ಹಾವೇರಿ

7 ಸಾಧಕರಿಗೆ ಗುರು ಪುಟ್ಟರಾಜ ಪುರಸ್ಕಾರ

Published On :

ಹಾವೇರಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಏಳು ಸಾಧಕರಿಗೆ ಶ್ರೀಗುರು ಪುಟ್ಟರಾಜ ಪ್ರಶಸ್ತಿಗಳನ್ನು ಸೋಮವಾರ ತಾಲೂಕಿನ ದೇವಗಿರಿಯ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ನಡೆದ ಪುಟ್ಟರಾಜ ಕವಿ ಗವಾಯಿಗಳ ಶತಮಾನೋತ್ಸವ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಗದಗಿನ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರಿಗೆ ಗಾನಶ್ರೀ, ಬೆಂಗಳೂರಿನ ಈಶ್ವರ ಮೋರಗೇರಿ ಅವರಿಗೆ ವಾದ್ಯಶ್ರೀ, ರೇವಣಸಿದ್ದಯ್ಯ ಹೊಸೂರಮಠ ಶ್ರೀಧರಗಡ್ಡೆ ಅವರಿಗೆ ನಾಟ್ಯಶ್ರೀ, ಆಲದಕಟ್ಟಿಯ ಬಸವರಾಜ ಶಾಸ್ತ್ರಿಗಳಿಗೆ ಕೀರ್ತನಶ್ರೀ, ಧಾರವಾಡದ ಶಾಂತಾ ಇಮ್ರಾಪುರ ಅವರಿಗೆ ಸಾಹಿತ್ಯಶ್ರೀ, ಹುಬ್ಬಳ್ಳಿಯ ಡಾ. ಜಿ.ಕೆ. ಹಿರೇಮಠ ಅವರಿಗೆ ವೈದ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲಿಂ. ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳ ಶತಮಾನೋತ್ಸವ ವಿಶೇಷ ಪುರಸ್ಕಾರವಾಗಿ ಬಿಜಾಪುರದ ತೋಟಯ್ಯ ಗವಾಯಿಗಳು ಶಿರೋಳಮಠ ಅವರಿಗೆ ಗುರುಸೇವಾ ರತ್ನ ಬಿರುದು ನೀಡಿ ಗೌರವಿಸಲಾಯಿತು. ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿಗಳು ಹಾಗೂ ಗಣ್ಯರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು.
ಸಂಜೆ ನಡೆದ ನುಡಿ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ಶಿವಕುಮಾರ ಉದಾಸಿ, ಪುಟ್ಟರಾಜರು ಸ್ವಾರ್ಥವಿಲ್ಲದ ತಮ್ಮ ಸಾಧನೆಯಿಂದಾಗಿ ನಡೆದಾಡುವ ದೇವರಾದರು. ಅಂಧರು, ಅನಾಥರಿಗೆ ಅವರು ದಾರಿದೀಪವಾದರು. ನಿಸ್ವಾರ್ಥ ಸೇವೆಯಿಂದ ಅವರು ಜನರ ಮನಸ್ಸನ್ನು ಆಳಿದರು. ಅವರ ಸಾಧನೆ ಇಂದಿನ ಯುವಕರಿಗೆ ಸ್ಫೂರ್ತಿ ಎಂದರು.
ಪುಟ್ಟರಾಜ ಕವಿ ಗವಾಯಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ 30 ಯುವಕರು ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದರು. ವೇದಿಕೆಯಲ್ಲಿ ಶಾಸಕ ರುದ್ರಪ್ಪ ಲಮಾಣಿ, ಮಾಜಿ ಎಂಎಲ್‌ಸಿ ಶಿವರಾಜ ಸಜ್ಜನರ, ಗಾನಗಂಧರ್ವ ಕಲಾ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಜಿತೇಂದ್ರನಾಥ, ಪ್ರಮುಖರಾದ ಪ್ರಭಾಕರ ಮಂಗಳೂರು ಇತರ ಗಣ್ಯರು ಇದ್ದರು. ಸಿದ್ದಲಿಂಗಯ್ಯಶಾಸ್ತ್ರಿ ಗಡ್ಡದಮಠ ಸ್ವಾಗತಿಸಿದರು. ಷಣ್ಮುಖಯ್ಯ ಹಿರೇಮಠ ನಿರೂಪಸಿದರು.
ಸಂಗೀತ ಕಾರ್ಯಕ್ರಮ: ಕಿರಣ ಹಾನಗಲ್ಲ, ಸಿದ್ದಲಿಂಗೇಶ ಕಣವಿ, ಪ್ರವೀಣಕುಮಾರ ಹೂಗಾರ, ವೆಂಕಟೇಶ ಜೋಶಿ ಸೇರಿದಂತೆ ಅನೇಕ ಕಲಾವಿದರು ಸಂಗೀತ ಕಾರ್ಯಕ್ರಮ, ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸೋಮವಾರ ಬೆಳಗ್ಗೆ ರಾಗ ರಂಜನೆ ಕಾರ್ಯಕ್ರಮದಲ್ಲಿ ಸ್ವರ ಋಷಿಗೆ ನಾದಾರ್ಚನೆ ನಡೆಯಿತು. ಇದರಲ್ಲಿ ಸುಗಮ ಸಂಗೀತ, ಗಾಯನ, ವಾಯೋಲಿನ್, ಸಿತಾರ, ತಬಲಾ ಇತ್ಯಾದಿ ಸಂಗೀತದ ಮೂಲಕ ಕಲಾವಿದರು ನಾದಾರ್ಚನೆ ನಡೆಸಿಕೊಟ್ಟರು.
ಇದಕ್ಕೂ ಮುನ್ನ ಪುಟ್ಟರಾಜ ಗವಾಯಿಗಳ ಭಾವಚಿತ್ರ ಮೆರವಣಿಗೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.