ಕೋಲಾರ

'ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸಿ'

Published On :

ಕ.ಪ್ರ.ವಾರ್ತೆ     ಕೋಲಾರ     ಆ.12
ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಜನಾಂಗದ ಮೀಸಲಾತಿಯನ್ನು ಶೇ.3 ರಿಂದ ಶೇ.7.5ಕ್ಕೆ ಹೆಚ್ಚಳ ಮಾಡಬೇಕು, ಎಸ್ಟಿ ಎಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಶ್ರೀ ವಾಲ್ಮೀಕಿ ನಾಯಕ ಸಂಘದಿಂದ ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಮುಖಂಡರ ನಿಯೋಗವು ಸೋಮವಾರ ಅಪರ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರಿಗೆ ಮನವಿ ಅರ್ಪಿಸಿ, ರಾಜ್ಯದಲ್ಲಿ 1951ರ ಜನಗಣತಿ ಪ್ರಕಾರ ಎಸ್ಟಿ ಜನಾಂಗದವರಿಗೆ ಶೇ.3ರಷ್ಟು ಮೀಸಲಾತಿ ನೀಡಲಾಗಿತ್ತು. ಈಗ ಜನಸಂಖ್ಯೆ ಹೆಚ್ಚಿರುವುದರಿಂದ ಶೇ.7.5 ಮೀಸಲಾತಿ ನೀಡಬೇಕೆಂದು ಶ್ರೀ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಎಂ.ಬಾಲಗೋವಿಂದ ಆಗ್ರಹಿಸಿದರು.
ಕೆಲವರು ಎಸ್ಟಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ದುರ್ಬಳಿಕೆ ಮಾಡಿರುವುದರ ವಿರುದ್ಧ ತನಿಖೆ ನಡೆಸಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು, ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಏಕಲವ್ಯ ತರಬೇತಿ ಶಾಲೆ ಸ್ಥಾಪಿಸಬೇಕು, ಸಿ.ಆರ್.ಇ ಸೆಲ್ ಪೊಲೀಸ್ ಘಟಕವನ್ನು ರದ್ದು ಮಾಡಿ ಈ ಘಟಕದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಪ್ರಕರಣಗಳನ್ನು ಸಿಐಡಿಗೆ ವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಹಣಕಾಸು ಸಂಸ್ಥೆಯಿಂದ ಎಸ್ಟಿ ಜನಾಂಗಕ್ಕೆ ಶೇ.4ರ ಬಡ್‌ಡಿ ದರದಲ್ಲಿ ಸಾಲ, ಅಂತರಜಾತಿ ವಿವಾಹಕ್ಕೆ ಪ್ರೋತ್ಸಾಹ ಧನ,ರಾಜ್ಯದ ವಿವಿಧ ನಿಗಮ, ಮಂಡಳಿಗಳಿಗೆ ನಾಯಕ ಜನಾಂಗದವರ ನೇಮಕ, ಜಿಲ್ಲಾ ಕೇಂದ್ರದಲ್ಲಿ ವಾಲ್ಮೀಕಿ ವಸತಿ ಶಾಲೆಗಳ ಸ್ಥಾಪನೆ, ಬೆಂಗಳೂರಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ ಸೇರಿದಂತೆ ಒಟ್ಟು 21 ಬೇಡಿಕೆಗಳನ್ನು ಈಡೇರಿಸಲು ಹಕ್ಕೊತ್ತಾಯ ಮಂಡಿಸಲಾಯಿತು.
ಈ ಸಂದರ್ಭದಲ್ಲಿ ನಾಯಕ ಜನಾಂಗದ ಮುಖಂಡರಾದ ಟಿ.ಕೆ.ನಾಗರಾಜು, ಡಿ.ಹೆಚ್.ಕೆ. ವೆಂಕಟೇಶ್, ವೈ.ಎಂ.ತಿಮ್ಮರಾಯಪ್ಪ, ಹೆಚ್. ಚಲಪತಿ, ಬೈಚ್ಚಪ್ಪ, ಸಿ.ಕೆ. ಶ್ರೀನಿವಾಸ್, ಮುನಿರಾಜ್, ರಂಗಪ್ಪ, ಅಂಬರೀಶ್, ಲೋಕೇಶ್, ಶಿವಕುಮಾರ್, ಆನಂದ, ಪಿಳ್ಳಪ್ಪ ನಾಯಕ, ಜಿ. ವೆಂಕಟಚಲ, ಚಂದ್ರಪ್ಪ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.