ಹಾವೇರಿ

ಅವೈಜ್ಞಾನಿಕ ರೋಡ್ ಹಂಪ್ಸ್ ಕಿರಿಕಿರಿ

Published On :

ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 11
ಒಂದೆಡೆ ಆಳೆತ್ತರ ಮೇಲೇಳುವ ರಸ್ತೆ ಧೂಳು, ಇನ್ನೊಂದೆಡೆ ಹೊಂಡಗಳ ನಡುವೆ ರಸ್ತೆಯ ಹುಡುಕಾಟ. ಇಷ್ಟರ ನಡುವೆ ಮಾರು ಮಾರಿಗೆ ಬರುವ ರೋಡ್ ಹಂಪ್ಸ್ ಕಾಟ. ಇದು ಹಾವೇರಿ ನಗರದಲ್ಲಿ ಸಂಚರಿಸುವ ವಾಹನ ಸವಾರರ ನಿತ್ಯದ ಗೊಣಗಾಟ.
ಹೌದು... ಜನವಸತಿ ಸ್ಥಳಗಳಲ್ಲಿ ಅತಿಯಾದ ವೇಗದಿಂದ ಉಂಟಾಗುವ ಅಪಘಾತ ತಡೆಯಲು ರೋಡ್ ಹಂಪ್ಸ್ ನಿರ್ಮಿಸುವುದು ಸಹಜ. ಆದರೆ, ನಗರದ ವಿವಿಧ ರಸ್ತೆಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಅವೈಜ್ಞಾನಿಕ ರೀತಿ ಹಂಪ್ಸ್ ಹಾಕಿರುವುದು ವಿಪರ್ಯಾಸ.
ಶಾಲಾ ಕಾಲೇಜು ಪ್ರದೇಶ, ಆಸ್ಪತ್ರೆ, ಜನದಟ್ಟಣೆ ಇರುವ ಪ್ರದೇಶದಲ್ಲಿ ಹಾಗೂ ರಸ್ತೆ ಕ್ರಾಸ್ ಬಳಿ ಅಪಘಾತ ತಡೆಯಲು ಸುರಕ್ಷತಾ ದೃಷ್ಟಿಯಿಂದ ವೈಜ್ಞಾನಿಕ ರೀತಿ ರೋಡ್ ಹಂಪ್ಸ್ ನಿರ್ಮಿಸುವುದು ಸಹಜ. ಅದು ಸ್ವಾಗತಾರ್ಹವೂ ಹೌದು. ಆದರೆ, ನಗರದಲ್ಲಿ ಅಷ್ಟಾಗಿ ಜನವಸತಿ, ವಾಹನ ದಟ್ಟಣೆ ಇರದ ಸ್ಥಳಗಳಲ್ಲಿಯೂ ಬೇಕಾಬಿಟ್ಟಿ ರೋಡ್ ಹಂಪ್ಸ್ ನಿರ್ಮಿಸಿರುವುದು ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಹಂಪ್ಸ್‌ಗಳೇ ಅಪಘಾತಕ್ಕೆ ಕಾರಣ: ನಗರದ ಕೆಲಕಡೆ ಅವಶ್ಯವಿಲ್ಲದೇ ಇದ್ದರೂ ರಸ್ತೆ ಉಬ್ಬು ಹಾಕಲಾಗಿದೆ. ಇದರಿಂದಲೇ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತಿವೆ. ಅಪಘಾತ ತಪ್ಪಿಸಲು ಇರಬೇಕಾದ ಹಂಪ್ಸ್‌ಗಳೇ ಅಪಘಾತಕ್ಕೆ ಕಾರಣವಾದರೆ ಹೇಗೆ ಎನ್ನುವ ಪ್ರಶ್ನೆ ವಾಹನ ಸವಾರರದ್ದು. ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ಚಾಲಕರು ಜಾಗರೂಕರಾಗಿ ಚಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ನಗರದ ಮಹಾತ್ಮಾಗಾಂಧಿ ರಸ್ತೆ, ವಿದ್ಯಾನಗರ ಎ ಬ್ಲಾಕ್‌ನ 3ನೇ ರಸ್ತೆ, ರಾಷ್ಟ್ರೀಯ ಹೆದ್ದಾರಿ 4, ದೇವಗಿರಿ ರಸ್ತೆ, ಜೆ.ಪಿ. ರಸ್ತೆ, ರೈಲು ನಿಲ್ದಾಣ ರಸ್ತೆ, ಇಜಾರಿಲಕಮಾಪುರ, ಗುತ್ತಲ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದೊಂದರಲ್ಲೂ 5ರಿಂದ 6 ರೋಡ್ ಹಂಪ್ಸ್ ನಿರ್ಮಿಸಿದೆ. ಕೆಲ ಭಾಗದಲ್ಲಿ ರೋಡ್ ಹಂಪ್ಸ್‌ನ ನಿಯಮ ಗಾಳಿಗೆ ತೂರಿ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ವಿದ್ಯಾನಗರದಿಂದ ಮುನ್ಸಿಪಲ್ ಹೈಸ್ಕೂಲ್ ಮೈದಾನ ಸೇರುವ ಒಂದು ಅಡ್ಡರಸ್ತೆಯಲ್ಲಿ ಜನವಸತಿ ಇಲ್ಲದ ಖಾಲಿ ನಿವೇಶಗಳಿರುವ ಜಾಗೆಯಲ್ಲಿ ನಾಲ್ಕು ಹಂಪ್ಸ್‌ಗಳನ್ನು ಯಾವ ಉದ್ದೇಶಕ್ಕಾಗಿ ಹಾಕಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆ.
ಅವೈಜ್ಞಾನಿಕ ಹಂಪ್ಸ್: ಹಲವು ಕಡೆ ರೋಡ್ ಹಂಪ್ಸ್‌ಗಳನ್ನು ಬೇಕಾಬಿಟ್ಟಿ ನಿರ್ಮಿಸಿದ್ದಾರೆ. ಗುಡ್ಡ ನಿರ್ಮಿಸಿದಂತೆ ಹಂಪ್ಸ್ ಹಾಕಲಾಗಿದ್ದು ಕಾರು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವಾಗ ವಾಹನದ ಕೆಳಭಾಗಕ್ಕೆ ಹಂಪ್ಸ್‌ಗಳು ತಗಲುತ್ತಿವೆ. ಇದರಿಂದಾಗಿ ಎಷ್ಟೋ ವಾಹನಗಳು ಕೆಟ್ಟು ನಿಂತು ವಾಹನ ಸವಾರರು ತೊಂದರೆ ಅನುಭವಿಸಿರುವ ಉದಾಹರಣೆಗಳು ಇವೆ. ಅಲ್ಲದೆ, ಪಕ್ಕದಲ್ಲಿ ಸ್ವಲ್ಪ ಜಾಗ ಬಿಟ್ಟಿದ್ದರೂ ಅಲ್ಲಿಂದಲೇ ಎಲ್ಲ ವಾಹನ ಸವಾರರು ಹೋಗಲು ಪ್ರಯತ್ನಿಸಿ ಬಿದ್ದ ಉದಾಹರಣೆಗಳಿವೆ. ಬೈಕ್ ಹಿಂದೆ ಕುಳಿತವರಂತೂ ಪ್ರಾಣ ಬಿಗಿಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ.
ರಸ್ತೆಗಳಿಗೆ ಇಷ್ಟೊಂದು ಹಂಪ್ಸ್ ಹಾಕಲು ಸ್ಥಳೀಯ ನಿವಾಸಿಗಳ ಬೇಡಿಕೆಯೇ ಕಾರಣ ಎನ್ನಲಾಗುತ್ತಿದೆ. ನಿಯಮದ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯ ಇರುವಲ್ಲಿ ಮಾತ್ರ ಹಂಪ್ಸ್‌ಗಳನ್ನು ಪೊಲೀಸ್ ಇಲಾಖೆ ಪರವಾನಗಿಯೊಂದಿಗೆ ಹಾಕಬೇಕು. ಆದರೆ, ಸ್ಥಳೀಯ ನಿವಾಸಿಗಳು ರಸ್ತೆ ಮಾಡುವ ಗುತ್ತಿಗೆದಾರರ ಮೇಲೆ, ಆ ಭಾಗದ ಜನಪ್ರತಿನಿಧಿ ಮೇಲೆ ಒತ್ತಡ ತಂದು ಹಂಪ್ಸ್ ಹಾಕಿಸಿಕೊಳ್ಳುತ್ತಾರೆ. ಒಂದು ವೇಳೆ ರಸ್ತೆ ಮಾಡುವ ಗುತ್ತಿಗೆದಾರರು ಮಾಡದಿದ್ದರೆ ತಾವೇ ಸ್ವತಃ ಹಂಪ್ಸ್ ಸಿದ್ಧಪಡಿಸಿಕೊಳ್ಳುತ್ತಾರೆ. ಹೀಗಾಗಿ ನಗರದ ರಸ್ತೆಗಳಲ್ಲಿ ಹಂಪ್ಸ್‌ಗಳದ್ದೇ ಕಾರುಬಾರಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ನಗರಸಭೆ ಅಧಿಕಾರಿ.
ಅಪಘಾತ ತಡೆಗಾಗಿ ರೋಡ್ ಹಂಪ್ಸ್ ಹಾಕಲಾಗುತ್ತದೆ. ಆದರೆ, ನಗರದಲ್ಲಿ ಅವೈಜ್ಞಾನಿಕ ಮತ್ತು ಮಿತಿಮೀರಿದ ರೋಡ್ ಹಂಪ್ಸ್‌ಗಳಿಂದಾಗಿ ಅಪಘಾತಗಳು ಹೆಚ್ಚುತ್ತಿರುವುದು ಖೇದಕರ. ಆದ್ದರಿಂದ ಸಂಬಂಧಪಟ್ಟವರು ಅನಗತ್ಯ ಹಂಪ್ಸ್ ತೆಗೆಯಲು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಶಿವಲಿಂಗೇಶ್ವರ ನಗರದ ದೇವರಾಜ ಪಾಟೀಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.