ಕೋಲಾರ

ಬಿಬಿಎಂ ಶುಲ್ಕ ಹೆಚ್ಚಳಕ್ಕೆ ವಿರೋಧ

Published On :

ಕೋಲಾರ: ಸರ್ಕಾರಿ ಕಾಲೇಜುಗಳಲ್ಲಿ ಬಿ.ಬಿ.ಎಂ ವಿದ್ಯಾರ್ಥಿಗಳಿಂದ ಬಳಕೆ ಶುಲ್ಕವೆಂದು 1 ಸಾವಿರದಿಂದ 2 ಸಾವಿರ ರು. ವಸೂಲಿ ಮಾಡಿದ್ದು ಈ ಸಾಲಿನಿಂದಲೇ ಸರ್ಕಾರದ ಆದೇಶವನ್ನು ರದ್ದು ಮಾಡಿ ಈಗಾಗಲೇ ಕಟ್ಟಿಸಿಕೊಂಡ ಹಣವನ್ನು ವಾಪಸ್ಸು ಮಾಡುವಂತೆ ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟ ಒತ್ತಾಯಿಸಿದೆ. ಈ ಸಂಬಂಧ ಗುರುವಾರ ನಗರದ ಸರ್ಕಾರಿ ಕಾಲೇಜು ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಿ ಕೊಡಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಹೂಹಳ್ಳಿ ನಾಗರಾಜ್, ರೈತ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ವಿದ್ಯಾರ್ಥಿ ಮುಖಂಡರಾದ ಗೌರೀಶಂಕರ್, ರಾಜೇಶ್, ಉಪ್ಪುಕುಂಟೆ ಗಣೇಶ್, ಮೂರಾಂಡಹಳ್ಳಿ ಶಿವಾರೆಡ್ಡಿ, ಚೇತನ್, ನರೇಶ್ ಕುಮಾರ್, ಪ್ರದೀಪ್, ಅಭಿಲಾಷ್, ವಾಸು, ಪ್ರದೀಪ್ ಕುಮಾರ್, ವಿನಯ್, ಸಂತೋಷ್, ವೆಂಕಟೇಶ್, ಸುದರ್ಶನ್, ರವಿ ಇದ್ದರು.
ಫಲಾನುಭವಿಗಳಿಗೆ
ತಹಸೀಲ್ದಾರ್ ಸೂಚನೆ
ಶ್ರೀನಿವಾಸಪುರ:  ತಾಲೂಕಿನ ಕಸಬಾ ಹೋಬಳಿಯ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ವಿಧವಾ ವೇತನಕ್ಕೆ, ಸಂಧ್ಯಾ ಸುರಕ್ಷಾ ಯೋಜನೆಗೆ ಹಾಗೂ ಅಂಗವಿಕಲರ ಮಾಶಾಸನಕ್ಕೆ ಅರ್ಜಿಗಳನ್ನು ಸಲ್ಲಿಸುವ ಅರ್ಹ ಫಲಾನುಭವಿಗಳು ಈ ಕೆಳಕಂಡ ದಿನಾಂಕಗಳಂದು ಕೆಳಕಂಡ ಪಂಚಾಯ್ತಿ ಕೇಂದ್ರಗಳಲ್ಲಿ ಅರ್ಜಿ ನೀಡಬಹುದು. ಆ.26ರಂದು 11 ರಿಂದ 3 ಗಂಟೆವರೆಗೆ ಮಾಸ್ತೇನಹಳ್ಳಿ, 27ರಂದು ದಳಸನೂರು, 28ರಂದು ಚಲ್ದಿಗಾನಹಳ್ಳಿ, 29ರಂದು ನಂಬಿಹಳ್ಳಿ, 30ರಂದು ಜೆ.ತಿಮ್ಮಸಂದ್ರ ಗ್ರಾಮ ಪಂಚಾಯ್ತಿಗಳಲ್ಲಿ ಆಯಾ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿಗಳು ರಾಜಸ್ವ ನಿರೀಕ್ಷಕರು ಮತ್ತು ಸರ್ಕಾರಿ ಅಸ್ಪತ್ರೆಗಳ ಆರೋಗ್ಯಾಧಿಕಾರಿಗಳು ಅಲ್ಲಿಯೇ ಇರುತ್ತಾರೆ. ಆದ್ದರಿಂದ ಮೇಲ್ಕಂಡ ಯೋಜನೆಗಳಿಗೆ ಅರ್ಜಿ ಸಲ್ಲಿಸುವವರು ಈ ಸದವಕಾಶ ಉಪಯೋಗಿಸಿಕೊಳ್ಳಲು ತಹಸೀಲ್ದಾರ್ ಎಚ್. ಜಯ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ರೆಡ್ಡಿ
ಮಾಲೂರು: ತಾಲೂಕಿನ ಚಿಕ್ಕ ಕುಂತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಎ.ವಿ. ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಚುನಾವಣೆಯಲ್ಲಿ ಎ.ವಿ. ರೆಡ್ಡಿಯೊಬ್ಬರೆ ನಾಮಪತ್ರ ಸಲ್ಲಿಸಿದ ಕಾರಣ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ನಿರ್ದೇಶಕರಾಗಿ ವಿ. ವೆಂಕಟಸ್ವಾಮಿ, ವೈ.ನಂಜುಂಡ ರೆಡ್ಡಿ, ವೆಂಕಟರಮಣಪ್ಪ, ಪಿಳ್ಳಪ್ಪ, ಮುನಿಯಪ್ಪ, ಎಂ. ಆಂಜಿ, ಯಶೋಧಮ್ಮ, ಸತ್ಯನಾರಾಯಣ ರಾವ್ ಅವರನ್ನು ಇದೇ ಸಂದರ್ಭದಲ್ಲಿ ಆರಿಸಲಾಯಿತು. ಹಾಲು ಉತ್ಪಾದಕರ ಸಂಘದ ನೂತನ ಪದಾಧಿಕಾರಿಗಳಿಗೆ ಚುಟುಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ಕುಂ. ಚಂದ್ರಪ್ಪ ಅಭಿನಂಜನೆ ಸಲ್ಲಿಸಿದ್ದಾರೆ.
ರಾಯಲಸೀಮೆಯಲ್ಲಿ ಮತ್ತೆ ನಕ್ಸಲರು ಸಕ್ರಿಯ
ತುಮಕೂರು:  5 ವರ್ಷಗಳಿಂದ ರಾಯಲಸೀಮೆಯಲ್ಲಿ ಹೆಚ್ಚು ಕಡಿಮೆ ಸದ್ದಡಗಿದ್ದ ನಕ್ಸಲರ ಚಟುವಟಿಕೆಗಳು ಈಗ ಮತ್ತೆ ಗರೆಗೆದರಿಕೊಂಡಿವೆ. ಇದೀಗ ಪಾವಗಡದ ಶಾಸಕ ತಿಮ್ಮರಾಯಪ್ಪ ಅವರಿಗೆ ಬೆದರಿಕೆ ಪತ್ರ ರವಾನಿಸುವ ಮೂಲಕ ಮತ್ತೆ ಗಡಿ ಭಾಗದ ಪಾವಗಡದಲ್ಲಿ ನಕ್ಸಲರು ಸಕ್ರಿಯರಾಗಿದ್ದಾರೆ ಎಂಬ ಸಂದೇಶ ಕಳುಹಿಸಿದ್ದಾರೆ. ಪಾವಗಡದ ವೈ.ಎನ್. ಹೊಸಕೋಟೆ, ನಾಗಲಮಡಿಕೆ ಹೋಬಳಿಗಳಲ್ಲಿ ಹೆಚ್ಚಾಗಿ ನಕ್ಸಲ್ ಚಟುವಟಿಕೆಗಳು ನಡೆಯುತ್ತಿದ್ದವು. ಹಾಗೆಯೇ ಕಸಬಾ, ನಿಡಗಲ್ಲು ಹೋಬಳಿಗಳಲ್ಲೂ ಇವರು ತುಸು ಸಕ್ರಿಯರಾಗಿದ್ದರು. ಆಂಧ್ರದಲ್ಲಿ ನಕ್ಸಲರು ಕಾರ್ಯಾಚರಣೆ ನಡೆಸಿ ಪಾವಗಡ ತಾಲೂಕಿನುದ್ದಕ್ಕೂ ವ್ಯಾಪಿಸಿರುವ ಎತ್ತರದ ಬೆಟ್ಟಗುಡ್ಡಗಳನ್ನೇ ತಮ್ಮ ಅಡಗುತಾಣವನ್ನಾಗಿ ಮಾಡಿಕೊಂಡಿದ್ದರು. ಪಾವಗಡಕ್ಕೂ ನಕ್ಸಲರಿಗೂ ದಶಕಗಳಿಂದಲೂ ನಂಟಿದೆ. ಈ ಹಿಂದೆ ರಾಮಕೃಷ್ಣ ಎಂಬವರನ್ನು ಹೊಡೆದುರುಳಿಸಲಾಗಿತ್ತು. ಸೂಲನಾಯಕನಹಳ್ಳಿಯಲ್ಲಿ ಜಮೀನ್ದಾರ್ ಒಬ್ಬ ನಕ್ಸಲರಿಗೆ ವಿರುದ್ಧವಾಗಿದ್ದ ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು.  ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡವಾದ ಬಳಿಕ ಪೊಲೀಸ್ ಇಲಾಖೆ ಮತ್ತು ಸರ್ಕಾರ ರೆಡ್ ಅಲರ್ಟ್ ಘೋಷಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.