ಕೋಲಾರ

ಆದರ್ಶ ಶಾಲೆ ಸಮಸ್ಯೆ ಪರಿಹಾರ

Published On :

ಮುಳಬಾಗಲು:  ಆದರ್ಶ ಆಂಗ್ಲ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಶ್ರಮಿಸುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ಪಟ್ಟಣದ ಶಿವಕೇಶವನಗರದ ಆದರ್ಶ ಶಾಲೆಯಲ್ಲಿ ಮಂಗಳವಾರ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು. ಶಿಕ್ಷಣ ಇಲಾಖೆ ಅಧಿಕಾರಗಳನ್ನು ಸಂಪರ್ಕಿಸಿ ತಾಲೂಕಿನ ತಾತಿಗಲ್ಲು ಗ್ರಾಮದ ಬಳಿ ನಿವೇಶನ ಮಂಜೂರು ಮಾಡಿಸಿ, 5 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು. ಮುಖಂಡರಾದ ಉತ್ತನೂರು ಶ್ರೀನಿವಾಸ್, ಕಲ್ಲುಪಲ್ಲಿ ಪ್ರಕಾಶ್, ಆರ್.ಪ್ರಭಾಕರ್, ತಾಲೂಕು ಭೂ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ವಿ. ಶ್ರೀನಾಥ್, ಆರ್.ರಾಜೇಂದ್ರಗೌಡ. ಎಂಜನಿಯರ್ ಶ್ರೀನಿವಾಸ್,ಪಿ.ಎಸ್. ವೆಂಕಟೇಶ್, ಶಿಕ್ಷಣ ಇಲಾಖೆಯ ಎಂ.ವಿ. ಜನಾರ್ಧನ್, ಆದರ್ಶ ಶಾಲೆಯ ಮುಖ್ಯಶಿಕ್ಷಕ ಶಿವಾನಂದ ಮುಂತಾದವರು ಭಾಗವಹಿಸಿದ್ದರು.
ನಾಳೆ ಪಿಂಚಣಿ ಅದಾಲತ್
ಮುಳಬಾಗಲು: ತಾಲೂಕಿನ ತಾಯಲೂರು ನಾಡ ಕಚೇರಿ ಮುಂದಿನ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಆ.8 ರಂದು ಪಿಂಚಣಿ ಅದಾಲತ್ ಮತ್ತು ಸಾರ್ವಜನಕ ಕುಂದುಕೊರತೆ ಸಭೆ ಏರ್ಪಡಿಸಲಾಗಿದೆ ಎಂದು ನಾಡ ಕಚೇರಿ ಡೆಪ್ಯುಟಿ ತಹಸೀಲ್ದಾರ್ ಆನಂದ್, ರಾಜಸ್ವ ನಿರೀಕ್ಷಕ ಬಿ.ಆರ್. ರೆಡ್ಡಪ್ಪ ಗುಪ್ತ ತಿಳಿಸಿದ್ದಾರೆ. ಸಭೆಯಲ್ಲಿ ತಹಶೀಲ್ದಾರ್ ಡಿ.ವಿ.ರಾಮಮೂರ್ತಿ ಭಾಗವಹಿಸುವರು. ಸಾರ್ವಜನಿಕರು ಅನೂಕೂಲ ಪಡೆಯಲು ಅವರು ಕೋರಿದ್ದಾರೆ.
ಮಗನ ಸಾವಿನ ಸುದ್ದಿ ಕೇಳಿ ತಾಯಿ ಸಾವು
ಕುಣಿಗಲ್: ಮಗನ ಸಾವಿನ ಸುದ್ದಿ ಕೇಳಿದ ಮರುಕ್ಷಣವೇ ತಾಯಿಯೂ ಮೃತ ಪಟ್ಟಿರುವ ದಾರುಣ ಘಟನೆ ಪಟ್ಟಣ ಕೋಟೆ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ. ಪಟ್ಟಣದ ಕೋಟೆ ಪ್ರದೇಶದ ಮುಖ್ಯರಸ್ತೆಯಲ್ಲಿ ವಾಸವಾಗಿರುವ ಗಿರಿಜಾಶಂಕರ್ ಅಲಿಯಾಸ್ ಗಿರಿ (30) ಪ್ಲಂಬಿಂಗ್, ಎಲೆಕ್ಟ್ರಿಕಲ್ ವೈರಿಂಗ್ ಕೆಲಸ ಮಾಡುತ್ತಿದ್ದು, ಮಂಗಳವಾರ ಸಂಜೆ ಆರೂವರೆ ಗಂಟೆ ಸಮಯದಲ್ಲಿ ಮನೆಯಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಜಾರಿ ಪಕ್ಕದಲ್ಲೆ ಇದ್ದ ತೊಟ್ಟಿಗೆ ಬಿದ್ದು ಪ್ರಜ್ಞಾಹೀನನಾದ. ಸ್ನಾನಕ್ಕೆಂದು ಹೋದ ಮಗ ಎಷ್ಟು ಹೊತ್ತಾದರೂ ಬಾರದಿದ್ದನ್ನು ಕಂಡ ತಾಯಿ ಪಾರ್ವತಮ್ಮ ಹೋಗಿ ನೋಡಲಾಗಿ ತೊಟ್ಟಿಯಲ್ಲಿ ಮಗ ಅಂಗಾತವಾಗಿ ಬಿದ್ದಿದ್ದ. ಕೂಡಲೆ ಕೂಗಿಕೊಂಡ ಮೇರೆಗೆ ನೆರೆಹೊರೆಯವರು ಅಗಮಿಸಿ, ಗಿರಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗಿರಿ ಮೃತಪಟ್ಟ. ಇತ್ತ ಮಗನನ್ನು ಆಸ್ಪತ್ರೆಗೆ ಕರೆದೊಯ್ದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ ರೋದಿಸ ತೊಡಗಿದಳು. ಆದರೆ, ಮಗ ಆಸ್ಪತ್ರೆಯಲ್ಲಿ ಮೃತಪಟ್ಟನೆಂಬ ವಿಷಯ ತಿಳಿದ ಕೂಡಲೆ ಪಾರ್ವತಮ್ಮ (70) ಸಹ ಮೃತಪಟ್ಟಳು. ಪುರಸಭೆ ಸದಸ್ಯರಾದ ಸತೀಶ್, ಚಂದ್ರಶೇಖರ್, ಭೇಟಿ ನೀಡಿ, ಸಂಬಂಧಿಕರೊಂದಿಗೆ ಸೇರಿ ತಾಯಿ ಮಗನ ಅಂತಿಮ ಸಂಸ್ಕಾರಕ್ಕೆ ಅಗತ್ಯ ಕ್ರಮ ಕೈಗೊಂಡರು.
'ಅಂತರ ಬೆಳೆಯಾಗಿ ತೆಂಗು ಬೆಳೆಯಿರಿ'
ಹಾಸನ: ರೈತರು ಕೇವಲ ತೆಂಗು ಬೆಳೆಯ ಮೇಲೆ ಅವಲಂಬಿತರಾಗದೇ ಅದರ ಜೊತೆ ಅಂತರ ಬೆಳೆಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನಟರಾಜ್ ಸಲಹೆ ನೀಡಿದ್ದಾರೆ. ಅವರು ಕಂದಲಿಯಲ್ಲಿ  ಏರ್ಪಡಿಸಿದ್ದ ಯುವ ರೈತರಿಗೆ ತೆಂಗಿನ ಮರ ಹತ್ತುವ ಮತ್ತು ಸಸ್ಯ ಸಂರಕ್ಷಣೆಯ ಬಗ್ಗೆ ಆರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೆಂಗಿನ ಮರದಿಂದ ಆಗುವ ಉಪಯೋಗ ಅನೇಕ. ತೆಂಗಿನ ಮರದಿಂದ ಆಹಾರ, ಪಾನೀಯ, ಇಂಧನಕ್ಕೆ ಸೌದೆ ವಸತಿಗೆ ಮತ್ತು ಅನೇಕ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ ಎಂದು ವಿವರಿಸಿದರು.  ಕೇಂದ್ರದ ವಿಜ್ಞಾನಿ ಡಾ.ಆರ್. ವಿನಯ್ಕುಮಾರ್ ಶಿಬಿರಾರ್ಥಿಗಳು ತೆಂಗಿನ ಮರ ಹತ್ತುವ ಸಾಧನದ ಮೂಲಕ ಮರ ಹತ್ತುವುದನ್ನು ಕಲಿತು ಹಳ್ಳಿಗಳಲ್ಲಿ ಮರ ಹತ್ತುವವರು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಉಪಕಸುಬಾಗಿ ತೆಗೆದುಕೊಳ್ಳಬಹುದು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.