ಹಾವೇರಿ

ಪತ್ನಿ ರುಂಡ ಹಿಡಿದು ಊರು ಸುತ್ತಿದ

Published On :

ಬ್ಯಾಡಗಿ: ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವೃದ್ದನೊಬ್ಬ ಪತ್ನಿ ರುಂಡವನ್ನೇ ಮಚ್ಚಿನಿಂದ ಕತ್ತರಿಸಿ ಗ್ರಾಮದಲ್ಲಿ ಪ್ರದರ್ಶನ ಮಾಡಿದ ಅಮಾನವೀಯ ಕೃತ್ಯ ತಾಲೂಕಿನ ಹಳೇ ಶಿಡೇನೂರು ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಆರೋಪಿಯನ್ನು ಶಿಡೇನೂರು ಗ್ರಾಮದ ಮಹ್ಮದ್ ಹನೀಫ್ ಎಂದು ಗುರುತಿಸಲಾಗಿದ್ದು, ಪತ್ನಿ ಜಹೀರಾಬಿ (55) ಮಲಗಿದ್ದ ವೇಳೆ ಆಕೆಯ ರುಂಡ ಕತ್ತರಿಸಿದ್ದಾನೆ. ಈ ದಂಪತಿಗೆ ನಾಲ್ವರು ಮಕ್ಕಳಿದ್ದು, ಹನೀಫ್ ಇತ್ತೀಚೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿ ರುಂಡ ಪ್ರದರ್ಶಿಸಿದ: ಪತ್ನಿಯ ತಲೆಯನ್ನು ಕಲ್ಲಂಗಡಿ ಹಣ್ಣಿನಂತೆ ಕತ್ತರಿಸಿದ ಹನೀಫ್ ಎಡಗೈಯಲ್ಲಿ ರುಂಡ ಹಾಗೂ ಬಲಗೈಯಲ್ಲಿ ಮಚ್ಚನ್ನು ಹಿಡಿದು ಗ್ರಾಮದ ಓಣಿ, ಬೀದಿಗಳಲ್ಲಿ ಸುತ್ತಿದ್ದನ್ನು ಕಂಡ ಗ್ರಾಮಸ್ಥರು ಭೀತರಾಗಿ, ಮನೆಯೊಳಗೆ ಧಾವಿಸಿ, ಬಾಗಿಲು ಹಾಕಿಕೊಂಡರು. ಕತ್ತರಿಸಿದ ತಲೆಯೊಂದಿಗೆ ಮೂರು ಕಿ.ಮೀ. ಸಾಗಿದ ಈತ, ಬ್ಯಾಡಗಿ ಪೊಲೀಸ್ ಠಾಣೆಯತ್ತ ನಡೆದ. ಜನರಿಂದ ಈ ಬಗ್ಗೆ ಮಾಹಿತಿ ಅರಿತ ಸಿಪಿಐ ಹಾಲಮೂರ್ತಿ ರಾವ್, ಪಿಎಸ್‌ಐ ಗಿರೀಶ್ ಹಾಗೂ ಸಿಬ್ಬಂದಿ, ದಾರಿ ಮಧ್ಯೆ ಹನೀಫ್‌ನನ್ನು ಸುತ್ತುವರೆದರು. ಆದರೆ, ಪತ್ನಿ ತಲೆಯನ್ನು ಯಾರಿಗೂ ಕೊಡುವುದಿಲ್ಲ ಎಂದು ಆರೋಪಿ ಪಟ್ಟು ಹಿಡಿದ. ಖುದ್ದಾಗಿ ಠಾಣೆಗೆ ಒಪ್ಪಿಸಿ, ಶರಣಾದ ಮೇಲೆ ಎಲ್ಲ ವಿವರ ಹೇಳುವುದಾಗಿ ತಿಳಿಸಿದ. ಪೊಲೀಸರು ಆತನ ಕೈಯಿಂದ ಮಚ್ಚನ್ನು ಚಾಣಾಕ್ಷತನದಿಂದ ಕಸಿದುಕೊಂಡು, ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು.
ಕೊಲೆಗೆ ವಿಫಲ ಯತ್ನ: ಮದುವೆ ದಿನದಿಂದಲೂ ಗಂಡ-ಹೆಂಡತಿ ನಡುವೆ ಜಗಳವಿತ್ತು. ಗ್ರಾಮಸ್ಥರು ಬುದ್ಧಿ ಮಾತು ಹೇಳಿದ್ದರು. ಇದನ್ನು ಲೆಕ್ಕಿಸಿದ ಹನೀಫ್ ಪತ್ನಿ ಜಹೀರಾಬಿಯನ್ನು ಕೊಲೆ ಮಾಡಲೆಂದೇ ಕೆಲ ವರ್ಷ ಹಿಂದೆ ಚೀಲದಲ್ಲಿ ತುಂಬಿ ನದಿಗೆ ಎಸೆಯುವ ವಿಫಲ ಯತ್ನ ನಡೆಸಿದ್ದ. ಕೆಲವೊಮ್ಮೆ ಶೀಲ ಶಂಕಿಸಿ ಕುದಿಯುವ ಎಣ್ಣೆಯಿಂದ ಚಿಲ್ಲರೆ ಹಣ ತೆಗೆಸುತ್ತಿದ್ದ ಎಂದೂ ತಿಳಿದು ಬಂದಿದೆ.
ಪೂರ್ವನಿಯೋಜಿತ ಕೃತ್ಯ: ಪತಿಯ ಕಾಟದಿಂದ ಬೇಸತ್ತ ಜಹೀರಾಬಿ ಇತ್ತೀಚೆಗೆ ಮಗಳ ಮನೆಯಲ್ಲಿ ತಂಗಿದ್ದಳು. ಆಕೆಯನ್ನು ಪುಸಲಾಯಿಸಿ ಮತ್ತೆ ಶಿಡೇನೂರು ಗ್ರಾಮಕ್ಕೆ ಕರೆತಂದ ಹನೀಫ್ ಕೊಲೆ ಸಂಚು ಮಾಡಿದ್ದ ಎನ್ನಲಾಗುತ್ತಿದೆ. ಹೆಂಡತಿ ಸರಿಯಾಗಿ ಊಟ, ಉಪಚಾರ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಹಾವೇರಿ ಎಸ್ಪಿ ಎನ್. ಶಶಿಕುಮಾರ್, ಅಧಿಕಾರಿಗಳು ಪರಿಶೀಲಿಸಿದರು. ಎಎಸ್‌ಐ ಕಡೂರ, ಕರೆಕಲ್ಲ, ನಾಗರಾಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.