ಹಾವೇರಿ: ಮತ ಎಣಿಕೆಗೆ ಸಕಲ ಸಿದ್ಧತೆ
ಹಾವೇರಿ: ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ತಾಲೂಕಿನ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ಕೇಂದ್ರದಲ್ಲಿ ಮೇ 16ರಂದು ಬೆಳಗ್ಗೆ 8 ಗಂಟೆಯಿಂದ ಅವಿರತವಾಗಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ. ಮಂಜುನಾಥ ನಾಯಕ ತಿಳಿಸಿದರು.
ಬುಧವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮತ ಎಣಿಕೆ ಕೇಂದ್ರದ ನೆಲ ಮಹಡಿಯ ಎಡಭಾಗದಲ್ಲಿ ಕ್ರಮವಾಗಿ ಶಿರಹಟ್ಟಿ, ಗದಗ, ರೋಣ ಹಾಗೂ ಹಾವೇರಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತ ಎಣಿಕೆ ಕೊಠಡಿ ಹಾಗೂ ಅಂಚೆ ಮತಪತ್ರಗಳ ಎಣಿಕೆ ಕೊಠಡಿ ಸ್ಥಾಪಿಸಲಾಗಿದೆ. ಮೊದಲ ಮಹಡಿಯಲ್ಲಿ ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ ಹಾಗೂ ಹಾನಗಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತ ಎಣಿಕೆ ಕೊಠಡಿ ತೆರೆಯಲಾಗಿದೆ ಎಂದರು.
ಪ್ರತಿ ಮತ ಎಣಿಕೆ ಕೊಠಡಿಯಲ್ಲಿ 14 ಮತ ಎಣಿಕೆ ಟೇಬಲ್ ನಿಗದಿಪಡಿಸಲಾಗಿದೆ. ಪ್ರತಿ ಟೇಬಲ್ಗೆ ಒಬ್ಬ ಮೈಕ್ರೋ ಆಬ್ಸರ್ವರ್, ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕರು ಹಾಗೂ ಸಹಾಯಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೊಠಡಿಯಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಒಂದು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಸುತ್ತಿನ ಎಣಿಕೆ ಮುಕ್ತಾಯದ ನಂತರ ಅಂಕಿ ಅಂಶಗಳನ್ನು ಅಳವಡಿಸಲು ಎರಡು ಕಂಪ್ಯೂಟರ್ ಹಾಗೂ ಇತರ ವ್ಯವಸ್ಥೆ ಮಾಡಲಾಗಿದೆ ಎಂದರು.
ಬಿಗಿ ಭದ್ರತೆ: ಮತ ಎಣಿಕೆ ಪ್ರಕ್ರಿಯೆಗೆ ಬಿಗಿ ಭದ್ರತೆ ಮಾಡಲಾಗಿದ್ದು, ಕೇಂದ್ರ ಮೀಸಲು ಪಡೆ ಹಾಗೂ ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಮುಖ್ಯದ್ವಾರದಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇಲ್ಲಿ ನಿರ್ದಿಷ್ಟ ಅನುಮತಿ ಪತ್ರ ಹೊಂದಿದವರಿಗೆ ಮಾತ್ರ ಪ್ರವೇಶವಿದ್ದು, ಅವರೂ ಮತ ಎಣಿಕೆ ಕಾರ್ಯಕ್ಕೂ ಅರ್ಧ ಗಂಟೆ ಮೊದಲು ಹಾಜರಾಗಬೇಕು. ಪ್ರವೇಶ ಪಡೆಯುವ ಎಲ್ಲರನ್ನೂ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುವುದು ಎಂದರು. ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್ ನಿಗದಿಪಡಿಸಲಾಗಿದೆ. ಪ್ರತಿ ಟೇಬಲ್ಗೆ ಒಬ್ಬರಂತೆ ಎಣಿಕೆ ಏಜೆಂಟರನ್ನು ನಿಯೋಜಿಸಲು ಪ್ರಸ್ತಾವನೆ ಸಲ್ಲಿಸಬಹುದು. ಪ್ರತಿ ಅಭ್ಯರ್ಥಿಯು ಒಟ್ಟು 122 ಮತ ಎಣಿಕೆ ಏಜೆಂಟರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು. ಮತ ಎಣಿಕೆಗಿಂತ ಅರ್ಧ ಗಂಟೆ ಮೊದಲು ಅಭ್ಯರ್ಥಿಗಳು ಇಲ್ಲವೇ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆಗೆಯಲಾಗುವುದು. ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಮೊದಲು ಅಂಚೆ ಮತಪತ್ರಗಳ ಎಣಿಕೆ ನಡೆಯಲಿದೆ. ಅರ್ಧ ಗಂಟೆಯ ನಂತರ ವಿದ್ಯುನ್ಮಾನ ಮತ ಯಂತ್ರಗಳ ಎಣಿಕೆ ಆರಂಭವಾಗುವುದು. ಪ್ರತಿಯೊಂದು ಸುತ್ತಿನಲ್ಲಿ 14 ಮತಗಟ್ಟೆಗಳ ಎಣಿಕೆ ನಡೆಯಲಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರವು ಹೊಂದಿರುವ ಮತಗಟ್ಟೆಗಳ ಸಂಖ್ಯೆಗೆ ಅನುಗುಣವಾಗಿ 15ರಿಂದ 19 ಸುತ್ತುಗಳವರೆಗೆ ಮತ ಎಣಿಕೆ ನಡೆಯಲಿದ್ದು, ಶಿರಹಟ್ಟಿ-17, ಗದಗ-15, ರೋಣ-19, ಹಾನಗಲ್ಲ-17, ಹಾವೇರಿ-18, ಬ್ಯಾಡಗಿ-17, ರಾಣಿಬೆನ್ನೂರು-18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದರು.
ಪ್ರತಿ ಸುತ್ತಿನ ಎಣಿಕೆ ಮುಕ್ತಾಯವಾದ ಬಳಿಕ ಮತದಾನದ ಹಾಗೂ ಮುನ್ನಡೆಯ ವಿವರಗಳನ್ನು ಸಾರ್ವಜನಿಕರಿಗೆ ತಿಳಿಯುವಂತೆ ಧ್ವನಿ ವರ್ಧಕಗಳ ಮೂಲಕ ಘೋಷಣೆ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಅಂತಿಮವಾಗಿ ಎಲ್ಲ ಸುತ್ತುಗಳ ಹಾಗೂ ಅಂಚೆ ಮತಗಳ ಎಣಿಕೆ ಮುಗಿದ ನಂತರ ಚುನಾವಣಾ ವೀಕ್ಷಕರ ಅನುಮತಿ ಪಡೆದು ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸುವರು ಎಂದರು. ಅಪರ ಜಿಲ್ಲಾಧಿಕಾರಿಗಳಾದ ಶಶಧರ ಕುರೇರ, ನಾಗರಾಜ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

