕಾರ್ಯವನ್ನು ಶ್ರೀಮಠವು ಮಾಡುತ್ತಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಸಮಾಜದ ಅವ್ಯವಸ್ಥೆಯನ್ನು ಬದಲಾಯಿಸುವ ರೀತಿಯಲ್ಲಿದ್ದಾಗ ಅವನ ಜೀವನ ಸಾರ್ಥಕವಾಗುತ್ತದೆ. ಮನುಷ್ಯ ಹುಟ್ಟಿದಾಗ ಏನನ್ನೂ ತರುವುದಿಲ್ಲ, ಸತ್ತ ಮೇಲೆ ಏನನ್ನು ಕೊಂಡೊಯ್ಯುವುದಿಲ್ಲ. ಬದುಕಿದ ದಿನಗಳಲ್ಲಿ ಮಾಡಿದ ಸಾಧನೆ ಮಾತ್ರ ಉಳಿಯುತ್ತದೆ. ಆದರೆ ಇಂದು ಜನರು ದುಶ್ಚಟಗಳಿಗೆ ದಾಸರಾಗಿ ಅಮೂಲ್ಯವಾದ ಜೀವನವನ್ನು ನಾಶ ಪಡಿಸಿಕೊಳ್ಳುತ್ತಿರುವುದು ವಿಷಾದನೀಯ. ಸಮಾಜದ ಅಭಿವೃದ್ಧಿಗೆ ಪ್ರೇರಕವಾಗುವ ಕಾರ್ಯಗಳನ್ನು ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಜೀವನ ಸಾರ್ಥಕತೆ ಮಾಡಿಕೊಳ್ಳಿ ಎಂದು ಶ್ರೀಗಳು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಲಿಂ. ಶಿವಲಿಂಗ ಶ್ರೀಗಳು ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿದ್ದರು. ಜಾತಿ ಮತ ಭೇದ ಮಾಡದೆ ಎಲ್ಲರನ್ನೂ ಸಮಾನ ರೀತಿಯಿಂದ ನೋಡುತ್ತಿದ್ದರು. ಇಂದಿನ ಶ್ರೀಗಳು ಕೂಡಾ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ನಡೆಯುತ್ತಿದ್ದಾರೆ. ಸೂರ್ಯ ಚಂದ್ರ ಇರುವ ತನಕ ಶ್ರೀಗಳು ಹೆಸರು ಅಜರಾಮರವಾಗಿರುತ್ತದೆ. ಕೇವಲ ಜಯಂತಿ ಆಚರಣೆ ಮಾಡದೆ ಸಮಾಜಕ್ಕೆ ಉಪಯುಕ್ತವಾಗುವ ಧರ್ಮ ಕಾರ್ಯಗಳನ್ನು ಮಾಡುತ್ತಿರುವ ಮಠದ ಕಾರ್ಯವನ್ನು ಶ್ಲಾಘಿಸಿದರು.
ಅಕ್ಷರ ದಾಸೋಹದ ಅಧಿಕಾರಿ ಝಡ್.ಎಂ. ಖಾಜಿ ಮಾತನಾಡಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿ ಕೇವಲ ಮಠಗಳಿಂದ ಮಾತ್ರ ಸಾಧ್ಯವಿದೆ. ಪ್ರಾಯೋಗಿಕವಾಗಿ ರಾಜ್ಯದಲ್ಲಿರುವ 9 ಶಾಲೆಗಳ ಅಡುಗೆ ಕೋಣೆಗಳಿಗೆ ನೂತನವಾಗಿ ಅಳವಡಿಸಲಾಗುತ್ತಿರುವ ಸ್ಟೀಮ್ ಬಾಯ್ಲರ್ಗಳಲ್ಲಿ ಹುಕ್ಕೇರಿಮಠದ ಅಕ್ಷರ ದಾಸೋಹದ ಅಡುಗೆ ಕೋಣೆಯು ಒಂದಾಗಿದ್ದು, ಸರ್ಕಾರವೇ ಎಲ್ಲ ವೆಚ್ಚವನ್ನು ನೋಡಿಕೊಳ್ಳುತ್ತದೆ ಎಂದರು. ದೇಶದಲ್ಲಿ 11.50 ಕೋಟಿ ವಿದ್ಯಾರ್ಥಿಗಳು ಅಕ್ಷರ ದಾಸೋಹದ ಸದುಪಯೋಗ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಪ್ರತಿ ವರ್ಷ ರು. 16 ಸಾವಿರ ಕೋಟಿಗಳನ್ನು ಅಕ್ಷರ ದಾಸೋಹಕ್ಕೆ ವೆಚ್ಚ ಮಾಡುತ್ತಿದೆ. ಇದರ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯ ಕಡೆಗೆ ಆಕರ್ಷಣೆ ಮಾಡಿ ಕಲಿಕೆಯನ್ನು ಪ್ರೋತ್ಸಾಹಿಸುವುದರೊಂದಿಗೆ ಪೌಷ್ಟಿಕಾಂಶವನ್ನು ಹೆಚ್ಚಿಸಲು ಈ ಯೋಜನೆ ಸಹಾಯಕವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಎಸ್.ಅಂಗಡಿ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ತಜ್ಞ ಡಾ. ಎನ್.ಮುರಳೀಧರ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಬಿ. ಅಪ್ಪಣ್ಣನವರನ್ನು ಸನ್ಮಾನಿಸಲಾಯಿತು. ಲಿಂ. ಶಿವಲಿಂಗ ಶಿವಯೋಗಿಗಳ 97ನೇ ಜಯಂತಿ ನಿಮಿತ್ತ ನಡೆದ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಸ್.ಎಸ್.ಅಡಿಗ, ಪತ್ರಕರ್ತ ಕೆ.ಮಂಜಪ್ಪ, ಜೆಸಿಐ ಅಧ್ಯಕ್ಷ ಶಿವಾನಂದ ಕೆಂಬಾವಿ, ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಸಿದ್ದು ಕಬ್ಬೂರ, ಬಿ.ಬಸವರಾಜ ಇತರರು ಇದ್ದರು. ಸಿ.ಎಸ್ ಮರಳಿಹಳ್ಳಿ ನಿರೂಪಿಸಿದರು. ಶಿವಬಸಪ್ಪ ಹತ್ತಿವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

