ರೋಡ್ ಶೋ ನಡೆಸಿ ಉದಾಸಿ ಶಿವಕುಮಾರ ನಾಮಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಹಾವೇರಿ ಮಾ. 24
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ರೋಡ್ ಶೋ ನಡೆಸಿ, ಪುನರಾಯ್ಕೆ ಬಯಸಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಸಿ.ಎಂ. ಉದಾಸಿ, ಗದಗ ಮತ್ತು ಹಾವೇರಿಯ ಬಿಜೆಪಿ ಮುಖಂಡರು ಹಾಗೂ ತಾರಾ ಪ್ರಚಾರಕಿ ಶ್ರುತಿ ಅವರೊಂದಿಗೆ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಘರ್ ಘರ್ ಮೋದಿ.. ಎಂಬ ಘೋಷಣೆ ಕೂಗಿದರೆ, ತೆರೆದ ವಾಹನದಲ್ಲಿ ನಿಂತಿದ್ದ ಅಭ್ಯರ್ಥಿ ಶಿವಕುಮಾರ ಉದಾಸಿ ಕೈ ಮುಗಿದ ತಮ್ಮನ್ನು ಬೆಂಬಲಿಸುವಂತೆ ವಿನಂತಿಸಿದರು. ನಾಯಕರು ಸಾರ್ವಜನಿಕರತ್ತ ಕೈಬೀಸಿ ಉದಾಸಿಯವರನ್ನು ಬೆಂಬಲಿಸುವಂತೆ ಕೋರಿದರು.
ಮೆರವಣಿಗೆ ಬಳಿಕ ಮಾಗಾವಿ ಚೇಂಬರ್ಸ್ ಹಿಂಭಾಗದ ಬಯಲಿನಲ್ಲಿ ಕಾರ್ಯಕರ್ತರು ಸವಾವೇಶಗೊಂಡರು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಮೋದಿ ಗುಜರಾತ್ ರಾಜ್ಯದಲ್ಲಿ 24 ಗಂಟೆ ನಿರಂತರ ವಿದ್ಯುತ್, ಸಮರ್ಪಕ ಕುಡಿಯುವ ನೀರು, ರೈತರ ಹೊಲಗಳಿಗೆ ನೀರು ಒದಗಿಸಿ ಮಾದರಿ ರಾಜ್ಯವನ್ನಾಗಿಸಿದ್ದಾರೆ. ಅವರು ಪ್ರಧಾನಿಯಾದರೆ ಭಾರತವನ್ನು ಪ್ರಪಂಚದಲ್ಲಿ ಮಾದರಿ ರಾಷ್ಟ್ರವನ್ನಾಗಿಸುತ್ತಾರೆ. ಆದ್ದರಿಂದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲಪಡಿಸಿ ಎಂದರು.
ಮೋದಿ ಗಾಳಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಎಷ್ಟು ಬೀಸಿದೆ ಎಂದರೆ ಎದುರಾಳಿಯಾಗಿ ನಿಲ್ಲಲು ಕಾಂಗ್ರೆಸ್ನಲ್ಲಿ ಯಾರೂ ಮುಂದೆ ಬರುತ್ತಿಲ್ಲ. ಕೃಷ್ಣ ಭೈರೇಗೌಡ, ಪ್ರಕಾಶ ಹುಕ್ಕೇರಿ, ಎಚ್. ಆಂಜನೇಯ ಸೇರಿದಂತೆ ಅನೇಕ ಸಚಿವರೇ ತಮಗೆ ಟಿಕೆಟ್ ಬೇಡ ಎನ್ನುತ್ತಿದ್ದರೆ, ಅವರನ್ನು ನಿಲ್ಲುವಂತೆ ಪಕ್ಷ ಒತ್ತಡ ಹೇರುತ್ತಿದೆ. ಇಂಥ ದುಸ್ಥಿತಿ ಕಾಂಗ್ರೆಸ್ಗೆ ಬಂದಿದೆ. ಹಾವೇರಿ ಜಿಲ್ಲೆಯಲ್ಲಂತೂ ಎದುರಾಳಿ ಇನ್ನೂ ಬಂದಿಲ್ಲ. ಮೋದಿ ಪ್ರಧಾನಿಯಾದ ತಕ್ಷಣ ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿಯುತ್ತಾರೆ. ಸರ್ಕಾರವೂ ಉರುಳುತ್ತದೆ ಎಂದರು.
ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಮೋದಿ ಪ್ರಧಾನಿಯಾಗುವುದು ಅಗತ್ಯವಿದೆ. ಅದಕ್ಕಾಗಿ ಇಂದು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥ ನಾಯಕತ್ವ ಅಗತ್ಯವಿದ್ದು, ಅದು ಮೋದಿ ಅವರಲ್ಲಿದೆ ಎಂದರು.
ನಟಿ ಶ್ರುತಿ ಮಾತನಾಡಿ, ಆಂಗ್ಲರ ಕಪಿಮುಷ್ಠಿಯಿಂದ ದೇಶ ಬಿಡುಗಡೆಗೊಳಿಸಲು ಮಹಾತ್ಮ ಗಾಂಧಿ ಶ್ರಮಿಸಿದ ಮಾದರಿಯಲ್ಲಿ ಪ್ರಸ್ತುತ ಕಾಂಗ್ರೆಸ್ ಮುಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ಅವರನ್ನು ಜನ ಬೆಂಬಲಿಸಬೇಕು ಎಂದರು.
ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ನೆಹರು ಓಲೇಕಾರ, ಜಿ. ಶಿವಣ್ಣ, ಕಳಕಪ್ಪಬಂಡಿ, ಶ್ರೀಶೈಲ ಬಿದರೂರ, ರಾಮಣ್ಣ ಲಮಾಣಿ, ಬೋಜರಾಜ ಕರೂದಿ, ಭಾರತಿ ಜಂಬಗಿ ಇತರರಿದ್ದರು.
ಭಾರತ ಆರ್ಥಿಕ, ತಾಂತ್ರಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಗುಜರಾತಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯಥಿಯಾಗಿರುವ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯಾಗಬೇಕಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ದುರಾಡಳಿತದಿಂದ ಜನತೆಬದಲಾವಣೆ ಬಯಸುತ್ತಿದ್ದಾರೆ. ದೇಶದ ರಕ್ಷಣೆ, ಏರುತ್ತಿರುವ ಬೆಲೆ ಇಳಿಕೆ, ರೈತರ ಸಮಸ್ಯೆ ಬಗೆಹರಿಸಲು ಮೋದಿ ಪ್ರಧಾನಿಯಾಗುವುದು ಅಗತ್ಯವಿದೆ. ಆದ್ದರಿಂದ ನರೇಂದ್ರ ಮೋದಿ ಪ್ರಧಾನಿಯಾಗಿಲು ಕ್ಷೇತ್ರದ ಮತದಾರರು ತಮ್ಮನ್ನು ಬೆಂಬಲಿಸಬೇಕು.
- ಶಿವಕುಮಾರ ಉದಾಸಿ,
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

