ಉತ್ತಮ ಮಾವು ಫಸಲಿಗೆ ಔಷಧೋಪಚಾರ ಅವಶ್ಯ
ಹಾನಗಲ್ಲ: ಉತ್ತಮ ಮಾವು ಫಸಲಿಗೆ ಕೀಟಭಾದೆ ನಿವಾರಣೆಗೆ ಔಷಧೋಪಚಾರ ನಿರ್ವಹಣೆ ಅತ್ಯಗತ್ಯ ಎಂದು ಹನುಮನಮಟ್ಟಿ ಕೃಷಿ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಎಸ್.ಟಿ.ಪ್ರಭು ಸಲಹೆ ನೀಡಿದರು.
ಬುಧವಾರ ಹಾನಗಲ್ಲ ನಗರದ ಎಪಿಎಂಸಿ ಸಭಾಂಗಣದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಹನುಮನಮಟ್ಟಿ ಕೃಷಿ ಸಂಶೋಧನ ಕೇಂದ್ರ, ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ ತಾಂತ್ರಿಕ ವಿಚಾರಗೋಷ್ಠಿಯಲ್ಲಿ ಮಾವು ಬೆಳೆಯಲ್ಲಿ ಕೀಟ ಹಾಗೂ ಹತೋಟಿ ಕ್ರಮಗಳ ಕುರಿತು ಮಾತನಾಡಿದರು. ಮಾವು ಬೆಳೆಗೆ ರಸಹೀರುವ ಜಿಗಿ ಕಾಟದ ಪರಿಣಾಮವಾಗಿ ಮಾವು ಫಸಲು ಹಾಳಾಗುತ್ತದೆ. ಹೂ ಚಿಗುರನ್ನು ತಿಂದು ಹಾಕುವ ಕೀಟಗಳನ್ನು ನಿರ್ಲಕ್ಷಿಸಕೂಡದು. ಕೇವಲ ಫಸಲು ಬಿಡುವ ಸಂದರ್ಭದಲ್ಲಿ ಮಾತ್ರ ಗಿಡಗಳನ್ನು ಗಮನಿಸಿದರೆ ಸಾಲದು, ವರ್ಷವಿಡೀ ಗಿಡಗಳಿಗೆ ರೋಗ ಬರದಂತೆ ಕಾಪಾಡಿದರೆ ಉತ್ತಮ ಫಸಲು ಸಿಗುತ್ತದೆ ಎಂದರು. ಮಾವು ಬೆಳೆಯಲ್ಲಿ ಮಣ್ಣು, ನೀರು ಹಾಗೂ ಸಸ್ಯಪೋಷಕಾಂಶಗಳ ನಿರ್ವಹಣೆ ಕುರಿತು ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಬಿ.ಆರ್. ಜಗದೀಶ ಮಾತನಾಡಿದರು. ಮಾವು ಫಸಲಿನ ಮಾರುಕಟ್ಟೆ ವ್ಯವಸ್ಥೆ ಕುರಿತು ಮಾತನಾಡಿದ ಪೂನಾ ರೇನ್ಬೋ ಇಂಟರ್ನ್ಯಾಶನಲ್ ಸಂಸ್ಥೆಯ ಸಿ.ಜಿ. ಬಸಾಳೆ, ಹಣ್ಣಿನ ಪದಾರ್ಥಗಳನ್ನು ಗುಣಮಟ್ಟದಲ್ಲಿ ಬೆಳೆಸದಿದ್ದರೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಹಣ್ಣುಗಳನ್ನು ರಫ್ತು ಮಾಡಲು ಸಾಧ್ಯವಿಲ್ಲ. ಜಾಗತಿಕ ಮಾರುಕಟ್ಟೆ ಈಗ ಕಾನೂನು ವ್ಯಾಪ್ತಿಯಲ್ಲಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆದ ಫಸಲು ಬಹುಪಾಲು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಒಗ್ಗದು. ಜಗತ್ತಿನ ಹಲವು ರಾಷ್ಟ್ರಗಳಿಗೆ ಭಾರತದ ಮಾವು ರಫ್ತಾಗುತ್ತದೆ. ಹೊರರಾಷ್ಟ್ರಗಳಲ್ಲಿ ಭಾರತದ ಹಣ್ಣು ಮಾರಾಟವಾದ ಸ್ಥಳ ಹಾಗೂ ಅದನ್ನು ಸೇವಿಸಿದವರ ದಾಖಲೆ ಇಟ್ಟುಕೊಳ್ಳಲು ಸಾಧ್ಯ. ಒಂದು ವೇಳೆ ಭಾರತದಿಂದ ಕಳುಹಿಸಿದ ಹಣ್ಣನ್ನು ತಿಂದು ಅನಾರೋಗ್ಯಕ್ಕೊಳಗಾದರೆ ಕಾನೂನುಬದ್ಧವಾಗಿ ನಷ್ಟ ತುಂಬಿ ಕೊಡಬೇಕಾಗುತ್ತದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನಮ್ಮ ಹಣ್ಣುಗಳನ್ನು ಕಳುಹಿಸುವಾಗ ಆ ರಾಷ್ಟ್ರಗಳ ಬೇಡಿಕೆ ಹಾಗೂ ಸ್ವಚ್ಛತೆ ಅನುಗುಣವಾಗಿ ರಫ್ತು ಮಾಡಬೇಕಾಗುತ್ತದೆ. ಹಾನಗಲ್ಲ ಭಾಗದ ಮಾವಿನಹಣ್ಣು ರತ್ನಾಗಿರಿ ಹಾಗೂ ದೇವಗಡ ಮಾರುಕಟ್ಟೆ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಹಾನಗಲ್ಲ ಭಾಗದ ರೈತರು ಇಲ್ಲಿನ ಅತ್ಯುತ್ತಮ ಗುಣವುಳ್ಳ ಈ ಹಣ್ಣಿಗೆ ಹಾನಗಲ್ಲ ಹೆಸರಿನಿಂದಲೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡಲು ಸಾಧ್ಯವಾದರೆ ಅತಿ ಹೆಚ್ಚು ಬೆಲೆ ಪಡೆದುಕೊಳ್ಳುವುದು ಸುಲಭ ಸಾಧ್ಯ ಎಂದು ಸಲಹೆ ನೀಡಿದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ. ಎ.ಕೆ. ರೋಕಡೆ, ಧಾರವಾಡ ಕೃಷಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಎಸ್.ಜಿ. ಅಂಗಡಿ, ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಎಂ.ವಿ. ನಾಗರಾಜ ಮಾತನಾಡಿದರು. ಈ ವಿಚಾರ ಸಂಕಿರಣದಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

