ಬಾಕಿ ಹಣ ಶೀಘ್ರ ನೀಡದಿದ್ದರೆ ಹೋರಾಟ
ಹಾವೇರಿ: ಕಬ್ಬಿಗೆ ಸರ್ಕಾರ ನಿಗದಿಪಡಿಸಿದ ದರವನ್ನು ಕಾರ್ಖಾನೆಯವರು ಲೋಕಸಭೆ ಚುನಾವಣೆ ಮುಗಿದ ತಕ್ಷಣ ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕು ಎಂಬ ನಿರ್ಧಾರವನ್ನು ಸಂಗೂರು ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರು ಕೈಗೊಂಡಿದ್ದಾರೆ.
ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆಯ ರೈತ ಭವನದಲ್ಲಿ ಸೋಮವಾರ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸರ್ಕಾರ ಒಂದು ಟನ್ ಕಬ್ಬಿಗೆ ರು. 2500 ನಿಗದಿ ಮಾಡಿದ್ದರೂ ಕಾರ್ಖಾನೆಯವರು ಈ ದರ ರೈತರಿಗೆ ನೀಡುತ್ತಿಲ್ಲ. ಸರ್ಕಾರ ದರ ನಿಗದಿ ಮಾಡುವುದಕ್ಕಿಂತ ಮುನ್ನ ತೀರ್ಮಾನಿಸಿದಂತೆ ಟನ್ಗೆ ರು. 1800 ಮಾತ್ರ ನೀಡುತ್ತಿದ್ದಾರೆ. ಈ ಕುರಿತು ಸರ್ಕಾರ ಮಧ್ಯ ಪ್ರವೇಶಿಸಿ ಕಾರ್ಖಾನೆಯವರಿಂದ ಟನ್ ಕಬ್ಬಿಗೆ ರು. 2500 ಕೊಡಿಸಬೇಕು. ಇಲ್ಲವೇ ಸರ್ಕಾರವಾದರೂ ಆ ಹಣ ಕೊಡಬೇಕು ಎಂದು ರೈತರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಗುರುಮಠ ಮಾತನಾಡಿ, ಕಾರ್ಖಾನೆ ಸರ್ಕಾರ ನಿಗದಿ ಮಾಡಿದ ದರವನ್ನು ರೈತರಿಗೆ ಕೊಡಬೇಕು. ಕಾರ್ಖಾನೆಯವರು ಕೊಡದಿದ್ದರೆ ಅದಕ್ಕೆ ಸರ್ಕಾರವೇ ಹೊಣೆ ಹೊತ್ತು ನಿಗದಿಪಡಿಸಿದ ಹಣ ನೀಡಬೇಕು ಎಂದರು.
ಕೆಲ ಕಾರ್ಖಾನೆಯವರು ಸರ್ಕಾರ ನಿಗದಿಪಡಿಸಿದ ದರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದು ಸರ್ಕಾರ ರೈತರ ಪರ ಸಮರ್ಥವಾಗಿ ವಾದ ಮಂಡಿಸಬೇಕು. ತನ್ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂದರು.
ಸಂಗೂರು ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಜಶೇಖರ ಬೆಟಗೇರಿ ಮಾತನಾಡಿ, ಸರ್ಕಾರ ಒಂದು ಟನ್ ಕಬ್ಬಿಗೆ ರು. 2500 ನಿಗದಿ ಮಾಡಿದ್ದರೂ ಕಾರ್ಖಾನೆಯವರು ಕಡಿಮೆ ಹಣ ನೀಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಬಸವರಾಜ ಶಿವಣ್ಣವರ, ಲೋಕಸಭೆ ಚುನಾವಣೆ ಮುಗಿದ ಬಳಿಕ ಎಲ್ಲ ಬೆಳೆಗಾರರಿಗೆ ಸರ್ಕಾರ ಘೋಷಿಸಿದ ಹಣ ಸಿಗುವಂತೆ ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ. ಒಂದು ವೇಳೆ ಕೊಡದಿದ್ದರೆ ರೈತರೊಂದಿಗೆ ತಾವೂ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.
ಸಭೆಯಲ್ಲಿ ರೈತ ಪ್ರಮುಖರಾದ ನಿಂಗಪ್ಪ ಪೂಜಾರ, ಬಸವಣ್ಣೆಪ್ಪ ಬೆಂಚಿಹಳ್ಳಿ, ರುದ್ರಪ್ಪ ಸಿಂಧೂರ, ಸುರೇಶಗೌಡ ಪಾಟೀಲ, ನಾಗಪ್ಪ ಸಜ್ಜನ, ಗದಿಗೆಪ್ಪಗೌಡ ಪಾಟೀಲ, ಶಿವಪ್ಪ ಬೆನಕಣ್ಣನವರ, ಚಿಕ್ಕಗೌಡ್ರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

