ಎಲ್ಲೆಡೆ ಜನರಿಕ್ ಔಷಧಿ ಮಳಿಗೆ: ಸಚಿವ ಖಾದರ್
ಹಾವೇರಿ: ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆ ಹೊರಗಡೆ ರೋಗಿಗಳಿಗೆ, ಆಯಾ ಆಸ್ಪತ್ರೆಗಳಿಗೆ ರಿಯಾಯ್ತಿ ದರದಲ್ಲಿ ಔಷಧಿ ವಿತರಿಸಲು ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.
ಹಾವೇರಿ ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಬೇಡಿಕೆಗೆ ಅನುಗುಣವಾಗಿ ಔಷಧಿ ದಾಸ್ತಾನು ಇಲ್ಲದೆ, ಹೊರಗಡೆ ಚೀಟಿ ಕೊಡುವ ಪದ್ಧತಿ ಇದೆ. ಇದನ್ನು ತಪ್ಪಿಸಲು ರಾಜ್ಯದ ಜಿಲ್ಲಾ, ತಾಲೂಕು ಆಸ್ಪತ್ರೆ ಹೊರಗಡೆ ಜನರಿಕ್ ಔಷಧಿ ಮಳಿಗೆ ತೆರೆಯಲು ನಿರ್ಣಯಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರೂ ಇದರ ಲಾಭ ಪಡೆಯಬಹುದು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಹಾವೇರಿ ಜಿಲ್ಲಾಸ್ಪತ್ರೆ ಸುಸಜ್ಜಿತ ಕಟ್ಟಡ ಹೊಂದಿದೆ. ಆದರೆ, ಇಲ್ಲಿ ಸಣ್ಣ-ಪುಟ್ಟ ಲೋಪದೋಷಗಳಿದ್ದು, ಸರಿದೂಗಿಸಲಾಗುವುದು. ಆಸ್ಪತ್ರೆ ಸಿಬ್ಬಂದಿ ವರ್ತನೆ, ವೈದ್ಯರ ಕೊರತೆ, ಕುಡಿಯುವ ನೀರಿನ ಸಮಸ್ಯೆ ಕುರಿತು ರೋಗಿಗಳು ಗಮನ ಸೆಳೆದಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ವೈದ್ಯರ ಕೊರತೆ ಇದೆ: ಎಲ್ಲ ಕಡೆಗಳಲ್ಲಿ ತಕ್ಕ ಮಟ್ಟಿಗೆ ವೈದ್ಯರ ಕೊರತೆ ಇರುವುದು ನಿಜ. ಇರುವ ವೈದ್ಯರು ಹಾಗೂ ಸಿಬ್ಬಂದಿ ಗುಣಮಟ್ಟದ ಸೇವೆ ಸಲ್ಲಿಸಲು ಶ್ರಮಿಸಬೇಕು. ಆಸ್ಪತ್ರೆ ಸಿಬ್ಬಂದಿ ಲಂಚ ಕೇಳಿದರೆ ಅವರ ಹೆಸರು ಸಮೇತ ತಮಗೆ ಮಾಹಿತಿ ನೀಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ ಡೆಂಘೀ ಜ್ವರದಿಂದ ಸಾಕಷ್ಟು ಜನ ತೊಂದರೆ ಅನುಭವಿಸಿದ್ದಾರೆ. ಈ ವರ್ಷ ಅದು ಮರುಕಳಿಸದಂತೆ ಆರೋಗ್ಯ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಚರ್ಚಿಸಿದ್ದೇನೆ. ಜನ ಮೆಚ್ಚುವಂತೆ ಕೆಲಸ ಮಾಡಲು ಆಸ್ಪತ್ರೆ ಮುಖ್ಯಸ್ಥರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.
ಹಾವು ಕಚ್ಚಿದವರಿಗೆ ನೀಡುವ ಔಷಧಿ ದೇಶದಲ್ಲಿ ಒಂದು ಕಡೆ ಮಾತ್ರ ತಯಾರಿಸಲಾಗುತ್ತಿದೆ. ಹೀಗಾಗಿ, ಎಲ್ಲೆಡೆ ಅದರ ಕೊರತೆ ಇದೆ. ರಾಜ್ಯದಲ್ಲಿ ಔಷಧಿ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಸಾಂಕ್ರಾಮಿಕ ರೋಗ ನಿಯಂತ್ರಿಸಲು ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಖಾದರ್ ಹೇಳಿದರು.
ಉತ್ತಮ ಸಾಧನೆ: ಒಂದು ವರ್ಷದಲ್ಲಿ ನಮ್ಮ ಸರ್ಕಾರ ಜನರ ನಿರೀಕ್ಷೆಯಂತೆ ಉತ್ತಮ ಸಾಧನೆ ಮಾಡಿದೆ. ಆರೋಗ್ಯ ಇಲಾಖೆಯಲ್ಲಿ ತಮ್ಮ ಕೆಲಸವೂ ತೃಪ್ತಿ ನೀಡಿದೆ. ಮಂತ್ರಿ ಸ್ಥಾನ ನೀಡುವುದು ಹಾಗೂ ಖಾತೆ ಬದಲಾವಣೆ ಮಾಡುವುದು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಕೊಟ್ಟಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಈ ಖಾತೆಯಲ್ಲಿ ಮುಂದುವರೆಸುವ ಅಥವಾ ಬದಲಿಸುವ ವಿಚಾರ ಅವರಿಗೆ ಬಿಟ್ಟದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

