ಸ್ವಾತಂತ್ರ್ಯ ದಿನಾಚರಣೆಗೆ ನಗರಸಭೆ 10 ಲಕ್ಷ ದೇಣಿಗೆ!
ಕ.ಪ್ರ.ವಾರ್ತೆ ಕೋಲಾರ ಆ.14
ಕುಡಿಯುವ ನೀರು, ಮೂಲ ಸೌಕರ್ಯಗಳಿಗೆ ಹಣವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಕೋಲಾರ ನಗರಸಭೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕೋಲಾರ ಘಟಕ ಸ್ವಾತಂತ್ರ್ಯ ದಿನಾಚರಣೆಗಾಗಿ ಕೇಳಿದ ಆರ್ಥಿಕ ನೆರವು ಪರಿಗಣಿಸಿ ಧಾರಾಳವಾಗಿ ರು.10 ಲಕ್ಷ ದೇಣಿಗೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಹೌದು... ಈ ಸಂಬಂಧ ನಗರಸಭೆ ದೇಣಿಗೆ ಚೆಕ್ ನೀಡಿರುವುದಂತೂ ಸತ್ಯ.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯೇ ಇಷ್ಟು ದೊಡ್ಡ ಮೊತ್ತದ ಹಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲು ಪರದಾಡುತ್ತಿರುವಾಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ನಗರಸಭೆ ರು. 10 ಲಕ್ಷ ಚೆಕ್ ಬರೆದುಕೊಟ್ಟಿರುವುದು ನಗರಸಭೆಯ ಸದಸ್ಯರಿಗೆ ಮಾತ್ರವಲ್ಲದೆ ದೇಣಿಗೆ ಕೇಳಿದವರನ್ನು ದಂಗು ಬಡಿಸಿದೆ.
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ: ಈ ಮೂಲಕ ನಗರಸಭೆ ಆರ್ಥಿಕವಾಗಿ ಸುಭದ್ರವಾಗಿದೆ ಎಂಬುದನ್ನು ಸಾಬೀತು ಮಾಡಿದ್ದಾರಲ್ಲದೆ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬ ಗಾದೆ ನಿಜ ಮಾಡಿದ್ದಾರೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಉಪಾಧೀಕ್ಷಕರು ಸ್ವಾತಂತ್ರ್ಯ ದಿನಾಚರಣೆಗಾಗಿ ಶೇ.22.5ರ ಅನುದಾನದಲ್ಲಿ ಕೈಲಾದಷ್ಟು ಆರ್ಥಿಕ ಸಹಾಯ ಮಾಡುವಂತೆ ಆ.12ರಂದು ಕೋಲಾರ ನಗರಸಭೆ ಪೌರಾಯುಕ್ತರಿಗೆ ಪತ್ರ ಮುಖೇನ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಪೌರಾಯುಕ್ತರು ಆ.14 ರಂದು ಪ್ರತ್ಯುತ್ತರ ನೀಡಿ ಸರ್ಕಾರದ ಸುತ್ತೋಲೆಯಂತೆ ತಾವು ಕೋರಿರುವ ಬಾಬ್ತಿಗೆ ದೇಣಿಗೆ ನೀಡಲು ನಿಯಮಾನುಸಾರ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳ ಕ್ರಿಯಾಯೋಜನೆಯಲ್ಲಿ ಸಹ ಮಂಜೂರಾಗಿರುವುದಿಲ್ಲ, ತಮ್ಮೊಡನೆ ಚರ್ಚಿಸಿದಂತೆ ಹಾಗೂ ತಾವು ಸೂಚಿಸಿದಂತೆ ಸಮುದಾಯ ಸೌಲಭ್ಯಗಳು(ಶಿಕ್ಷಣ) ಶೀರ್ಷಿಕೆಯಡಿಯಲ್ಲಿ ಇತರೆ ಬಡ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿ ನಿಲಯಗಳನ್ನು ಉನ್ನತೀಕರಿಸುವ ಯೋಜನೆಗೆ ಮೀಸಲಿಟ್ಟಿರುವ ರು. 10 ಲಕ್ಷ ಬದಲಾಯಿಸಿ ತಮ್ಮ ಕಚೇರಿಯ ಆವರಣದಲ್ಲಿ ಆ.15ರಂದು ಹಮ್ಮಿಕೊಂಡಿರುವ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಈ ಕಚೇರಿ ಟ್ರಜರಿ ಚೆಕ್ ಸಂಖ್ಯೆ 269466 ದಿನಾಂಕ 14.8.2013ರಂತೆ 10 ಲಕ್ಷ ರು.ಗಳ ಚೆಕ್ನ್ನು ಕಳುಹಿಸಿರುವುದಾಗಿ ನಾಗರಿಕ ಹಕ್ಕು ಜಾರಿ ಇಲಾಖೆಯ ಅಧಿಕಾರಿಗೆ ಕಳುಹಿಸಿಕೊಟ್ಟಿದ್ದಾರೆ.
ತಮ್ಮ ನಿರೀಕ್ಷೆಗಿಂತ ಹೆಚ್ಚಿನ ಮೊತ್ತದ ಹಣವನ್ನು ಚೆಕ್ ಮೂಲಕ ಕಳುಹಿಸಿರುವ ನಗರಸಭೆ ಆಯುಕ್ತರ ಕ್ರಮಕ್ಕೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
10 ಲಕ್ಷ ರು.ಗಳ ಚೆಕ್ ಅನ್ನು ಸ್ವೀಕರಿಸಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

