ಉತ್ತಮ ವ್ಯಕ್ತಿ ಆಯ್ಕೆ ಮಾಡಿ
ಹಾನಗಲ್ಲ: ರಾಷ್ಟ್ರದ ನಾಯಕರನ್ನು ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿ ಯುವ ಸಮುದಾಯದ ಮೇಲಿದ್ದು, ಈ ಚುನಾವಣೆಯಲ್ಲಿ ರಾಜ್ಯದ 8 ಲಕ್ಷ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ತಾಲೂಕು ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ ತಿಳಿಸಿದರು.
ತಾಲೂಕಿನ ತಿಳವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸದೃಢ ಪ್ರಜಾಪ್ರಭುತ್ವಕ್ಕಾಗಿ ನವತರುಣ ಮತದಾರರಿಗೆ ಜಾಗೃತಿ ಅಭಿಯಾನದಲ್ಲಿ ಅತಿಥಿಯಾಗಿ ಮಾತನಾಡಿದರು. ಮತದಾನದ ಮಹತ್ವದ ಕುರಿತು ಕಾಲೇಜು ಹಾಗೂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಲು ಇಂತಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳಾ ಮತದಾರರ ಸಂಖ್ಯೆಗೆ ಹಿನ್ನಡೆಯಾಗಿದೆ. ಮಾ. 16 ರವರೆಗೆ ಹೆಸರು ಸೇರ್ಪಡೆಗೆ ಅವಕಾಶವಿದ್ದು, ಅಗತ್ಯ ದಾಖಲೆಗಳನ್ನು ನೀಡಿ ಹೆಸರು ನೋಂದಾಯಿಸಬೇಕೆಂದು ಮನವಿ ಮಾಡಿದರು. ಉನ್ನತ ವ್ಯಾಸಂಗ ಮಾಡಿದ ಯುವ ಸಮುದಾಯ ಮತದಾನದ ರಜೆಯನ್ನು ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿಲ್ಲ. ಪ್ರತಿವರ್ಷದ ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಮತಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತದೆ. ಈ ಸಂದರ್ಭದಲ್ಲಿ ಮತಪಟ್ಟಿ ಸರಿಪಡಿಸಲು ಸಹಕರಿಸಬೇಕು. ಮತಪಟ್ಟಿ ಶುದ್ಧೀಕರಣವೇ ಪ್ರಜಾಪ್ರಭುತ್ವದ ಮೊದಲ ಹೆಜ್ಜೆ. ಕವಲು ದಾರಿಯಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿದಾರಿಗೆ ತರುವ ಜವಾಬ್ದಾರಿ ಯುವಕರ ಮೇಲಿದೆ. ಪ್ರಾಮಾಣಿಕ, ಪಾರದರ್ಶಕ ವ್ಯಕ್ತಿತ್ವದ ಸ್ವಚ್ಛ ಆಡಳಿತ ನೀಡಬಲ್ಲ ವ್ಯಕ್ತಿಯ ಆಯ್ಕೆಗೆ ಸಹಕರಿಸಬೇಕೆಂದು ಅವರು ಕರೆ ನೀಡಿದರು. ಬಿ.ವೈ. ಬಂಡಿವಡ್ಡರ ಮಾತನಾಡಿ, ಚುನಾವಣೆಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಹಕ್ಕು ಚಲಾಯಿಸುವ ಕರ್ತವ್ಯ ಭಾರತೀಯ ಪ್ರಜೆಗಳದ್ದಾಗಬೇಕು. ಸರಿಯಾದ ನಾಯಕನನ್ನು ಆಯ್ಕೆ ಮಾಡುವಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ನಾವು ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತಾಗುತ್ತದೆ. ಮತದಾರ ಯಾವುದೇ ಆಮಿಷಕ್ಕೊಳಗಾದರೆ ಸ್ವಚ್ಛ ಆಡಳಿತಕ್ಕೆ ಸಹಕರಿಸಲು ಸಾಧ್ಯವಿಲ್ಲ. ದೇಶದ ಭವಿಷ್ಯ, ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಾಯಕನ ಆಯ್ಕೆಗೆ ಆದ್ಯತೆ ನೀಡಿ. ನಮ್ಮ ಸಮಸ್ಯೆಗಳ ಕುರಿತು ನಮ್ಮ ಧ್ವನಿಯಾಗಿ ಕೆಲಸ ಮಾಡುವ, ಸ್ಪಂದಿಸುವ ನಾಯಕನನ್ನು ಆಯ್ಕೆ ಮಾಡಬೇಕಿದೆ. ಸದೃಢ ಸಮಾಜ, ಆಡಳಿತಕ್ಕಾಗಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಕ್ಯಾಂಪಸ್ ರಾಯಭಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಶರೀಫ ಹಾನಗಲ್ಲ ಮಾತನಾಡಿ, ಸಾರ್ವತ್ರಿಕ ಚುನಾವಣೆಗಳಲ್ಲಿ ಯುವಕರ ಪಾತ್ರ ಬಹು ಮುಖ್ಯವಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಸಾಮಾಜಿಕ ಬದಲಾವಣೆ ತರುವ ಅಗತ್ಯವಿದೆ. ನಮ್ಮ ಕರ್ತವ್ಯಗಳನ್ನು ಅರಿತು ದೇಶದ ಒಳಿತಿಗಾಗಿ ನಮ್ಮ ಹಕ್ಕು ಚಲಾಯಿಸುವ ಸಂದರ್ಭ ಬಂದೊದಗಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಸರಿಯಾದ ನಾಯಕನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಯುವಕರು ಮತದಾನ ಮಾಡುವ ಮೂಲಕ ಸುತ್ತಲಿನ ಮತದಾರರನ್ನು ಜಾಗ್ರತಗೊಳಿಸುವ ಅವಶ್ಯಕತೆಯಿದೆ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ತಿಳವಳ್ಳಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಎಂ.ಕೆ. ಕನ್ನೇಶ್ವರ, ವಿದ್ಯಾರ್ಥಿಗಳಲ್ಲಿ ಓದು ಪರೀಕ್ಷೆಗಾಗಿ ಸೀಮಿತಗೊಳ್ಳಬಾರದು. ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಕಾರಿಯಾಗಬೇಕು. ನಮ್ಮ ಜ್ಞಾನ ಸಾಮಾಜಿಕ ಕಾರ್ಯಗಳಿಗೆ ಬಳಕೆಯಾಗಬೇಕು. ಚುನಾವಣಾ ಸಂದರ್ಭದಲ್ಲಿ ಸ್ವಯಂ ಚಿಂತನೆ ನಡೆಸಿ ಸಮಾಜದ ಒಳಿತಿಗೆ ಶ್ರಮಿಸುವ ವ್ಯಕ್ತಿಯ ಆಯ್ಕೆಗೆ ಸಹಕಾರಿಯಾಗಬೇಕು ಎಂದರು. ಅನ್ನಪೂರ್ಣ ಪಾಟೀಲ ಸಂಗಡಿಗರು ಪ್ರಾರ್ಥಿಸಿದರು. ಪ್ರಕಾಶ ಹೊಳಲದ ಸ್ವಾಗತಿಸಿದರು. ಉಮೇಶ ಕುಬಸದ ನಿರೂಪಿಸಿದರು. ನಂದಿನಿ ಮಾಳದಕರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

