ವಿದ್ಯುತ್ ತಂತಿ ಹರಿದು ಎಮ್ಮೆ ಸಾವು
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮೇ 5
ಫಕಿರೇಶ್ವರ ಮಠಕ್ಕೆ ಹೋಗುವ ಹಾಗೂ ಕಣವಿ-ಹೊಸೂರ ಮಾರ್ಗವಾಗಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಹಳ್ಳಕ್ಕೆ ಕೋಟ್ಯಂತರ ರು. ಅನುದಾನದಡಿ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಪ್ರಾರಂಭವಾಗಿ ವರ್ಷ ಗತಿಸಿದ್ದು, ಇದರ ಮೇಲೆಯೇ ಜೋತುಬಿದ್ದ ವಿದ್ಯುತ್ ತಂತಿ ಸರಿಪಡಿಸದಿದ್ದುದರಿಂದ ಜೆಸಿಬಿ ಯಂತ್ರ ತಾಗಿ ಸೋಮವಾರ ಬೆಳಗ್ಗೆ ತಂತಿ ಹರಿದು ಬಿದ್ದ ಪರಿಣಾಮ ಎಮ್ಮೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.
ಯೋಜನೆಯಂತೆ ಕಾಮಗಾರಿ ಮಾಡದೇ ಪ್ರತಿ ಹಂತದಲ್ಲೂ ಕಳಪೆ ಕಾಮಗಾರಿ ನಡೆಸಿದ್ದಲ್ಲದೆ ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದ್ದು, ಈ ರಸ್ತೆಯಲ್ಲಿ ನಿತ್ಯ ನೂರಾರು ಜನರು ಶ್ರೀ ಮಠದ ದರ್ಶನಕ್ಕೆ, ಕುಡಿಯುವ ನೀರು ತರುವುದಕ್ಕೆ, ರೈತರು ಜಾನುವಾರುಗಳೊಂದಿಗೆ ಹೊಲಕ್ಕೆ ಹೋಗುವುದರಿಂದ ಜನದಟ್ಟಣೆ ಇರುವ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯೂ ಅನೇಕ ಜೀವನ್ಮರಣ ಹೋರಾಟಕ್ಕೆ ಸಾಕ್ಷಿಯಾಗುತ್ತಿರುವುದರಿಂದ ಜನರು ಜೀವ ಕೈಯಲ್ಲಿಹಿಡಿದು ಸಂಚರಿಸುತ್ತಿದ್ದಾರೆ.
ಕಾಮಗಾರಿ ನಡೆದ ಅಣತಿ ದೂರದಲ್ಲಿಯೇ ಸರ್ಕಾರಿ ಉರ್ದು ಶಾಲೆ ಹಾಗೂ ಅಂಗನವಾಡಿ ಕೇಂದ್ರವಿರುವುದರಿಂದ ಮೇಲ್ಸೆತುವೆಯಿಂದ ಕೆಳ ಮಟ್ಟದಲ್ಲಿ ವಿದ್ಯುತ್ ತಂತಿಗಳಿರುವುದರಿಂದ ಯಾವ ಸಂದರ್ಭದಲ್ಲಾದರೂ ಅನಾಹುತ ಸಂಭವಿಸುವ ಸಾಧ್ಯತೆ ಕಂಡು ಬರುತ್ತಿದ್ದು, ಇದ್ಯಾವುದನ್ನು ಗಮನಿಸದ ಗುತ್ತಿಗೆದಾರರು ಮತ್ತು ಹೆಸ್ಕಾಂ ಇಲಾಖೆಯವರು ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಕಾಮಗಾರಿ ನಡೆದ ಸ್ಥಳದಲ್ಲಿಯೇ ಬೋರವೆಲ್ ಹಾಕಿಸಿದ್ದು, ಮಣ್ಣಿನಲ್ಲಿ ಹೂತು ಹೋಗುತ್ತಿದೆ. ಇದನ್ನು ಲೆಕ್ಕಿಸದೆ ಸೋಮವಾರ ಜೆಸಿಬಿ ಸೇತುವೆ ಅಕ್ಕಪಕ್ಕ ಮಣ್ಣು ಹಾಕಲು ಮುಂದಾದಾಗ ವಿದ್ಯುತ್ ತಂತಿಗೆ ತಗುಲಿದೆ ಹೀಗಾಗಿ ತಂತಿ ಹರಿದು ಬಿದ್ದಿದ್ದರಿಂದ ಪಕ್ಕದಲ್ಲೇ ಕಟ್ಟಲಾಗಿದ್ದ ಎಮ್ಮೆಗೆ ತಗುಲಿ ಸಾವನ್ನಪ್ಪಿದ್ದು, ಸ್ವಲ್ಪದರಲ್ಲಿಯೇ ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತ್ತ ಎಮ್ಮೆಗೆ ಪರಿಹಾರ ನೀಡುವ ಜತೆಗೆ ತುರ್ತಾಗಿ ಎಲ್ಲ ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ನಿವಾಸಿಗಳಾದ ಅಹ್ಮದಶಾ ಮಾಗಡಿ, ಚಾಂದಸಾಬ ವಡವಿ, ಮುನ್ನಾ ಡಂಬಳ, ಜೈಲಾನಿ ಆದ್ರಳ್ಳಿ, ಅಮಜಾದ ಆದ್ರಳ್ಳಿ, ಇಬ್ರಾಹಿಂ ಶಿರಹಟ್ಟಿ, ಮುಕ್ತಾರ ಪಠಾಣ, ಮಹಮ್ಮದ ಹನೀಫ್ ಕರ್ಣಿ, ಅಬ್ದುಲರೆಹಮಾನ ಡಂಬಳ, ರಫೀಕ ಮುಳಗುಂದ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

