'65 ಸಾವಿರ ಉದ್ಯಮಿಗಳಿಗೆ ತರಬೇತಿ ನೀಡಿ'
ಕ.ಪ್ರ.ವಾರ್ತೆ ಕೋಲಾರ ಆ.10
ಕೃಷಿ ನಂತರ ಭಾರತ ದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಯುಪಿಎ ಸರ್ಕಾರ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (ಪಿಎಂಇಜಿಪಿ)ಯಡಿ ಹೊಸ ಕೈಗಾರಿಕೋದ್ಯಮಿಗಳನ್ನು ತಯಾರು ಮಾಡಿ ಈ ಮೂಲಕ ಉದ್ಯೋಗ ಸಮಸ್ಯೆ ನಿವಾರಣೆಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ಕೇಂದ್ರದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ನಗರದ ಕೆಇಬಿ ಸಮುದಾಯ ಭವನದಲ್ಲಿ ಶನಿವಾರ ಸಣ್ಣ ಕೈಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಉದ್ಯಮದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
65 ಸಾವಿರ ಜನರಿಗೆ ತರಬೇತಿ: ಪಿಎಂಇಜಿಪಿ ಯೋಜನೆಯಡಿ 65 ಸಾವಿರ ನವ ಉದ್ಯಮಿಗಳಿಗೆ ತರಬೇತಿ ನೀಡುವುದಲ್ಲದೆ ಕೈಗಾರಿಕೆಗಳನ್ನು ಸ್ಥಾಪಿಸಲು ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆ ಮೂಲಕ ಕನಿಷ್ಠ 15 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ದೇಶಿಸಲಾಗಿರುವುದರಿಂದ ತಮ್ಮ ದೇಶ ಯಂಗ್ ಇಂಡಿಯಾ ಆಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದರು.
ಕೈಗಾರಿಕೆಗಳ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಪ್ರತಿ ಜಿಲ್ಲೆಗೊಂದು ಇಂಡಸ್ಟ್ರೀಯಲ್ ಕ್ಲಸ್ಟರ್ ಸ್ಥಾಪಿಸುವುದಕ್ಕೆ 1 ಕೋಟಿಯಿಂದ 10 ಕೋಟಿಗಳವರೆಗೆ ಸಬ್ಸಿಡಿ ಹಾಗೂ ಪ್ರತಿ ರಾಜ್ಯಕ್ಕೆ ಒಂದು ಕಾಮನ್ ಕ್ಲಸ್ಟರ್ ರಚಿಸುವುದಕ್ಕೆ 15 ಕೋಟಿಗಳವೆರೆಗೆ ಸಬ್ಸಿಡಿ ನೀಡಲಾಗುವುದರಿಂದ ಇದರಿಂದ ಎಲ್ಲಾ ವಿಧಗಳ ಉತ್ಪನ್ನಗಳನ್ನು ಒಂದೇ ತಯಾರು ಮಾಡುವುದಕ್ಕೆ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಅನುಕೂಲವಾಗುತ್ತದೆ ಎಂದರು.
ಬಡತನ ರೇಖೆಗಿಂತ ಕಡಿಮೆ ಇರುವ ಜನರನ್ನು ಸಬಲರನ್ನಾಗಿ ಮಾಡುವ ಆಶಯದೊಂದಿಗೆ ಯುಪಿಎ ಸರ್ಕಾರ ಪಿಎಂಇಜಿಪಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಲು ಉದ್ದೇಶಿಸಿದ್ದು, ಕೈಗಾರಿಕೆಗಳ ಸ್ಥಾಪನೆ ಮಾಡಲು ಆಸಕ್ತಿ ಇರುವವರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ದೇವನಹಳ್ಳಿಯಲ್ಲಿ ಟೂಲ್ ರೂಮ್: ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 250 ಕೋಟಿ ವೆಚ್ಚದಲ್ಲಿ ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೂಲ್ ರೂಮ್ ಅಂಡ್ ಟ್ರೈನಿಂಗ್ ಸೆಂಟರ್ ಸ್ಥಾಪಿಸಲು ನಿರ್ಧರಿಸಿದೆ. ಏರೋನ್ಯಾಟಿಕ್ ಉತ್ಪನ್ನಗಳ ತಯಾರಿಕೆ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬೇಕಾದ ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸುವುದನ್ನು ಆಸಕ್ತ ಉದ್ಯಮದಾರರಿಗೆ ಹೇಳಿಕೊಡಲಾಗುತ್ತದೆ.
ಇದರಿಂದ ನಮ್ಮ ಉದ್ಯಮಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಹಾಗೂ ವಿಶ್ವಕ್ಕೆ ಬೇಕಾದ ಉತ್ಪನ್ನಗಳನ್ನು ಒದಗಿಸಲು ಸಾಮರ್ಥ್ಯ ಹೆಚ್ಚುವುದರಿಂದ ಉದ್ಯಮಿಗಳು ಟೂಲಲ್ರೂಮ್ನು ಸದುಪಯೋಗ ಮಾಡಿಕೊಳ್ಳಬೇಕು. ಸದರಿ ಯೋಜನೆಗೆ ಕೇಂದ್ರ ಸರ್ಕಾರ 150 ಕೋಟಿ ಒದಗಿಸಿದೆ. ಸುಮಾರು 10 ಸಾವಿರ ಜನರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೂಲ್ರೂಮ್ ಜೊತೆಗೆ ಕೋಲಾರ ಜಿಲ್ಲೆ ಇಂಡಸ್ಟ್ರೀಯಲ್ ಹಬ್ ಆಗಿ ಪರಿವರ್ತನೆ ಆಗುತ್ತಿರುವುದರಿಂದ ಕೈಗಾರಿಕೋದ್ಯಮಿಗಳಿಗೆ ಮಾತ್ರವಲ್ಲದೆ ಉದ್ಯೋಗಕ್ಕಾಗಿ ಹಂಬಲಿಸುತ್ತಿರುವವರಿಗೆ ಸೂಕ್ತ ತರಬೇತಿ ನೀಡುವುದಕ್ಕಾಗಿ ತಾಲೂಕಿನ ವೇಮಗಲ್ನಲ್ಲಿ ಕೈಗಾರಿಕೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಇದಕ್ಕಾಗಿ 150 ಕೋಟಿ ಮೀಸಲಿಡಲಾಗಿದೆ. ಇನ್ನೊಂದು ತಿಂಗಳಲ್ಲಿ ಕೈಗಾರಿಕೆ ತರಬೇತಿ ಸಂಸ್ಥೆಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದರು.
ವೇಮಗಲ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವವರಲ್ಲಿ ಶೇ.90ರಷ್ಟು ಮಂದಿಗೆ ಉದ್ಯೋಗ ಸಿಗುವುದರಲ್ಲಿ ಅನುಮಾನವಿಲ್ಲ. ಗುಣಮಟ್ಟದ ತರಬೇತಿ ನೀಡುವ ಮೂಲಕ ಉದ್ಯೋಗ ಅವಕಾಶ ಹೆಚ್ಚಿಸಲಾಗುವುದೆಂದರು.
ಕೋಲಾರದಲ್ಲಿ ಮುಂದಿನ ತಿಂಗಳು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಯುವಕರು ಇದರ ಲಾಭ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖಾದಿ ಗ್ರಾಮೋದ್ಯೋಗ ಮಂಡಳಿ ಮುಖ್ಯಸ್ಥರಾದ ಕಾಳಪ್ಪ, ಕೈಗಾರಿಕೆ ಇಲಾಖೆ ಅಧಿಕಾರಿಗಳಾದ ಜಮಖಂಡಿ, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ಶಾಖಾ ವ್ಯವಸ್ಥಾಪಕ ವಿ.ಸುರೇಶ್ ಬಾಬು, ಕೋಲಾರ ಜಿಲ್ಲಾ ಕೈಗಾರಿಕಾ ಇಲಾಖೆಯ ಅಧಿಕಾರಿ ರವಿಚಂದ್ರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಚ್.ಮುನಿಯಪ್ಪ, ಜಿಲ್ಲಾ ಕೈಗಾರಿಕೆಗಳ ಸಂಘದ ಮುಖಂಡ ಶಫಿಉಲ್ಲಾ, ಎಪಿಎಂಸಿ ನಿರ್ದೇಶಕ ಹೊಳಲಿ ಪ್ರಕಾಶ್, ನಗರಸಭೆ ಸದಸ್ಯ ಪ್ರಸಾದ್ ಬಾಬು ಇನ್ನಿತರರು ಇದ್ದರು. ರವಿಕುಮಾರ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

