ದೇವದಾಸಿ ಪದ್ಧತಿ ತಡೆಗೆ ಸ್ವಾಮೀಜಿ ಪಾದಯಾತ್ರೆ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 28
ದೇವದಾಸಿ ಪದ್ಧತಿ ನಿಲ್ಲಿಸಲು 16ಕ್ಕೂ ಹೆಚ್ಚು ಮಠಾಧೀಶರು ಶುಕ್ರವಾರ ತಾಲೂಕಿನ ಹಿರೇಸಿಂದೋಗಿಯ ದೇವದಾಸಿಯರ ಮನೆ, ಮನೆಗೆ ಪಾದಯಾತ್ರೆ ಬೆಳೆಸಿ ಮಕ್ಕಳನ್ನು ಈ ಅನಿಷ್ಟ ಪದ್ಧತಿಗೆ ದೂಡಬೇಡಿ ಎಂದು ಜಾಗೃತಿ ಮೂಡಿಸಿದರು. ಶ್ರೀಗಳ ಮಾತಿಗೆ ಕೆಲ ಮಹಿಳೆಯರು ಕಣ್ಣೀರಿಟ್ಟು, ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ದೇವದಾಸಿ ಪದ್ಧತಿಗೆ ಬಿಡುವುದಿಲ್ಲ ಎಂದು ಮಾತು ಕೊಟ್ಟರು.
ಹಿರೇಸಿಂದೋಗಿಯಲ್ಲಿ ಅನೇಕ ವರ್ಷಗಳಿಂದ ಹಬ್ಬದ ದಿನಗಳಲ್ಲಿ ಯುವತಿಯರನ್ನು ದೇವದಾಸಿಯರನ್ನಾಗಿ ಮಾಡುತ್ತಿದ್ದರು. ಇಲ್ಲಿ ದೇವದಾಸಿಯರ ಕಾಲನಿಯೇ ನಿರ್ಮಾಣವಾಗಿತ್ತು. ಈ ಪದ್ಧತಿಗೆ ಮುಕ್ತಿ ಹಾಡಲು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಪ್ರಗತಿಪರ ಮಠಾಧೀಶರು ಜಾಗೃತಿ ಪಾದಯಾತ್ರೆ ನಡೆಸಿ ಮನೆ, ಮನೆಗೆ ತೆರಳಿ ಮಹಿಳೆಯರ ಮನಃ ಪರಿವರ್ತನೆಗೆ ಯತ್ನಿಸಿದರು.
ಅನಿಷ್ಟ ಪದ್ಧತಿ ಕೈಬಿಡಿ: ಸಮಾಜ ಎಷ್ಟೋ ಅಭಿವೃದ್ಧಿ ಹೊಂದಿದೆ. ಸರ್ಕಾರ ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಆದರೆ ಸಂಪ್ರದಾಯದ ಹೆಸರಿನಲ್ಲಿ ಈ ಪದ್ಧತಿಯನ್ನು ಮುಂದುವರಿಸಿರುವುದು ಸರಿಯಲ್ಲ. ದೇವದಾಸಿ ಪದ್ಧತಿಯನ್ನು ಕೈಬಿಡಿ ಎಂದು ನಿಡುಮಾಮಿಡಿ ಶ್ರೀಗಳು ಮನವಿ ಮಾಡಿದರು. ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ದೇವರ ಹೆಸರಿನಲ್ಲಿ ಈ ಅನಿಷ್ಟ ಪದ್ಧತಿ ಮುಂದುವರಿದಿದ್ದು ನಮ್ಮ ಸಮಾಜಕ್ಕೆ ಅವಮಾನಕರ. ಈ ಪದ್ಧತಿಯನ್ನು ಬಿಡಬೇಕು ಎಂದು ಕರೆ ನೀಡಿದರು.
ದೇವದಾಸಿಯರಿಗೆ ನಿರ್ಮಿಸಿದ ಪುನರ್ವಸತಿ ಕೇಂದ್ರದ ನೂರಾರು ಮನೆಗಳಿದ್ದು, ಶುಕ್ರವಾರ ಜಾಗೃತಿಗೆ ಸ್ವಾಮೀಜಿಗಳು ಬರುತ್ತಾರೆ ಎಂಬ ಮಾಹಿತಿ ತಿಳಿದ ಬಹುತೇಕರು ಮನೆಗೆ ಬೀಗ ಹಾಕಿ ಹೊರ ಹೋಗಿದ್ದರು. ಬೀಗ ಹಾಕಿರದ ಮನೆಗಳಿಗೆ ತೆರಳಿದ ಶ್ರೀಗಳು, ದೇವದಾಸಿ ಪದ್ಧತಿಯಿಂದಾಗುವ ದುಷ್ಪರಿಣಾಮದ ಬಗ್ಗೆ ವಿವರವಾಗಿ ತಿಳಿಸಿದರು. ಈ ಪದ್ಧತಿಯಿಂದ ದೂರವಾಗಲು ನೀವೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಕೋರಿದರು.
ಕಣ್ಣೀರಿಟ್ಟ ಮಹಿಳೆಯರು: ಕಾಲನಿಯ ಕೆಲ ಮಹಿಳೆಯರು ಸ್ವಾಮೀಜಿಗಳ ಕಾಲು ತೊಳೆದು ನಮಸ್ಕರಿಸುವಾಗ, ದೇವದಾಸಿ ಪದ್ಧತಿಯನ್ನು ಬಿಡಬೇಕು ಎಂಬ ಶ್ರೀಗಳ ಮಾತು ಕೇಳಿ, ಕಣ್ಣೀರಿಟ್ಟರು. ಈಗ ದೇವದಾಸಿಗೆ ಬಿಡುತ್ತಿಲ್ಲ. ನೀವು ಹೇಳುವುದು ಸರಿಯಿದೆ. ಇನ್ನು ಮುಂದೆ ಯಾರನ್ನೂ ದೇವದಾಸಿ ಮಾಡುವುದಿಲ್ಲ ಎಂದು ಶ್ರೀಗಳಿಗೆ ಮಾತು ಕೊಟ್ಟರು.
16ಕ್ಕೂ ಹೆಚ್ಚು ಮಠಾಧೀಶರು, ಪ್ರಗತಿಪರ ಸಂಘಟನೆಯ ಅಲ್ಲಮಪ್ರಭು ಬೆಟ್ಟದೂರ, ಎಚ್.ಎಸ್. ಪಾಟೀಲ್, ಮೈಲಪ್ಪ ಬಿಸರಳ್ಳಿ, ಭರಮಪ್ಪ ಬೆಲ್ಲದ, ಡಾ ಜ್ಞಾನಸುಂದರ, ಬಸವರಾಜ ಶೀಲವಂತರ, ಎಚ್.ವಿ. ರಾಜಾಭಕ್ಷಿ, ನಿತ್ಯಾನಂದ ಸ್ವಾಮೀಜಿ, ಜಿ. ನಾಗರಾಜ, ಮಹಿಳಾ ಹೋರಾಟಗಾರ್ತಿ ಸಾವಿತ್ರಿ ಮುಜುಮದಾರ, ಆಂಜನೇಯಪ್ಪ, ಬಸವರಾಜ ಆಕಳವಾಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

