ಕೋಲಾರ

ಖಾಲಿಯಿರುವ ಸ್ಥಾನಗಳಿಗೆ ವೈದ್ಯರ ನೇಮಕಕ್ಕೆ ಕದಸಂಸ ಆಗ್ರಹ

Published On :

ಕ.ಪ್ರ.ವಾರ್ತೆ    ಕೆಜಿಎಫ್    ಆ. 13
ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಖಾಲಿಯಿರುವ ಸ್ಥಾನಗಳಿಗೆ ವೈದ್ಯರನ್ನು ನೇಮಿಸಬೇಕು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಧರಣಿ ನಡೆಸಲಾಯಿತು.  
ಈ ವೇಳೆ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಚಾಲಕ ಡಿ.ಚಿಕ್ಕಣ್ಣ ಹಾಗೂ ತಾಲೂಕು ಸಂಚಾಲಕ ಎಂ.ನರಸಿಂಹ ಅವರು ಭಾರತದ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಲು ಈವರೆಗೆ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಸಹ ವಿಫಲವಾಗಿವೆ. ಈ ಕಾರಣಕ್ಕಾಗಿ ನಮ್ಮ ದೇಶದಲ್ಲಿ ಇಂದಿಗೂ ಹಸಿವು, ಬಡತನ, ನಿರುದ್ಯೋಗ, ಶೋಷಣೆ, ದೈರ್ಜನ್ಯಗಳು ಜೀವಂತವಾಗಿವೆ. ಇದಕ್ಕೆ ಉದಾಹರಣೆಯಾಗಿ ಕೆಜಿಎಫ್ನ ಸಾರ್ವಜನಿಕ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 10 ವರ್ಷಗಳಿಂದ 16 ವೈದ್ಯರುಗಳ ಪೈಕಿ 4 ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಬಡ ಹಾಗೂ ಗ್ರಾಮೀಣ ಭಾಗದ ರೋಗಿಗಳಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ, ಕುಡಿಯುವ ನೀರಿಲ್ಲ, ಆಸ್ಪತ್ರೆಗೆ ಸರಿಯಾದ ಕಾಂಪೌಂಡ್ ನಿರ್ಮಿಸಿಲ್ಲ. ಆಸ್ಪತ್ರೆಯಲ್ಲಿ ಸರಿಯಾದ ಉಪಕರಣಗಳಿಲ್ಲ. ಇನ್ನು ಹಲವಾರು ಸಮಸ್ಯೆಗಳಿದ್ದರು ಸರ್ಕಾರವಾಗಲೀ ಅಥವಾ ಕ್ಷೇತ್ರದ ಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲೀ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಅದೇ ರೀತಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಶಾಲೆಗಳು ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಈವರೆಗೆ ಸಮವಸ್ತ್ರ, ನೋಟ್ ಪುಸ್ತಕ, ಲೇಖನಿ ಸಾಮಗ್ರಿಗಳ ವಿತರಿಸಿಲ್ಲ. ಮಕ್ಕಳಿಗೆ ಊಟ ತಿಂಡಿ ಸರಿಯಾಗಿ ನೀಡುತ್ತಿಲ್ಲ, ಹಾಗೆಯೇ ಆಹಾರ ಸರಬರಾಜು ಇಲಾಖೆ ವತಿಯಿಂದ ವಿತರಿಸುತ್ತಿರುವ ಪಡಿತರ ಚೀಟಿಗಳಲ್ಲಿ ಹಲವಾರು ಲೋಪದೋಷಗಳು ಇದ್ದು, ನಕಲೀ ಚೀಟಿಗಳನ್ನು ನೀಡಿರುತ್ತಾರೆ. ಇವುಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಬಡವರಿಗೆ ಕೂಡಲೇ ಪಡಿತರ ಚೀಟಿಗಳನ್ನು ವಿತರಿಸಬೇಕು, ಕೆಜಿಎಫ್ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಕೆಜಿಎಫ್ ಕ್ಷೇತ್ರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ, ಉಪತಹಸೀಲ್ದಾರ್ ಇನಾಯತ್ತುಲ್ಲಾಖಾನ್, ಪೌರಾಯುಕ್ತ ವಿ.ಬಾಲಚಂದರ್, ಉಪರಕ್ಷಣಾಧಿಕಾರಿ ರಾಜಣ್ಣ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಶಿವಕುಮಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಜಿಲ್ಲಾ ಸಂಚಾಲಕ ಸಿದ್ದಘಟ್ಟ ಶ್ರೀನಿವಾಸ್, ಕೆ.ಆರ್.ಮಂಜುನಾಥ್, ಟಿ.ನಾಗರಾಜ್, ಆರ್.ಮುತ್ತುಕುಮಾರ್, ಜಿ.ರಘುಪತಿ, ಜಿ.ಸತ್ಯವೇಲು, ಸಿ.ಶ್ರೀನಿವಾಸ್, ಲೋಗನಾಥನ್, ಮಸೂದ್ಉಮ್ರಾನ್, ಸಮಿತಿ ಸದಸ್ಯರಾದ ರಮಣ್ಕುಮಾರ್, ಚೆನ್ನಕೃಷ್ಣ, ಕೆ.ಪಳನಿ, ರವೀಂದ್ರಕುಮಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.