ಸೌಲಭ್ಯಗಳಿಲ್ಲದೇ ಸೊರಗಿದ ಟೇಕಲ್ ಸರ್ಕಾರಿ ಆಸ್ಪತ್ರೆ
ಕ.ಪ್ರ.ವಾರ್ತೆ ಟೇಕಲ್ ಆ. 13
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನೆರವು ದೂರ. ಆರೋಗ್ಯ ಸೇವೆಗೆ ಸಿಬ್ಬಂದಿ ಕೊರತೆ. ಮಹಿಳಾ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಇರುವ ವೈದ್ಯರಿಗೆ ವಸತಿ ಸೌಕರ್ಯವಿಲ್ಲದೆ ಆಸ್ಪತ್ರೆಗೆ ಬರುವುದು ವಿಳಂಬವಾಗುತ್ತಿದೆ. ಎಲ್ಲಾ ರೀತಿಯ ವೈದ್ಯಕೀಯ ಸೇವೆ ಸರ್ಕಾರ ನೀಡುತ್ತಿದ್ದರೂ ಕೆಲ ಸೇವೆಗಳು ಇಲ್ಲಿ ಸಿಗುವುದು ಕಷ್ಟಕರ ಏಕೆಂದರೆ, ತನ್ನದೆ ಆದ ಸಮಸ್ಯೆಗಳನ್ನು ಮಡಿಲಲ್ಲಿ ಹೊತ್ತುಕೊಂಡಿದೆ.
ಟೇಕಲ್ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಯಲ್ಲಿ ಹುಳದೇನಹಳ್ಳಿ, ತೊರಲಕ್ಕಿ ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿವೆ. ಹುಳದೇನಹಳ್ಳಿಯಲ್ಲಿ ಇದೀಗ ಕಟ್ಟಡದ ಕಾಮಗಾರಿ ಪ್ರಾರಂಭಗೊಂಡಿದೆ. ತೊರಲಕ್ಕಿಯಲ್ಲಿ ಸುಸಜ್ಜಿತ ಆಸ್ಪತ್ರೆ ಆರೋಗ್ಯ ಸೇವೆ ನಡೆಯುತ್ತಿದೆ. ಆದರೆ, ಟೇಕಲ್ ಆಸ್ಪತ್ರೆಗೆ ಒಳಪಟ್ಟಂತೆ ಒಟ್ಟು 7 ಉಪ ಆರೋಗ್ಯ ಕೇಂದ್ರಗಳು, 7 ಹಿರಿಯ ಆರೋಗ್ಯ ಮಹಿಳಾ ಸಹಾಯಕರು ಕೆಲಸ ಮಾಡುತ್ತಿವೆ. ಆನೇಪುರ, ಚಿಕ್ಕಕುಂತೂರು, ಟೇಕಲ್, ಹುಣಸಿಕೋಟೆಗಳಲ್ಲಿ ಈ ಕೇಂದ್ರಗಳಿಗೆ ತನ್ನದೆ ಆದ ಸ್ವಂತ ಕಟ್ಟಡಗಳಿದೆ ಇನ್ನು ಕೆ.ಜಿ.ಹಳ್ಳಿ, ನೆಲ್ಲಹಳ್ಳಿ, ಕೊಂಡಶೆಟ್ಟಹಳ್ಳಿಯಲ್ಲಿ ಕಟ್ಟಡ ವ್ಯವಸ್ಥೆ ಇಲ್ಲದೆ ತೊಂದರೆಯಾಗಿದೆ.
ಒಟ್ಟಾರೆ 6 ಗ್ರಾ.ಪಂ.ಗಳನ್ನು ತನ್ನ ವ್ಯಾಪ್ತಿಗೆ ಒಳಪಡುವ ಟೇಕಲ್ ಆಸ್ಪತ್ರೆಗೆ ಪ್ರತಿದಿನ ಬಹುತೇಕ ಜನ ರೋಗಿಗಳು ತುಂಬಿರುತ್ತಾರೆ. ಆದರೆ, ಸಮಯಕ್ಕೆ ಮಾತ್ರ ವೈದ್ಯರು ಸಿಗುವುದು ಕಷ್ಟ, ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಮಹಿಳಾ ನರ್ಸ್ಗಳೇ ದಿನದ 24 ಗಂಟೆಗಳಲ್ಲಿ ಜನರಿಗೆ ಚಿಕಿತ್ಸೆ ನೀಡಬೇಕಾಗಿದೆ. ಇಲ್ಲಿಯೂ ಸಹ ನರ್ಸ್ಗಳು ತಮ್ಮ ಪಾಳಿ ಬದಲಾಯಿಸುವ ವೇಳೆಯಲ್ಲಿ ಒಮ್ಮೊಮ್ಮೆ ಒಂದರಿಂದ ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಯಾರೂ ಇರುವುದಿಲ್ಲ.
ಸ್ಟಾಫ್ನರ್ಸ್ ಹುದ್ದೆ ಖಾಲಿ ಇದ್ದು ಮಹಿಳಾ ವೈದ್ಯರೆ ಇಲ್ಲದೆ ಹೆಂಗಸರಿಗೆ ಮತ್ತು ಮಕ್ಕಳಿಗೆ ಬಹಳ ತೊಂದರೆಯಾಗಿದೆ. ಈ ಆಸ್ಪತ್ರೆಗೆ ಮಹಿಳಾ ವೈದ್ಯರ ಅಗತ್ಯವಿದೆ. ವೈದ್ಯರಿಗೆ ಇರಲು ವಸತಿ ಗೃಹಗಳು ಇದ್ದರೆ ಸೇವೆ ಮಾಡಲು ಅನುಕೂಲ. ಇನ್ನು ಆಸ್ಪತ್ರೆ ಒಳಗಡೆ 6 ರಿಂದ 7 ಹಾಸಿಗೆಗಳು ಇದ್ದು ಸ್ವಲ್ಪ ಸ್ವಚ್ಛತೆಯಲ್ಲಿ ಏರುಪೇರಾಗಿದೆ. ಆರೋಗ್ಯ ಸಹಾಯಕರ 1 ಹುದ್ದೆ ಖಾಲಿ ಇದೆ. ನಿರಂತರ 24 ಗಂಟೆಗಾಗಿ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ನೀಡಿದರೆ ಅಪಘಾತ ಸಂಭವಿಸಿದಾಗ ನೆರವಾಗುತ್ತದೆ. ಈ ಹಿಂದೆ ಈ ಕ್ಷೇತ್ರದ ಜಿ.ಪಂ. ಸದಸ್ಯೆ ರತ್ನಮ್ಮ ನಂಜೇಗೌಡ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಪತ್ರೆಯ ಮೇಲ್ಛಾವಣೆ ಸರಿಪಡಿಸಲು ತಿಳಿಸಿದ್ದು ಜಿ.ಪಂ. ವತಿಯಿಂದ ಆ ಕಾಮಗಾರಿ ಉತ್ತಮವಾಗಿ ಮುಗಿದಿದೆ.
ಈ ಹಿಂದೆ ಆರೋಗ್ಯ ಶಿಬಿರದ ಅಂಗವಾಗಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಮಹಿಳಾ ವೈದ್ಯರ ಕೊರತೆ, ಔಷಧಿಗಳ ಕೊರತೆ ಬಗ್ಗೆ ಮನವಿ ಮಾಡಲಾಗಿತ್ತು. ಆದರೆ ಇದುವರೆವಿಗೂ ಬೇಡಿಕೆ ಈಡೇರಿಲ್ಲ. ನೂತನ ಶಾಸಕ ಮಂಜುನಾಥಗೌಡ ಈ ಬಗ್ಗೆ ಗಮನ ಹರಿಸಿ ಟೇಕಲ್ ಸರ್ಕಾರಿ ಆಸ್ಪತ್ರೆಯನ್ನು ಉನ್ನತ ದರ್ಜೆಗೆ ಏರಿಸಲು ಸಹಕರಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

