ಬ್ಯಾನರ್ ಬದಲು ಬೋರ್ಡ್ ಕಿತ್ತ ಸಿಬ್ಬಂದಿ
ಹಾವೇರಿ: ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ, ರಾಜಕಾರಣಿಗಳ ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯ, ಯೋಜನೆಗಳನ್ನು ಬಿಂಬಿಸುವ ಬ್ಯಾನರ್ಗಳನ್ನು ತೆರವುಗೊಳಿಸುವುದು ಸಾಮಾನ್ಯ. ಆದರೆ ಇಲ್ಲಿಯ ನಗರಸಭೆ ಸಿಬ್ಬಂದಿ ಬ್ಯಾನರ್ ತೆರವುಗೊಳಿಸುವ ಬದಲು ಬ್ಯಾನರ್ ಹಾಕಲು ಸಾವಿರಾರು ರು. ವೆಚ್ಚ ಮಾಡಿ ನಿರ್ಮಿಸಿದ್ದ ಕಟೌಟ್ಗಳನ್ನೇ ಕಿತ್ತು ಹಾಕಿದ ಘಟನೆ ಭಾನುವಾರ ನಡೆಯಿತು.
ನಗರಸಭೆ ವ್ಯಾಪ್ತಿಯಲ್ಲಿ ಭಾನುವಾರ ಸುಮಾರು 15 ಕಟೌಟ್ಗಳನ್ನು ಕಿತ್ತು ಹಾಕಲಾಗಿದೆ. ಕಾನೂನಿನ ಪ್ರಕಾರ ಕಟೌಟ್ಗಳಲ್ಲಿರುವ ಬ್ಯಾನರ್ಗಳನ್ನು ತೆಗೆಯಬೇಕು ಅಥವಾ ಅವು ಕಾಣದಂತೆ ಪೇಪರ್ಗಳನ್ನು ಅಂಟಿಸಬಹುದು. ಇದಕ್ಕೆ ವಿರುದ್ಧ ಎಂಬಂತೆ ನಗರಸಭೆ ಸಿಬ್ಬಂದಿ ಬ್ಯಾನರ್ ಹಾಕುವ ಕಬ್ಬಿಣದ ಕಟೌಟ್ಗಳನ್ನು ಬುಡಸಮೇತ ಕಿತ್ತು ಹಾಕಿ ನಷ್ಟ ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಗಳ ಅಭಿವೃದ್ಧಿ ಯೋಜನೆ ಅಡಿ ಜೆ.ಎಚ್. ಪಟೇಲ್ ಸರ್ಕಲ್ನಲ್ಲಿ ನಿರ್ಮಿಸಿದ ಬಸ್ ಶೆಲ್ಟರ್ ಮಧ್ಯಭಾಗದಲ್ಲಿ ಅವರ ಭಾವಚಿತ್ರ ಹಾಕಲಾಗಿತ್ತು. ಅದಕ್ಕೆ ಬಿಳಿ ಪೇಪರ ಅಂಟಿಸುವ ಬದಲು ಭಾವಚಿತ್ರ ಇರುವ ಜಾಗವನ್ನೇ ಕತ್ತರಿಸಲಾಗಿದೆ. ಇದೇ ರೀತಿ ನಗರದ ವಿವಿಧೆಡೆ ಇರುವ ಶೆಲ್ಟರ್ಗಳ ಅಂದಗೆಡಿಸಲಾಗಿದೆ. ಜಾಹೀರಾತಿಗಾಗಿ ಕಬ್ಬಿಣದಿಂದ ನಿರ್ಮಿಸಿದ ಕಟೌಟ್ಗಳನ್ನು ತೆಗೆದು ಕಬ್ಬಿಣದ ಅಂಗಡಿಗಳಿಗೆ ಮಾರುತ್ತಿದ್ದಾರೆ ಎಂದೂ ಕೆಲವರು ಆರೋಪಿಸಿದರು. ನಗರಸಭೆ ವ್ಯಾಪ್ತಿಯಲ್ಲಿರುವ ಕಟೌಟ್ಗಳಿಗೆ ಅಂಟಿಸಲಾದ ಬ್ಯಾನರ್ ತೆಗೆಯುವ ಬದಲು ಸಿಬ್ಬಂದಿ ಕಟೌಟ್ ಅನ್ನೇ ಕಿತ್ತುಕೊಂಡು ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ನಿರ್ಲಕ್ಷ್ಯ ವಹಿಸಿದ ನಗರಸಭೆ ಅಧಿಕಾರಿಗಳು ತೆಗೆದ ಬೋರ್ಡ್ಗಳನ್ನು ಮತ್ತೆ ಅಳವಡಿಸಬೇಕು. ಕಟೌಟ್ ತೆಗೆಯಿಸಿ ನಗರಸಭೆಗೆ ನಷ್ಟ ಉಂಟು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗಿರೀಶ ತುಪ್ಪದ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

