ಕೋಲಾರ

ಡಾ.ಪರಮಶಿವಯ್ಯ ವರದಿಯೇ ಜಾರಿಯಾಗಬೇಕು'

Published On :

ಮಾಲೂರು: ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದೆ. ಭವಿಷ್ಯದ ಬದುಕಿನ ಹಿತದೃಷ್ಟಿಯಿಂದ ಡಾ.ಪರಮಶಿವಯ್ಯ ವರದಿಯೇ ಜಾರಿಯಾಗಬೇಕು ಎಂದು ಖ್ಯಾತ ಪರಿಸರ ವಾದಿ ಹಾಗೂ ಪಿನಾಕಿನಿ ಪಾಲಾರ್ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಚೌಡಪ್ಪ ಕರೆ ನೀಡಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ಮೂಲಗಳು ಇಲ್ಲದಿದ್ದರೂ 15 ವರ್ಷಗಳ ಹಿಂದೆ ತಾಲೂಕಿನ 361 ಕೆರೆಗಳ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿದ್ದು, ಕೇವಲ 200-300 ಅಡಿಗಳಲ್ಲಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿತ್ತು. ಆದರೆ, ಈಗ ಅಂತರ್ಜಲಮಟ್ಟ 1600 ಅಡಿಗಳಿಗೆ ಇಳಿದಿದೆ. ಯಥೇಚ್ಚ ನೀರು ವ್ಯಯ ಮಾಡುತ್ತಿದ್ದ ನಾವು ಅವುಗಳನ್ನು ಕೆರೆಗಳಲ್ಲಿ ಸಂಗ್ರಹಿಸಲು ನಿರ್ಲಕ್ಷ ತೋರುತ್ತಿದ್ದಿದ್ದೇವೆ. ನೀರಿಗಾಗಿ ಜಿಲ್ಲೆಯಲ್ಲಿ 30000 ಕೋಟಿ ವೆಚ್ಚದಲ್ಲಿ 1.3 ಲಕ್ಷ ಕೊಳವೆಬಾವಿ ಕೊರೆಯಲು ರೈತರು ಖರ್ಚುಮಾಡಿದ್ದಾರೆ. ಲಾವರಸ ಸಿಗುವ ತನಕ ನೀರಿನ ಅಳ ಇಳಿದಿರುವ ನಮ್ಮ ಜಿಲ್ಲೆಯ ನೀರಿನ ಭವಣೆ ತೀರಿಸಲು ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ ಎಂದರು. ನಮ್ಮನ್ನು ಪ್ರತಿನಿಧಿಸುವ ಸಂಸದರು ಹಾಗೂ ಶಾಸಕರಲ್ಲೂ ಇಚ್ಛಾಶಕ್ತಿ ಕೊರತೆ ಇದೆ. ಇದುವರೆಗೆ ನಮ್ಮನ್ನಾಳಿದ ಸರ್ಕಾರಗಳು ಕೋಲಾರ ಅವಿಭಜಿತ ಜಿಲ್ಲೆಗೆ ಇದುವರೆಗೂ 1 ಕೋಟಿ ನೀರಿನ ಯೋಜನೆಗಾಗಿ ವ್ಯಯ ಮಾಡಿಲ್ಲ. ಗಣತಂತ್ರ ವ್ಯವಸ್ಥೆಯಲ್ಲಿ ನಮ್ಮ ಜಿಲ್ಲೆಗಳಿಗೆ ಎಕೆ? ಕರಾವಳಿ ಪ್ರದೇಶದಿಂದ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ 350 ಟಿಎಂಸಿ ನೀರನ್ನು (ಶೇ.10) ನಮಗೆ ನೀಡಿದರೆ ಸಾಕು ನಮ್ಮ 6 ಜಿಲ್ಲೆಗಳ 2 ಕೋಟಿ ಜನರ ಬದುಕು ಹಸನಾಗುತ್ತದೆ. ಈ ಬಗ್ಗೆ ಕರಾವಳಿ ಜನರ ಅಕ್ಷೇಪಣೆ ಇಲ್ಲ. ಆದರೆ ಸರ್ಕಾರವು ಪರಮಶಿವಯ್ಯ ಯೋಜನೆ ಜಾರಿ ತಂದು ಕರಾವಳಿ ಪ್ರದೇಶದಿಂದ ಕೋಲಾರ ಜಿಲ್ಲೆಯವರೆಗೆ ಸಿಗುವ ಬರಡಾಗಿರುವ 18 ನದಿಗಳಿಗೆ ಸಂಪರ್ಕ ಮಾಡಬೇಕು. ಇದರಿಂದ ನದಿಗಳು ಜೀವತಳೆದು 26 ಲಕ್ಷ ಎಕರೆ ಪ್ರದೇಶ ಹಸಿರುಗೊಳಿಸಬಹುದು ಎಂದರು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಣ್ಣು ತೆರಸಬೇಕಾಗಿದೆ. ಇದಕ್ಕೆ ಜನಾಂದೋಲನ ನಡೆಯಬೇಕಾಗಿದೆ. 2 ಕೋಟಿ ಜನರ ಬದುಕಿನ ಪ್ರಶ್ನೆಯಾಗಿರುವ ಈ ಶಾಶ್ವತ ನೀರಾವರಿ ಹೋರಾಟ ಬಗ್ಗೆಯ ವರದಿಗಳು ವಿಧಾನಸೌಧ, ಸಂಸದ್ ಭವನ ತಲುಪಬೇಕಾಗಿದೆ. ಆದರೆ ವರದಿಗಳು ನಮ್ಮ ಜಿಲ್ಲೆಗಳನ್ನು ದಾಟಿ ಮುಂದೆ ಹೋಗದಿರುವುದು ಹೋರಾಟಕ್ಕೆ ಹಿನ್ನೆಡೆಯಾಗಿದೆ. ಇನ್ನಾದರೂ ಮಾಧ್ಯಮದವರು, ರಾಜಕೀಯ ವ್ಯಕ್ತಿಗಳು ಹಾಗೂ ಹೋರಾಟಗಾರರು ಒಂದೇ ವೇದಿಕೆ ಮೂಲಕ ಪರಮಶಿವಯ್ಯ ವರದಿಯಂತೆ ಶಾಶ್ವತ ನೀರಾವರಿ ಯೋಜನೆ ಜಾರಿ ತರುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷ್ಣೇಬೈರೇಗೌಡ ನೇತೃತ್ವದಲ್ಲಿ ಪ್ರಧಾನಮಂತ್ರಿ, ಕೇಂದ್ರ ಅರ್ಥಿಕ ಸಮಿತಿಯ ಮಾಂಟಿಕ್ ಅಹುವಾಲಿಯಾ ಹಾಗೂ ರಾಹುಲ್ ಗಾಂಧಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು. ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾಲೂರು ಅಶ್ವಥ್ ರೆಡ್ಡಿ ಮಾತನಾಡಿದರು. ಗೋಪಾಲ್ಗೌಡ, ಮುನಿನಾರಾಯಣಪ್ಪ, ಎಸ್.ಟಿ. ನಾರಾಣಪ್ಪ, ಪ್ರಶಾಂತ್ ಕುಮಾರ್, ಡಿ.ಎಂ. ವೆಂಕಟೇಶ್, ವೆಂಕಟಾಚಲಪತಿ, ಗೋಪಿನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.