ಧರ್ಮ ಜ್ಞಾನವಿಲ್ಲದವನ ಬದುಕು ನಿರರ್ಥಕ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮಾ. 10
ಶಾಂತಿ, ನೆಮ್ಮದಿ ಇಲ್ಲದ ಬದುಕು ಬರಡು. ಧರ್ಮ ಜ್ಞಾನವಿದಲ್ಲದ ಮಾನವನ ಬದುಕು ನಿರರ್ಥಕ. ಅಶಾಂತಿಯಿಂದ ಬಳಲುತ್ತಿರುವ ಇಂದಿನ ದಿನಗಳಲ್ಲಿ ನಿಜವಾದ ಆಧ್ಯಾತ್ಮ ಸಾಧನೆಯಿಂದ ಶಾಂತಿ ನೆಮ್ಮದಿ ನೆಲೆಗೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರಿನ ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ಪಟ್ಟರು.
ಪಟ್ಟಣದ ವಿರಕ್ತಮಠದ ಸಂಗನಬಸವ ಶ್ರೀಗಳ 20ನೇ ಪುಣ್ಯಾರಾಧನೆ ನಿಮಿತ್ತ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮದ ಅರ್ಥ ವೈಶಾಲ್ಯತೆಯಿಂದ ಕೂಡಿದೆ. ಎಲ್ಲರೂ ತನ್ನವರೆಂಬ ಮನೋಭಾವ ಬೆಳೆದು ಬಂದಾಗ ಮಾತ್ರ ಸಂಘರ್ಷ ಇಲ್ಲವೇ ಇಲ್ಲ. ಶ್ರೀ ಗುರುವಿನ ಉಪದೇಶ ಮತ್ತು ಮಾರ್ಗದರ್ಶನದಿಂದ ಬಾಳು ಬಂಗಾರವಾಗುತ್ತದೆ. ಅರಿತು ಬಾಳಿದರೆ, ಬಾಳು ಬಂಗಾರ. ಮರೆತು ಬಾಳಿದರೆ, ಬಾಳು ಬಂಧನಕಾರಿ. ವೀರಶೈವ ಧರ್ಮ ಸಂಹಿತೆಯಲ್ಲಿ ವೈಶಾಲ್ಯತೆಯ ವಿಚಾರಗಳನ್ನು ವ್ಯಕ್ತಪಡಿಸಿದೆ. ಸಕಲ ಜೀವಾತ್ಮರಿಗೂ ಲೇಸನ್ನೆ ಬಯಸಿದ್ದನ್ನು ಕಾಣಬಹುದಾಗಿದೆ. ಜೀವನ ವಿಕಾಸದ ಆದರ್ಶ ವಿಚಾರಗಳನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಕಾಣಬಹುದಾಗಿದೆ. ವಿರಕ್ತಮಠದ ಸಂಗನಬಸವ ಸ್ವಾಮಿಗಳ ಪೀಠಾಭಿಮಾನ ಮತ್ತು ಧರ್ಮ ನಿಷ್ಠೆ ಮರೆಯಲು ಸಾಧ್ಯವಿಲ್ಲ ಎಂದರು.
ಧರ್ಮ ಸಮಾರಂಭದ ನೇತೃತ್ವ ವಹಿಸಿದ್ದ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಸ್ವಾಮಿಗಳಾದ ಮೇಲೆ ತಮ್ಮದೇ ಆದಂತಹ ಧರ್ಮವನ್ನು ಅನುಸರಿಸುತ್ತ ಧರ್ಮವನ್ನು ಅಧೋಗತಿಗೆ ಕೊಂಡೊಯ್ಯುತ್ತಿದ್ದೇವೆ. ಇಂದಿಗೂ ಈ ಹಿಂದೆ ಆಂಗ್ಲರು ನಮ್ಮ ದೇಶವನ್ನು ಆಳಿದ ರೀತಿಯಲ್ಲಿ ಇಂದಿಗೂ ಅದೇ ಸ್ಥಿತಿಯಲ್ಲಿದ್ದೇವೆ. ಧರ್ಮಕ್ಕೆ ಅನ್ಯಾಯವಾಗುತ್ತಿದೆ. ಧರ್ಮಾಭಿಮಾನ, ಸ್ವಾಭಿಮಾನ ಇರಬೇಕು. ಆದರೆ, ದುರಾಭಿಮಾನ ಸಲ್ಲ. ರಂಭಾಪುರೀ ಶ್ರೀಗಳಿಗೆ ತಮ್ಮದೇ ಆದ ಪರಂಪರೆ ಇದೆ. ಭಕ್ತರು ಅಡ್ಡ ಪಲ್ಲಕ್ಕಿ ಉತ್ಸವ ಕೈಗೊಳ್ಳುತ್ತ ಬಂದಿದ್ದಾರೆ. ಅದಕ್ಕೆ ನಮ್ಮದೇನು ತಗಾದೆ. ನಾವು ಕೂಡಾ ಭಾಗಿಯಾಗೋಣ. ಇಲ್ಲದಿದ್ದರೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಕುಳಿತುಕೊಳ್ಳಬೇಕೆಂದು ವಿರೋಧಿಗಳಿಗೆ ಚಾಟಿ ಬೀಸಿದರು.
ವಿರಕ್ತಮಠದಲ್ಲಿ ಅಡ್ಡ ಪಲ್ಲಕ್ಕಿ ಉತ್ಸವ ನಡೆಯುತ್ತಿರುವುದು ತಪ್ಪೇನು? ಭಕ್ತರಲ್ಲಿ ಸದ್ಭಾವನೆಗಳನ್ನು ಮೂಡಿಸುವ ಕಾರ್ಯವಾಗಬೇಕಿದೆ. ಒಂದು ಒಳ್ಳೆ ಸಂದೇಶ ಜನರಿಗೆ ನೀಡಬೇಕಿದೆ.
ಶಿಗ್ಗಾಂವಿ ನಗರಕ್ಕೆ ಎಲ್ಲರನ್ನೂ ಆಹ್ವಾನಿಸುತ್ತೇವೆ. ಆದರೆ ತತ್ವ ಯಾರಿಂದಾದರೂ ಬರಲಿ ನಾವೆಲ್ಲರೂ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಕೆಲವರ ವಕ್ರ ಬುದ್ಧಿ ಸಮಾಜವನ್ನು ಹಾಳು ಮಾಡುತ್ತಿದೆ. ಬದುಕಿನ ಶ್ರೇಯಸ್ಸಿಗೆ ನೆಮ್ಮದಿಯ ಬದುಕಿಗೆ ಧರ್ಮದ ಮತ್ತು ಗುರುವಿನ ಮಾರ್ಗದರ್ಶನ ಅಗತ್ಯ ಎಂದರು.
ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಶಿವಯೋಗಿಗಳು ಅಧ್ಯಕ್ಷತೆ ವಹಿಸಿದ್ದರು. ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು, ಗಂಜೀಗಟ್ಟಿ ಶಿವಲಿಂಗೇಶ್ವರ ಶಿವಾಚಾರ್ಯರು, ಕೂಡಲದ ಗುರುಲಿಂಗೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಂಸದ ಮಂಜುನಾಥ ಕುನ್ನೂರ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಪ್ರಮುಖರಾದ ಶಂಕರಗೌಡ ಪಾಟೀಲ, ಮಾಜಿ ಜಿಪಂ ಅಧ್ಯಕ್ಷೆ ಪ್ರೇಮಾ ಪಾಟೀಲ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

