ಚುನಾವಣೆಯಲ್ಲಿ ಸುರಕ್ಷಿತ ಮತಯಂತ್ರ ಬಳಕೆ
ಹಾವೇರಿ: ಪ್ರಸಕ್ತ ಲೋಕಸಭಾ ಚುನಾವಣೆಗೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸುಧಾರಿತ ಹಾಗೂ ಹೆಚ್ಚು ಸುರಕ್ಷತಾ ವ್ಯವಸ್ಥೆ ಇರುವ ಮತಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೂ ಆಗಿರುವ ಎಂ. ಮಂಜುನಾಥ ನಾಯಕ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಹಾವೇರಿ ಕ್ಷೇತ್ರಕ್ಕೆ ಹೊಸದಾಗಿ 2013ರ ಮಾದರಿಯ 1590 ಕಂಟ್ರೋಲ್ ಯೂನಿಟ್ ಹಾಗೂ 2020 ಬ್ಯಾಲೆಟ್ ಯೂನಿಟ್ಗಳನ್ನು ಒದಗಿಸಿದ್ದಾರೆ. ಇದು ಬಿಇಎಲ್ನಿಂದ ಪೂರೈಕೆಯಾಗಿದ್ದು, ಈ ಮತಯಂತ್ರಗಳು ಸ್ವತಃ ತಪಾಸಣೆ ಮಾಡುವ ತಂತ್ರಾಂಶ ಹೊಂದಿವೆ. ಅಗತ್ಯವಿದ್ದಲ್ಲಿ ಒಂದು ಕಂಟ್ರೋಲ್ ಯೂನಿಟ್ಗೆ 29 ಬ್ಯಾಲೆಟ್ ಯೂನಿಟ್ ಜೋಡಿಸುವ ವ್ಯವಸ್ಥೆಯಿದ್ದು, ಬ್ಯಾಲೆಟ್ ಯೂನಿಟ್ಗೆ ಬ್ಯಾಟರಿ ಅಳವಡಿಸುವ ಸೌಲಭ್ಯವಿದೆ.
ಮತದಾನದ ವೇಳೆ ಸಣ್ಣ ದೋಷ ಕಂಡುಬಂದರೂ ಅದನ್ನು ಕಂಟ್ರೋಲ್ ಯೂನಿಟ್ ಮಾಹಿತಿ ನೀಡುತ್ತದೆ. ಮತಯಂತ್ರದ ಸುರಕ್ಷತೆಗಾಗಿ ಡೆಸ್ಟ್ರೋಯಬಲ್ ಕೀ ಹಾಗೂ ಬ್ಯಾಲೆಟ್ ಯೂನಿಟ್ಗಳು ಟ್ಯಾಂಪರ್ ಪ್ರೂಫ್ ಅಳವಡಿಸಲಾಗಿದೆ. ಈ ಮತಯಂತ್ರಗಳನ್ನು ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದರು.
3 ಪ್ರಕರಣ ದಾಖಲು: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇದುವರೆಗೆ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 3 ಪ್ರಕರಣಗಳು ದಾಖಲಾಗಿವೆ. ರಾಣಿಬೆನ್ನೂರಿನಲ್ಲಿ ಪರವಾನಗಿ ಪಡೆಯದೇ ಬಿಜೆಪಿ ಸಭೆ ನಡೆಸಿದ್ದು, ಹಾವೇರಿ ಹಾಗೂ ಹಿರೇಕೆರೂರಿನಲ್ಲಿ ಆಮ್ ಆದ್ಮಿ ಪಕ್ಷದಿಂದ ಪರವಾನಗಿ ಪಡೆಯದೇ ಸಭೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆಗೆ ಸಂಬಂಧಿಸಿದಂತೆ 25 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿ: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ 7 ತಾಲೂಕುಗಳಲ್ಲಿ 1406 ಮತಗಟ್ಟೆ ಪ್ರದೇಶದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಮಾ. 16ರವರೆಗೆ ಸಾರ್ವಜನಿಕರಿಂದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿತ್ತು. ಈವರೆಗೆ ಸುಮಾರು 34 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ವಿಲೇವಾರಿ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಮಾ. 23ರೊಳಗೆ ಪಟ್ಟಿ ಅಂತಿಮಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಇದುವರೆಗೆ ಇಬ್ಬರು ಅಭ್ಯರ್ಥಿಗಳಿಂದ 3 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಮಂಜುನಾಥ ನಾಯಕ ತಿಳಿಸಿದರು. ಮಾಧ್ಯಮಗಳಿಗೆ ಅಭ್ಯರ್ಥಿಗಳು ಜಾಹೀರಾತು ನೀಡುವ ಮುನ್ನ ಪರವಾನಗಿ ಪಡೆಯುವುದು ಅವಶ್ಯವಿದೆ. ಅದಕ್ಕಾಗಿ ಎಂಸಿಎಂಸಿ ಸಮಿತಿ ರಚಿಸಲಾಗಿದ್ದು, ಅಭ್ಯರ್ಥಿಗಳು ಸಮಿತಿಯಿಂದ ಪರವಾನಗಿ ಪಡೆದ ನಂತರವೇ ಜಾಹೀರಾತು ನೀಡಬೇಕು. ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಚುನಾವಣಾ ವೆಚ್ಚ ವೀಕ್ಷಕರಾಗಿ ವಸಂತ ಗೇಸನ್ ಅವರು ಆಗಮಿಸಿದ್ದಾರೆ. ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಮಾಹಿತಿ ಪಡೆಯಲು ಕಂಟ್ರೋಲ್ ರೂಂ (ದೂ.ಸಂಖ್ಯೆ-08375-249131, 32, 33, 34, 35, 36, 41, 42, 43) ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

