ಹಾವೇರಿ

ಹೋಳಿಹಬ್ಬ ಅರ್ಥಪೂರ್ಣ ಆಚರಣೆ: ಹರ್ಷ

Published On :

ಹಾನಗಲ್ಲ: ಹೋಳಿ ದೀಪವನ್ನು ಸ್ಥಾಪಿಸುವ ಮೂಲಕ ಹಿರಿಯ, ಕಿರಿಯರೆಲ್ಲ ಸೇರಿ ಸಂಭ್ರಮ ಹಾಗೂ ಅರ್ಥಪೂರ್ಣ ಆಚರಣೆಯಾಗಿ ಹೋಳಿಹಬ್ಬ ಹರ್ಷ ತರಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರು ಕರೆ ನೀಡಿದರು. ಹಾನಗಲ್ಲಿನಲ್ಲಿ ಹೋಳಿ ಮುನ್ನಾ ದಿನ ರಂಗಿನ ರಾತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದ ಹಬ್ಬಗಳ ಆಚರಣೆಗಳಲ್ಲೊಂದಾದ ಸಂಭ್ರಮದ ಹೋಳಿ ಎಲ್ಲರನ್ನೂ ಒಂದುಗೂಡಿಸುವಂತಹದ್ದಾಗಿದೆ. ಹೋಳಿಯ ಸಂದರ್ಭದಲ್ಲಿ ನಡೆಯುವ ವಿವಿಧ ಆಟಗಳು, ಹಲಗೆ ಬಾರಿಸುವುದು, ಸೋಗಿನ ಬಂಡಿ ಇವೆಲ್ಲ ಕೇವಲ ಮನರಂಜನೆ ಅಲ್ಲ. ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಸಂದರ್ಭಗಳು. ಹಾನಗಲ್ಲಿನಲ್ಲಿ ಎಲ್ಲ ಜಾತಿ, ಮತ, ಪಂಥಗಳ ಭೇದವಿಲ್ಲದೆ ಹಿರಿಯರು, ಕಿರಿಯರೂ ಸೇರಿ ಆಚರಿಸುತ್ತಿದ್ದ ಸಂದರ್ಭ ನೆನಪಿಸಿಕೊಂಡು ಊರಿನಲ್ಲಿ ಹೋಳಿ ಸಂಭ್ರಮ ಆಚರಿಸಿದ ಕಾಲ ಮತ್ತೆ ಬರಲಿ ಎಂದು ಆಶಯ ವ್ಯಕ್ತಪಡಿಸಿದರು. ಹೋಳಿಗೆ ಪೂರಕವಾಗಿ ಹೋಳಿ ದೀಪದ ಮೆರವಣಿಗೆ ಮಾಡಿ, ಒಂದು ಕಡೆ ಈ ದೀಪ ಸ್ಥಾಪಿಸಬೇಕು. ಕಾಮ ದಹನದ ಸಂದರ್ಭದಲ್ಲಿ ಇದೇ ದೀಪದ ಮೂಲಕ ಕಾಮ ದಹನವಾಗಬೇಕು. ಹೀಗೆ ಕಾಮ ದಹನವನ್ನು ಒಂದು ಸಾಂಸ್ಕೃತಿಕ ಸಿರಿಯನ್ನಾಗಿ ಮಾಡಲು ಎಲ್ಲರೂ ಜಾತಿ, ವಯಸ್ಸು ಭೇದವಿಲ್ಲದೆ ಆಚರಿಸಬೇಕು. ಇದಕ್ಕಾಗಿ ತಿಂಗಳ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ ಮಾತನಾಡಿ, ಹೋಳಿ ಹಬ್ಬಕ್ಕೂ ನಾಡಿನ ಜನಪದ ಜೀವನಕ್ಕೂ ಅನ್ಯೋನ್ಯ ಸಂಬಂಧವಿದೆ. ಹಿಂದೂ ಸಂಪ್ರದಾಯ ವರ್ಷದ ಕಡೆಯ ಹಬ್ಬವಾಗಿರುವ ಹೋಳಿ ಕೃಷಿ ಸಮುದಾಯ ಸಂಭ್ರಮಿಸಿವ ಹಬ್ಬವಾಗಿದೆ. ತನ್ನ ವರ್ಷದ ಎಲ್ಲ ಸುಖ, ದುಃಖಗಳನ್ನು ಮರೆತು ಮುಂಬರುವ ಯುಗಾದಿಗೆ ಹೊಸ ಹಾದಿಗೆ ಹೆಜ್ಜೆ ಇಡಲು ಮೈಗೆ ಬಣ್ಣ ಬಳಿದು ಸಂಭ್ರಮಿಸುವ ಹಬ್ಬ ಇದಾಗಿದೆ. ಹಿಂದೂ ಸಂಪ್ರದಾಯದ ಎಲ್ಲ ಹಬ್ಬಗಳಿಗೂ ವೈಜ್ಞಾನಿಕ ಅಂಶಗಳಿವೆ. ಮನುಷ್ಯನಿಗೆ ಕಾಲ ಕಾಲಕ್ಕೆ ಬೇಕಾಗುವ ಆಚರಣೆ ಹಾಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧಗಳಿವೆ. ಕೃಷಿ ಸಮುದಾಯವನ್ನೇ ಮುಖ್ಯವಾಗಿಟ್ಟುಕೊಂಡು ರೂಪಗೊಂಡ ಹಬ್ಬಗಳು ಸಾಮೂಹಿಕ ಜೀವನಕ್ಕೆ ಸಂತಸಕ್ಕೆ ಸ್ಫೂರ್ತಿದಾಯಕವಾದವುಗಳು ಎಂದರು. ಕದಂಬ ಯುವಶಕ್ತಿ ಸಂಘಟನೆ ಅಧ್ಯಕ್ಷ ಗುರುರಾಜ ನಿಂಗೋಜಿ ಹಲಗೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಪುರಸಭಾಧ್ಯಕ್ಷ ಹನುಮಂತಪ್ಪ ನಾಗಜ್ಜನವರ, ಪುರಸಭಾ ಸದಸ್ಯ ಸಂತೋಷ ಸುಣಗಾರ, ಮಾಲಿಂಗಪ್ಪ ಅಕ್ಕಿವಳ್ಳಿ, ಮಹೇಶ ಕಾಗಿನೆಲ್ಲಿ, ನಾಗೇಂದ್ರ ತುಮರಿಕೊಪ್ಪ, ಚಂದ್ರಕಾಂತ ಬೇದ್ರೆ, ಮೋಹನ ಬಸವಂತರಕರ, ಮಂಜುನಾಥ ಗೌಳಿ, ಪರಶುರಾಮ ಬಡಿಗೇರ, ಬಾಬಣ್ಣ ರೇವಡಿಗಾರ, ಸಂತೋಷ ಸುಣಗಾರ, ರವಿಚಂದ್ರ ಪುರೋಹಿತ, ದೀಪಕ್ ಕಲಾಲ, ವಿನಯ ಬಂಕನಾಳ, ರಾಜಶೇಖರ ಹುರಕಡ್ಲಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಏ. 2ರಿಂದ ಸಿಇಟಿ ತರಬೇತಿ ಶಿಬಿರ
ಹಾವೇರಿ: ಕೆಎಲ್‌ಇ ಸಂಸ್ಥೆಯ ಜಿ.ಎಚ್. ಕಾಲೇಜಿನಲ್ಲಿ ಸಿಇಟಿ ತರಬೇತಿ ಶಿಬಿರ ಏ. 2ರಿಂದ ಪ್ರಾರಂಭವಾಗಲಿದೆ. ಸಿಇಟಿ ತರಬೇತಿ ಕಾರ್ಯಕ್ರಮವನ್ನು ಸಿಬಿಎಸ್‌ಇ ಹೊಸ ಪಠ್ಯಕ್ರಮಕ್ಕೆ ಅನುಗುಣವಾಗಿ ಬೆಂಗಳೂರು, ಬೆಳಗಾವಿ, ನಿಪ್ಪಾಣಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಧಾರವಾಡ, ಗದಗ ಮಹಾವಿದ್ಯಾಲಯಗಳ ಅನುಭವಿ ಉಪನ್ಯಾಸಕರುಗಳಿಂದ ತರಬೇತಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 1000 ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿ ನೀಡಲು ಯೋಜಿಸಲಾಗಿದ್ದು, 60 ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದುಕೊಂಡಿದ್ದಾರೆ. 25 ದಿನಗಳವರೆಗೆ ನಿರಂತರ ಜರುಗಲಿರುವ ಈ ತರಬೇತಿ ಶಿಬಿರ ಪ್ರತಿದಿನ 6 ಗಂಟೆವರೆಗೆ ನುರಿತ, ಅನುಭವಿ ತಜ್ಞರು ಮಾರ್ಗದರ್ಶನ ಮಾಡಲಿದ್ದಾರೆ. ಪ್ರವೇಶ ಪಡೆದುಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಏ. 1ರ ಒಳಗಾಗಿ ಜಿ.ಎಚ್. ಕಾಲೇಜಿನ ಕಚೇರಿ ಸಿಬ್ಬಂದಿ ಗಿರೀಶ ಹಿರೇಮಠ ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.