ಅಕ್ರಮ ಕ್ಲಬ್‌ಗಳಿಗೆ ಬೀಗ ಮುದ್ರೆ
ಬಾಗೇಪಲ್ಲಿ: ಕ್ಲಬ್‌ಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಡವಾಗಿಯಾದರೂ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ತಾಲೂಕಿನ ವಿವಿಧೆಡೆ ಅಕ್ರಮವಾಗಿ ನಡೆಯುತ್ತಿರುವ ಕ್ಲಬ್‌ಗಳ ಮೇಲೆ ಡಿವೈಎಸ್‌ಪಿ ದೇವಯ್ಯ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿ ಪೊಲೀಸರು ಬೀಗ ಜಡಿದಿದ್ದಾರೆ.
ಅಕ್ರಮ ದಂಧೆಗೆ ಜನ ಬೀದಿಪಾಲು ಕೇಳೋರಿಲ್ಲ ಗೋಳು, ಮನರಂಜನೆ ಹೆಸರಿನಲ್ಲಿ ನಾಯಿಕೊಡೆಗಳಂತೆ ಹುಟ್ಟಿವೆ ಕ್ಲಬ್‌ಗಳು, ಪೊಲೀಸರು ಮೌನ ಎಂಬ ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.
ಈ ವರದಿ ಪ್ರಕಟಗೊಂಡ ನಂತರ ಪುರಸಭೆ ಮತ್ತು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ದಿನಗಳ ಮಟ್ಟಿಗೆ ಕದ್ದು ಮುಚ್ಚಿ ಕ್ಲಬ್‌ಗಳ ದಂಧೆ ನಡೆಸುತ್ತಿದ್ದ ಕ್ಲಬ್‌ಗಳು ಚುನಾವಣೆಯ ನಂತರ ಮತ್ತೇ ರಾಜಾರೋಷವಾಗಿ ನಡೆಸುತ್ತಿದ್ದರೂ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದ ಸ್ಥಳೀಯ ಪೊಲೀಸರು ಮೌನಕ್ಕೆ ಶರಣಗಾಗಿದ್ದರು.
ಈ ಸಂಬಂಧ ಪಟ್ಟಣ ಸೇರಿದಂತೆ ತಾಲೂಕಿನ ಕ್ಲಬ್‌ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸುವಂತೆ ಸ್ಥಳೀಯ ಪೊಲೀಸರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜನರು ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶದ ಮೇರೆಗೆ ಕ್ಲಬ್‌ಗಳ ಮೇಲೆ ದಾಳಿ ನಡೆಸಲಾಯಿತು. ದಾಳಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್ಪಿ ದೇವಯ್ಯ, ಮನರಂಜನೆಯ ಹೆಸರಿನಲ್ಲಿ ಪ್ರತಿನಿತ್ಯವೂ ಹಗಲು ರಾತ್ರಿಯೆನ್ನದೇ ಸರ್ಕಾರ ಮತ್ತು ನ್ಯಾಯಾಲಯದ ಆದೇಶ, ಕಾನೂನು ಮತ್ತು ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ರು.ಗಳನ್ನು ಪಣಕ್ಕಿಟ್ಟು ಜೂಜಾಟದಲ್ಲಿ ಮುಳುಗಿದ್ದ ಕ್ಲಬ್‌ಗಳನ್ನು ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಕಾನೂನಿನ ಪ್ರಕಾರ ಪಟ್ಟಣದಲ್ಲಿ 6, ಜಿ. ಮದ್ದೇಪಲ್ಲಿ 1, ಉಪ್ಪಾರ್‌ಲಪಲ್ಲಿ 1, ಚಾಕವೇಲು 1, ಬಿಳ್ಳೂರು 1, ಚೇಳೂರು 1, ಮಿಟ್ಟೇಮರಿ 1, ಪಾತಪಾಳ್ಯ 1 ಸೇರಿದಂತೆ ಒಟ್ಟು 13 ಕ್ಲಬ್‌ಗಳಿಗೆ ಬೀಗ ಹಾಕಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರವು ಜನರ ಮನರಂಜನೆಗಾಗಿ ಕಾನೂನಿನ ಪ್ರಕಾರ ಪರವಾನಗಿ ನೀಡಬೇಕಾದರೆ ಸಾಕಷ್ಟು ನಿಯಮಗಳನ್ನು ಪಾಲಿಸಬೇಕು. ಒಂದು ಕ್ಲಬ್‌ನಲ್ಲಿ ಕೇರಂ, ಚೇಸ್, ಇಸ್ಪೇಟ್, ಸೆಟಲ್‌ಕಾಕ್ ಮುಂತಾದ ಕ್ರೀಡೆಗಳು ಇರಬೇಕು, ಈ ಕ್ಲಬ್‌ಗಳಲ್ಲಿ ಕ್ಲಬ್‌ಗೆ ಸಂಬಂಧಿಸಿರುವ ಸದಸ್ಯರು ಮಾತ್ರ ಭಾಗವಹಿಸಬೇಕಾಗುತ್ತದೆ. ಆದರೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನಡೆಯುತ್ತಿರುವ ಕ್ಲಬ್‌ಗಳಲ್ಲಿ ಸರ್ಕಾರದ ಹಾಗೂ ನ್ಯಾಯಲಯದ ಕಾನೂನಿನ ನಿಯಮಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಸ್ಪಷ್ಟ ಮಾಹಿತಿ ಪಡೆದುಕೊಂಡ ನಂತರ ಉನ್ನತ ಅಧಿಕಾರಿಗಳ ಆದೇಶದಂತೆ ಒಂದೇ ದಿನದಲ್ಲಿ ತಾಲೂಕಿನಲ್ಲಿ ಆಕ್ರಮವಾಗಿ, ಕಾನೂನಿಗೆ ವಿರುದ್ಧವಾಗಿ ನಡೆಸುತ್ತಿದ್ದ ಸುಮಾರು 13ಕ್ಕೂ ಹೆಚ್ಚು ಕ್ಲಬ್‌ಗಳಿಗೆ ಬೀಗ ಮುದ್ರೆಯನ್ನು ಹಾಕಲಾಗಿದೆ ಎಂದರು.
ಕ್ಲಬ್‌ಗಳಲ್ಲಿ ಸಾವಿರಾರು ರೂಗಳ ಹಣವನ್ನು ಪಣಕ್ಕೆ ಇಟ್ಟು ಕಾನೂನನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಅಂದರ್ ಬಾಹರ್, ಮೂರು ಎಲೆ ಮುಂತಾದ ಆಟಗಳನ್ನು ಆಡುತ್ತಾರೆ. ಬಹುತೇಕ ಎಲ್ಲಾ ಕ್ಲಬ್‌ಗಳಲ್ಲಿ ನೆರೆಯ ಆಂಧ್ರಪ್ರದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಲಬ್‌ಗಳಲ್ಲಿ ಹಗಲು ರಾತ್ರಿ ಎನ್ನದೇ ತಂಡೋಪ ತಂಡವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕೊಲೆ, ಸುಲಿಗೆ, ಕಳ್ಳತನ, ದೌರ್ಜನ್ಯ ಮುಂತಾದ ಅಪರಾಧಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಶಾಲಾ ಕಾಲೇಜು, ಸರ್ಕಾರಿ ವಿದ್ಯಾರ್ಥಿ ನಿಲಯ, ಸಾರ್ವಜನಿಕರ ವಾಸದ ಮನೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೊಠಡಿಗಳನ್ನು ಬಾಡಿಗೆಗೆ ಪಡೆದು ಜೂಜಾಟ ಕೇಂದ್ರಗಳನ್ನು ರಾಜಾರೋಷವಾಗಿ ನಡೆಸುತ್ತಿರುವ ಬಹುತೇಕ ಕ್ಲಬ್‌ಗಳಲ್ಲಿ ಮದ್ಯವನ್ನು ಕಡಿದು ಹಗಲು ರಾತ್ರಿ ಎನ್ನದೆ ಕುಡಿದ ಅಮಲಿನಲ್ಲಿ ಅಶ್ಲೀಲವಾಗಿ ಮಾತನಾಡುವುದು, ಗಲಾಟೆ ಸೇರಿದಂತೆ ವಿವಿಧ ರೀತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದಾಗಿ ಕ್ಲಬ್‌ಗಳ ಪಕ್ಕಪಕ್ಕದ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ಕ್ಲಬ್‌ಗಳನ್ನು ಮುಚ್ಚಿಸಿರುವುದಾಗಿ ತಿಳಿಸಿದರು.
ಸುಮಾರು ವರ್ಷಗಳಿಂದ ಈ ಭಾಗದಲ್ಲಿ ಕ್ಲಬ್‌ಗಳು ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ಏಕೆ ಕಾನೂನು ರೀತ್ಯಾ ಕ್ರಮ ಜರುಗಿಸಲ್ಲಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರು ಕ್ಲಬ್‌ಗಳ ಮೇಲೆ ದಾಳಿ ನಡೆಸಿದರೆ ಕ್ಲಬ್‌ಗಳನ್ನು ನಡೆಸುವವರು ನ್ಯಾಯಾಲಯಕ್ಕೆ ಹೋಗುವುದಾಗಿ ಬೆದರಿಕೆ ಹಾಕುತ್ತಾರೆ ಹಾಗೂ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಇದಕ್ಕೆ ಕೆಲವು ರಾಜಕೀಯ ನಾಯಕರು ಸಹ ಒತ್ತಡವನ್ನು ಹೇರುತ್ತಾರೆ ಎಂದರು.
ದಾಳಿಯಲ್ಲಿ ಬಾಗೇಪಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ ಮೂರ್ತಿ, ಉಪನಿರೀಕ್ಷಕ ಮುನಿರೆಡ್ಡಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

