ನಾಮಪತ್ರ ಸಲ್ಲಿಕೆ ಶುರು: ಕೈ ಆಯ್ಕೆ ಕಗ್ಗಂಟು
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 19
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿರುವುದು ಕಾಂಗ್ರೆಸ್ ಹಾಗೂ ಇತರ ಎಲ್ಲ ಪಕ್ಷಗಳ ಕಾರ್ಯಕರ್ತರ ಕುತೂಹಲಕ್ಕೆ ಕಾರಣವಾಗಿದೆ. ಇಂದು ಸಂಜೆ, ನಾಳೆ ಬೆಳಗ್ಗೆ, ಇನ್ನು ಕೆಲವೇ ಕ್ಷಣ... ಹೀಗೆ ಹಾವೇರಿ ಕ್ಷೇತ್ರದ ಜನತೆ ಕೈ ಅಭ್ಯರ್ಥಿ ಹೆಸರು ಘೋಷಣೆಗೆ ಪ್ರತಿ ಕ್ಷಣವನ್ನೂ ಕುತೂಹಲದಿಂದ ಕಾಯುತ್ತಿದ್ದಾರೆ.
ಕೆಲವು ದಿನಗಳಿಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿಸಿದ್ದರೂ ಇದುವರೆಗೆ ಹೆಸರು ಅಂತಿಮಗೊಳಿಸಲು ಕಾಂಗ್ರೆಸ್ನಿಂದ ಸಾಧ್ಯವಾಗಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ, ಜೆಡಿಎಸ್ನಿಂದ ರವಿ ಮೆಣಸಿನಕಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಸಾಹಿತಿ ಚಂದ್ರಶೇಖರ ಪಾಟೀಲರೂ ಕನ್ನಡ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.
ಗೊಂದಲದಲ್ಲಿ ಕೈ ಕಾರ್ಯಕರ್ತರು: ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಸಲೀಂ ಅಹ್ಮದ್ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ್ ನಡುವೆ ಟಿಕೆಟ್ಗೆ ಪೈಪೋಟಿ ನಡೆದಿದೆ. ಇಬ್ಬರೂ ದೆಹಲಿಯಲ್ಲೇ ಬೀಡು ಬಿಟ್ಟಿದ್ದು, ಟಿಕೆಟ್ ಗಿಟ್ಟಿಸಿಕೊಳ್ಳಲು ಅಂತಿಮ ಹಂತದಲ್ಲಿ ತೀವ್ರ ಕಸರತ್ತು ನಡೆಸಿದ್ದಾರೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಪ್ರಶಾಂತ ದೇಶಪಾಂಡೆ ಹೆಸರು ಘೋಷಣೆಯಾಗಿದೆ. ಧಾರವಾಡ ಹಾಗೂ ಹಾವೇರಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಗೊತ್ತಾಗುವ ಮುಹೂರ್ತ ಮಾತ್ರ ಕೂಡಿ ಬಂದಿಲ್ಲ. ಇದು ಕುತೂಹಲ ಹೆಚ್ಚಿಸುವ ಜತೆಗೆ, ಅಸಮಾಧಾನಕ್ಕೂ ಕಾರಣವಾಗಿದೆ. ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದರೂ ಇನ್ನೂ ಅಭ್ಯರ್ಥಿ ಆಯ್ಕೆಯೇ ಆಗದಿರುವುದು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ.
ಧಾರವಾಡ ಕ್ಷೇತ್ರಕ್ಕೆ ವಿನಯ ಕುಲಕರ್ಣಿ ಹೆಸರು ಕೇಳಿಬರುತ್ತಿರುವುದರಿಂದ ಹಾವೇರಿ ಕ್ಷೇತ್ರದಿಂದ ಸಲೀಂ ಅಹ್ಮದ್ಗೆ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಲಿಂಗಾಯತ ಸಮುದಾಯದ ಮತಗಳು ಕ್ಷೇತ್ರದಲ್ಲಿ ಹೆಚ್ಚಿರುವುದರಿಂದ ಅದೇ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಶಿವಕುಮಾರ ಉದಾಸಿ ಅವರಿಗೆ ತೀವ್ರ ಪೈಪೋಟಿ ನೀಡಬಹುದು ಹಾಗೂ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದು ಕೈ ಮುಖಂಡರ ನಿಲುವು.
ಆದರೆ, ಅಲ್ಪಸಂಖ್ಯಾತರ ಮತಗಳೂ ಗಣನೀಯ ಪ್ರಮಾಣದಲ್ಲಿದ್ದು, ಸಲೀಂ ಅಹ್ಮದ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಕಳೆದ ಬಾರಿ ಅವರು ಸೋತಿದ್ದರಿಂದ ಈ ಬಾರಿ ಮತ್ತೊಂದು ಅವಕಾಶ ಸಿಕ್ಕರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರವೂ ಇದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಇದುವರೆಗೆ ಗುಟ್ಟು ಬಿಟ್ಟುಕೊಡುತ್ತಿಲ್ಲ. ಆದ್ದರಿಂದ ಇಂದು, ನಾಳೆ ಎಂಬ ನಿರೀಕ್ಷೆ ಇನ್ನೂ ಮುಂದುವರಿದೆ.
- ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

