ಹಾವೇರಿ

ರೈತರು ರಾಜಕೀಯವಾಗಿ ಸಂಘಟಿತರಾಗಲಿ

Published On :

ಹಿರೇಕೆರೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಅಪ್ರಾಮಾಣಿಕರು ಹೆಚ್ಚಾಗಿದ್ದು, ಎಲ್ಲ ಪಕ್ಷಗಳು ಪ್ರಾಮಾಣಿಕವಾಗಿ ರೈತರ ಬಗ್ಗೆ ಚಿಂತನೆ ಮಾಡದೆ, ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರೈತರನ್ನು ನಿರ್ಲಕ್ಷಿಸುತಿದ್ದಾರೆ. ಆದ್ದರಿಂದ ರೈತರು ರಾಜಕೀಯವಾಗಿ ಸಂಘಟಿತರಾಗಬೇಕೆಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಕರೆ ನೀಡಿದರು.
ಅವರು ಪಟ್ಟಣದ ತರಳಬಾಳು ಸಾಂಸ್ಕೃತಿಕ ಭವನದಲ್ಲಿ ರೈತಸಂಘದ ವತಿಯಿಂದ ಏರ್ಪಡಿಸಿದ್ದ ತಾಲೂಕು ರೈತ ಸಂಘದ ನೂತನ ವಾಹನ ಪೂಜಾ ಕಾರ್ಯಕ್ರಮ ಹಾಗೂ ರೈತ ಸಂಘದ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೈತರು ತ್ಯಾಗ ಜೀವಿಗಳು. ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಬದುಕನ್ನು ಕಟ್ಟಿಕೊಂಡವರು. ಇವರ ಬದುಕು ಹಸನಾಗಬೇಕು. ಆದರೆ, ಆಳುವ ಸರ್ಕಾರಗಳು ಅಪ್ರಾಮಾಣಿಕತೆಯಿಂದ ಆಡಳಿತ ನಡೆಸಿದ್ದರ ಫಲವಾಗಿ ದೇಶದ ವ್ಯವಸ್ಥೆ ಹಾಳಾಗಿದೆ. ಬೆಂಬಲ ಬೆಲೆ ನೀಡದೆ ರೈತರನ್ನು ದಿವಾಳಿ ಮಾಡಿರುವುದು ಸರ್ಕಾರಗಳ ಹೊಣೆಗೇಡಿತನ. ಲಂಚಗುಳಿತನ ಕಿತ್ತೆಸೆಯಲು ರೈತರು ರಾಜಕೀಯವಾಗಿ ಸಂಘಟಿತರಾಗಬೇಕು. ಮುಂಬರುವ ವಿಧಾನಸಭೆಗೆ ರಾಜ್ಯದಲ್ಲಿ ಕನಿಷ್ಟ 15 ರೈತ ಸಂಘದ ಸದಸ್ಯರನ್ನು ಆಯ್ಕೆ ಮಾಡಬೇಕು. ಈ ಕಾರ್ಯ ಹಿರೇಕೆರೂರು ತಾಲೂಕಿನಿಂದಲೇ ಆರಂಭಗೊಳ್ಳಬೇಕು. ವಿಧಾನ ಸಭೆಯಲ್ಲಿ ರೈತ ಸಂಘದ ಕನಿಷ್ಠ 15 ಶಾಸಕರು ಇದ್ದರೆ ರೈತರ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಕಂಡುಹಿಡಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ರೈತಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, 1989 ರಲ್ಲಿ ಆರಂಭಗೊಂಡ ರೈತ ಸಂಘಟನೆ 25 ವಸಂತಗಳನ್ನು ಪೂರೈಸಿದ್ದು, ದುಡಿಯುವ ರೈತರ ಪರವಾಗಿ ಹೋರಾಟ ಮಾಡಿ ನ್ಯಾಯ ಪಡೆಯುವಲ್ಲಿ ಯಶ್ವಸಿಯಾಗಿದೆ. ರೈತ ಸಂಘಟನೆಗೆ ರೈತರೇ ಆಧಾರ ಸ್ತಂಭ. ಹೋರಾಟಕ್ಕೆ ಶಾಂತಿ ಮತ್ತು ಪ್ರಾಮಾಣಿಕತೆ ಅಸ್ತ್ರಗಳಾಗಿದ್ದು ಇವುಗಳಿಂದ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಅನ್ನದಾತನ ರಕ್ಷಣೆ ಮಾಡುವುದು ರೈತ ಸಂಘದ ಮುಖ್ಯ ಉದ್ದೇಶವಾಗಿದೆ. ರೈತರಿಂದ ಸುಮಾರು ರು. 9 ಲಕ್ಷ ಹಣ ಸಂಗ್ರಹಿಸಿ ರೈತರ ಸೇವೆಗೆ ಸಂಚರಿಸಲು ಹೊಸ ವಾಹನ ಖರಿದಿಸಿ ಇನ್ನೂ ಹೆಚ್ಚಿನ ಸೇವೆಗೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು. ತಾಲೂಕು ರೈತ ಸಂಘದ ಗೌರವಾಧ್ಯಕ್ಷ ಸೋಮಶೇಖರಪ್ಪ ಚಪ್ಪರದಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಸಂಚಾಲಕ ಮಹಮ್ಮದ ಗೌಸಸಾಬ್, ರುದ್ರಗೌಡ ಕಾಡನಗೌಡ್ರ, ಗಂಗಣ್ಣ ಎಲಿ, ಸುರೇಶ ಚಲವಾದಿ, ಚಿಕ್ಕಪ್ಪ ಚತ್ರದ, ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಬಳ್ಳಾರಿ, ತಾಲೂಕು ರೈತ ಸಂಘದ ಅಧ್ಯಕ್ಷ ಬಸನಗೌಡ ಗಂಗಪ್ಪನವರ, ರುದ್ರಪ್ಪ ಆಣೂರ, ಗಂಗನಗೌಡ್ರ ಮುದಿಗೌಡ್ರ, ಶಂಕರಗೌಡ ಮಕ್ಕಳ್ಳಿ, ಶಂಕರಗೌಡ ಶಿರಗಂಬಿ, ವೀರನಗೌಡ ಪಾಟೀಲ ಉಪಸ್ಥಿತರಿದ್ದರು. ಪ್ರಭುಗೌಡ ಪ್ಯಾಟಿ ಸ್ವಾಗತಿಸಿದರು. ಜಗದೀಶ ಕೆಳಗಿನಮನಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.