ಹಾವೇರಿ

ಗುಣಮಟ್ಟದ ಶಿಕ್ಷಣಕ್ಕಾಗಿ ಭರಪೂರ ಅರ್ಜಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 9
ಆರ್ಥಿಕವಾಗಿ ಹಿಂದುಳಿದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಖಾಸಗಿ ಶಾಲೆಗಳಿಗೆ ಸೇರುವ ಕೇಂದ್ರ ಸರ್ಕಾರದ ಶಿಕ್ಷಣ ಹಕ್ಕು ಕಾಯ್ದೆಗೆ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರ್ಟಿಇ ಕಾಯ್ದೆಯಡಿ ಲಭ್ಯವಿದ್ದ 1838 ಸೀಟ್ಗಳಿಗೆ 6520 ಅರ್ಜಿಗಳು ಸಲ್ಲಿಕೆಯಾಗಿವೆ.
ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಬಂದ ಹಿನ್ನೆಲೆಯಲ್ಲಿ ನಿಯಮಾವಳಿ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರ ಮೀಸಲಾತಿ ಪ್ರಮಾಣ ಅನುಸರಿಸಿ ಲಾಟರಿ ಮೂಲಕ ಲಭ್ಯ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಅರ್ಜಿ ಸಲ್ಲಿಸಿದ್ದ 4682 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ.
ಆರ್ಟಿಈ ಕಾಯಿದೆಯಡಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಮೀಸಲಿಟ್ಟಿರುವ ಶೇ. 25ರಷ್ಟು ಸೀಟ್ ಕಡಿಮೆ ಎಂಬ ಅಂಶ ಇದರಿಂದ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಲಭ್ಯವಿರುವ ಸೀಟ್ಗಳಿಗಿಂತ ಮೂರುಪಟ್ಟು ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಆರ್ಥಿಕವಾಗಿ ಹಿಂದುಳಿದ ಬಹುತೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಮನೋಭಾವನೆ ಹೊಂದಿರುವುದು ಇದರಿಂದ ಗೊತ್ತಾಗಿದೆ.
ಈ ಬಾರಿ ದುಪ್ಪಟ್ಟು ಅರ್ಜಿ: ಜಿಲ್ಲೆಯಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗಾಗಿ ಈ ವರ್ಷ 208 ಶಾಲೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯ 208 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಪ್ರವೇಶಕ್ಕೆ 1309 ಸೀಟ್ಗಳಿದ್ದರೆ, 1ನೇ ತರಗತಿಗೆ 529 ಸೀಟ್ಗಳಿವೆ. ಒಟ್ಟು 1838 ಸೀಟ್ಗಳನ್ನು ಆರ್ಟಿಇಗೆ ಮೀಸಲಿಡಲಾಗಿದೆ. ಈ ವರ್ಷ ಪೂರ್ವ ಪ್ರಾಥಮಿಕ ಪ್ರವೇಶಕ್ಕೆ 1309 ಸೀಟ್ಗಳಿಗೆ 5298 ಅರ್ಜಿಗಳು ಸಲ್ಲಿಕೆಯಾಗಿವೆ. 1ನೇ ತರಗತಿಗೆ 529 ಸೀಟ್ಗಳಿಗೆ 1222 ಅರ್ಜಿಗಳು ಬಂದಿವೆ.
ಪೂರ್ವ ಪ್ರಾಥಮಿಕ ಶಾಲೆ:  ಪೂರ್ವ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಬ್ಯಾಡಗಿಯಲ್ಲಿ 141 ಸೀಟ್ಗಳು ಲಭ್ಯವಿದ್ದು 277 ಅರ್ಜಿಗಳು ಸಲ್ಲಿಕೆಯಾಗಿವೆ. ಹಾನಗಲ್ಲನಲ್ಲಿ 61 ಸೀಟ್ಗಳಿಗೆ 108, ಹಾವೇರಿಯಲ್ಲಿ 345 ಸೀಟ್ಗಳಿಗೆ 2290, ಹಿರೇಕೆರೂರಿನಲ್ಲಿ 150 ಸೀಟ್ಗಳಿಗೆ 383, ರಾಣಿಬೆನ್ನೂರಿನಲ್ಲಿ 459 ಸೀಟ್ಗಳಿಗೆ 1866, ಸವಣೂರಿನಲ್ಲಿ 91 ಸೀಟ್ಗಳಿಗೆ 147 ಅರ್ಜಿಗಳು ಸಲ್ಲಿಕೆಯಾಗಿವೆ. ಶಿಗ್ಗಾಂವಿಯಲ್ಲಿ 62 ಸೀಟ್ಗಳಿಗೆ 117 ಅರ್ಜಿಗಳು ಸಲ್ಲಿಕೆಯಾಗಿವೆ.
1ನೇ ತರಗತಿ 1222 ಅರ್ಜಿ: ಒಂದನೇ ತರಗತಿ ವಿಭಾಗದಲ್ಲಿ ಹಾನಗಲ್ಲಿನಲ್ಲಿ 103 ಸೀಟ್ಗಳಿಗೆ 161, ಹಾವೇರಿಯಲ್ಲಿ 79 ಸೀಟ್ಗಳಿಗೆ 170, ಹಿರೇಕೆರೂರಿನಲ್ಲಿ 58ಕ್ಕೆ 144, ರಾಣಿಬೆನ್ನೂರಿನಲ್ಲಿ 57ಕ್ಕೆ 376, ಸವಣೂರಿನಲ್ಲಿ 124ಕ್ಕೆ 191, ಸವಣೂರಿನಲ್ಲಿ 124ಕ್ಕೆ 191 ಹಾಗೂ ಶಿಗ್ಗಾಂವಿಯಲ್ಲಿ 108ಕ್ಕೆ 180 ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು 529 ಸೀಟ್ಗಳಿಗೆ 1222 ಅರ್ಜಿಗಳು ಸಲ್ಲಿಕೆಯಾದಂತಾಗಿದೆ.
ಹಿಂದಿನ ವರ್ಷ ಕಡಿಮೆ: ಕಾಯಿದೆ ಜಾರಿಯಾದ ಪ್ರಾರಂಭಿಕ ವರ್ಷ 2012-13ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಆರ್ಟಿಇ ಅಡಿಯಲ್ಲಿ 1084 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ಅದೇ ರೀತಿ 13-14ನೇ ಸಾಲಿನಲ್ಲಿ ಆರ್ಟಿಇ ಅಡಿಯಲ್ಲಿ 1820 ಸೀಟ್ಗಳನ್ನು ನಿಗದಿ ಪಡಿಸಲಾಗಿತ್ತು. ಪ್ರವೇಶಕ್ಕಾಗಿ 2290 ಅರ್ಜಿಗಳು ಸಲ್ಲಿಕೆಯಾಗಿದ್ದವು. ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಆರ್ಟಿಇ ಅಡಿ ಪ್ರವೇಶ ಪಡೆದ 2737 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಲಾಟರಿ ಮೂಲಕ ಆಯ್ಕೆ
ಲಭ್ಯವಿರುವ ಸೀಟ್ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಈ ಬಾರಿ ಸಲ್ಲಿಕೆಯಾಗಿರುವುದರಿಂದ ಕಡ್ಡಾಯವಾಗಿ ಬಹುತೇಕ ಎಲ್ಲ ಶಾಲೆಗಳಲ್ಲಿ ವಿಡಿಯೋ ಚಿತ್ರೀಕರಣದೊಂದಿಗೆ ಪಾರದರ್ಶಕವಾಗಿ ಲಾಟರಿ ಮೂಲಕ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಈಗಾಗಲೇ ಆಯ್ಕೆ ಪಟ್ಟಿ ತಯಾರಿಸಲಾಗಿದ್ದು, ಮಾ. 13ರಿಂದ ಪ್ರವೇಶ ಆರಂಭವಾಗಲಿದೆ. ಆರ್ಟಿಇ ಕಾಯಿದೆ ಕುರಿತು ಇಲಾಖೆಯಿಂದ ಬೀದಿನಾಟಕ, ಜನಪ್ರತಿನಿಧಿಗಳಿಗೆ ತರಬೇತಿ ಸೇರಿದಂತೆ ವಿವಿಧ ರೀತಿಯ ಪ್ರಚಾರ ಮಾಡಿದ್ದರಿಂದ ಈ ಬಾರಿ ಅರ್ಜಿಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿವೆ. ನಿಯಮಾವಳಿ ಪ್ರಕಾರ ಲಾಟರಿ ಮೂಲಕ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದ್ದು, ಮಾ. 13ರಿಂದ ವಿದ್ಯಾರ್ಥಿಗಳ ಪ್ರವೇಶ ಆರಂಭವಾಗಲಿದೆ ಎಂದು ಡಿಡಿಪಿಐ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.