ಹಾವೇರಿ

ಜನಸಾಮಾನ್ಯರ ಹಿತ ಮರೆತ ರಾಜ್ಯ ಸರ್ಕಾರ: ಬಂಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 5
ಆಡಳಿತಾರೂಢ ರಾಜ್ಯ ಕಾಂಗ್ರೆಸ್ ಅಸಮರ್ಪಕ ಆರ್ಥಿಕ ನೀತಿ ಹಾಗೂ ಸಂಪನ್ಮೂಲ ಕ್ರೊಡೀಕರಣ ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದು. ಇದೊಂದು ಜನವಿರೋಧಿ ಸರ್ಕಾರವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಸೋಮವಾರ ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾ ಬಿಜೆಪಿಯಿಂದ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ಮಾರುಕಟ್ಟೆಯಲ್ಲಿ ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಮಧ್ಯಮ ವರ್ಗದ ಜನರು ಜೀವನ ನಡೆಸುವುದು ದುರ್ಲಬವಾಗಿದೆ. ರಾಜ್ಯ ಸರ್ಕಾರ ಏಕಾಏಕಿ ಬಿಎಂಟಿಸಿ ಬಸ್ ಶೇ. 16 ಹಾಗೂ ಕೆಎಸ್ಆರ್ಸಿ ಬಸ್ ದರವನ್ನು ಶೇ 10.5ರಷ್ಟು ದರ ಏರಿಸಿದ್ದು, ಚುನಾವಣೆಗಳು ಮುಗಿಯುತ್ತಿದ್ದಂತೆ, ಮತದಾರನಿಗೆ ಮಾರಣಾಂತಿಕ ಆಘಾತ ನೀಡಿದೆ. ದೇಶಾದ್ಯಂತ ಭಯೋತ್ಪಾದನೆ ಮತ್ತು ಅಗತ್ಯ ವಸ್ತುಗಳ ದರ ಏರಿಕೆಯೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದ್ದು. ಸರ್ಕಾರ ಸರ್ವ ರಂಗಗಳಲ್ಲಿ ವಿಫಲವಾಗಿ ದಿವಾಳಿತನ ಪ್ರದರ್ಶಿಸುತ್ತಿದೆ ಎಂದರು.
ತಕ್ಷಣ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಹೊರೆಯಾದ ಬಸ್ ದರ ಏರಿಕೆಯನ್ನು ಸರ್ಕಾರ ಹಿಂತೆಗೆದುಕೊಳ್ಳದಿದ್ದಲ್ಲಿ ಬಿಜೆಪಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ಬಸ್ ದರ ಏರಿಕೆಗೆ ಹಿಂದಿನ ಸರ್ಕಾರದಲ್ಲಿ ಸಚಿವರ ಅವಧಿಯಲ್ಲಿ ಸಂಸ್ಥೆ ಸಾಕಷ್ಟು ನಷ್ಟದಲ್ಲಿತ್ತು. ಅದನ್ನು ತುಂಬಿಕೊಳ್ಳಲು ಬಸ್ ದರ ಏರಿಕೆ ಅನಿವಾರ್ಯವಾಗಿದೆ ಎಂಬ ಹೇಳಿಕೆ ನೀಡುತ್ತಿರುವ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಖಂಡನಾರ್ಹವಾದದ್ದು ಎಂದರು.
ಈ ಸಂದರ್ಭ ಮಾಜಿ ಶಾಸಕ ರಾಮಣ್ಣ ಲಮಾಣಿ, ಅಶೋಕ ನವಲಗುಂದ, ಶ್ರೀಕಾಂತ ಖಟವಟೆ, ಎಂ.ಎಂ. ಹಿರೇಮಠ, ಸಿರಾಜ್ ಬಳ್ಳಾರಿ, ಪ್ರಶಾಂತ ನಾಯ್ಕರ, ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಎಂ.ಎಸ್. ದೊಡ್ಡಗೌಡ್ರ, ಶಹರ ಬಿಜೆಪಿ ಅಧ್ಯಕ್ಷ ಈಶಣ್ಣ ಮುನವಳ್ಳಿ, ಜಯಶ್ರೀ ಉಗಲಾಟ, ಜಯಶ್ರೀ ಭೈರವಾಡೆ, ಕಮಲಾಕ್ಷಿ ಗೊಂದಿ, ಎಸ್.ಎಚ್. ಶಿವನಗೌಡ್ರ, ರಾಘವೇಂದ್ರ ಯಳವತ್ತಿ, ಶ್ರೀನಿವಾಸ ಕರಿ, ಶ್ರೀನಿವಾಸ ಹುಬ್ಬಳ್ಳಿ, ಮೋಹನ ಮಾಳಶೆಟ್ಟಿ, ವಿನಾಯಕ ಹಬೀಬ, ದಶರಥ ಕೊಳ್ಳಿ, ರವಿ ಶಿದ್ಲಿಂಗ, ರಾಜು ಕುರುಡಗಿ, ಪರಶುರಾಮ ಹೆಬಸೂರ, ಶ್ರೀನಿವಾಸ ಬಾಂಡಗೆ ವಿವಿಧ ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.