ಕರಾವಳಿ ಜನತೆಗೆ ತೊಂದರೆ ಆಗದಂತೆ ಶಾಶ್ವತ ನೀರಾವರಿ ಜಾರಿ ಮಾಡಿ
ಕನ್ನಡಪ್ರಭ ವಾರ್ತೆ ಕೋಲಾರ ಆ.15
ಕರಾವಳಿ ಪ್ರದೇಶದ ಜನತೆಯಲ್ಲಿನ ಕೆಲ ಪ್ರಮುಖ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ನಿವಾರಣೆ ಮಾಡಿದಲ್ಲಿ ಬಯಲು ಸೀಮೆಗೆ ಸೇರಿದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇನ್ನಿತರ ಜಿಲ್ಲೆಗಳಿಗೆ ಪಶ್ಚಿಮಘಟ್ಟದಿಂದ ನೀರು ಕೊಡುವುದಕ್ಕೆ ಅಲ್ಲಿನ ಜನತೆ ಒಪ್ಪಿಗೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಯು.ಟಿ. ಖಾದರ್ ತಿಳಿಸಿದರು.
ನಗರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಎದುರಾದ ಹತ್ತಾರು ಪ್ರಶ್ನೆಗಳಿಗೆ ಯಾವುದೇ ಅಳಕು-ಅಂಜಿಕೆ ಇಲ್ಲದೆ ನಿರಾಳವಾಗಿ ಉತ್ತರ ನೀಡಿದ ಸಚಿವರು, ಕರಾವಳಿಯ ಜನತೆ ಬೇರೆಯವರಿಗೆ ತೊಂದರೆ ನೀಡುವವರಲ್ಲ, ಸಹಕಾರ ನೀಡುವ ಮನಸ್ಸುಳ್ಳ ಜನರಾಗಿದ್ದಾರೆ, ಡಾ. ಪರಮಶಿವಯ್ಯ ವರದಿಯನ್ನು ಅನುಷ್ಠಾನಕ್ಕೆ ತರುವ ಮುನ್ನ ರಾಜ್ಯ ಸರ್ಕಾರ ಅಲ್ಲಿನ ಜನತೆಯ ಕೆಲ ಸಮಸ್ಯೆಗಳನ್ನು ಈಡೇರಿಸಬೇಕಾಗುತ್ತದೆ, ಈ ಸಂಬಂಧ ತಾವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡುತ್ತೇನೆಂದರು. ಎತ್ತಿನಹೊಳೆ ಯೋಜನೆ ಡಾ. ಪರಮಶಿವಯ್ಯ ವರದಿಯ ಒಂದು ಭಾಗವಾಗಿದೆ, ಸರ್ಕಾರ ಈಗಾಗಲೇ ಈ ಯೋಜನೆ ಅನುಷ್ಠಾನಕ್ಕೆ ತಯಾರಿ ನಡೆಸಿದೆ, ಶೀಘ್ರವೇ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಯಾವುದೇ ಒಂದು ದೊಡ್ಡ ಹಾಗೂ ದೂರದೃಷ್ಟಿಯುಳ್ಳ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಾದರೆ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಸಮಯ ಬೇಕಾಗುತ್ತದೆ, ಸರ್ಕಾರ ನೀಡಿರುವ ಭರವಸೆ ಈಡೇರುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಪರಮಶಿವಯ್ಯ ವರದಿಯ ವಿಚಾರದಲ್ಲಿ ಕರಾವಳಿ ಪ್ರದೇಶದ ಜನತೆಯಲ್ಲಿ ಇರುವ ಸಂಶಯ ನಿವಾರಣೆ ಆಗಬೇಕಾಗಿದೆ, ಜತೆಗೆ ಅಲ್ಲಿನ ಜನತೆಯ ಕೆಲ ಪ್ರಮುಖ ಸಮಸ್ಯೆಗಳು ನಿವಾರಣೆ ಮಾಡಿದಲ್ಲಿ ಖಚಿತವಾಗಿ ಇಲ್ಲಿನ ಜನತೆಯ ಸಮಸ್ಯೆ ನಿವಾರಣೆ ಆಗುತ್ತದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಬೇಕಾಗಿರುವ ರೈಲ್ವೆ ಯೋಜನೆಗಳಿಗೆ ಜಿಲ್ಲಾ ಆಡಳಿತದಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ
ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ ಈ ಕುರಿತು ಖರ್ಗೆಯವರ ಜತೆ ಚರ್ಚಿಸಿ ಅವರ ಸಲಹೆ ಸೂಚನೆ ಪಾಲಿಸುವುದಾಗಿ ನುಡಿದರು.
ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ವಿರುದ್ಧ ಪತ್ರಕರ್ತರ ಕೇಳಿದ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಆಡಳಿತದಲ್ಲಿ ಸುಧಾರಣೆ ತರಲು ಮೇಜರ್ ಸರ್ಜರಿ ಆಗಬೇಕಾಗಿದೆ, ಶೀಘ್ರವೇ ಹೊಸ ಜಿಲ್ಲಾಧಿಕಾರಿ ಬರಲಿದ್ದಾರೆ, ಇನ್ನು ಎರಡು ತಿಂಗಳಲ್ಲಿ ಜಿಲ್ಲೆಯ ಆಡಳಿತ ಸುಧಾರಣೆ ಆಗುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ತಾವು ಆರೋಗ್ಯ ಇಲಾಖೆಯ ಸಚಿವರಾದ ನಂತರ ತಮ್ಮ ಸ್ವಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡಲು ಆಗುತ್ತಿಲ್ಲ, ಇನ್ನು 20 ಜಿಲ್ಲೆಗಳಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಪ್ರವಾಸ ಕೈಗೊಳ್ಳಬೇಕಾಗಿದೆ. ಜೊತೆಗೆ ಉಪ ಚುನಾವಣೆಯ ಕಾರ್ಯದಲ್ಲಿ ಸಹ ಭಾಗಿಯಾಗಿರುವುದರಿಂದ ಕೋಲಾರ ಜಿಲ್ಲೆಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಇಲ್ಲಿನ ಜನತೆಯ ನಿರೀಕ್ಷೆಯಂತೆ ಕೆಲಸ ಮಾಡುವುದಾಗಿ ಹೇಳಿದರು.
ಜಿಲ್ಲೆಯ ಆಡಳಿತಕ್ಕೆ ಭದ್ರ ಬುನಾದಿ ಇಲ್ಲದಂತಾಗಿದೆ, ಕ್ರಾಂತಿಕಾರಿ ಬದಲಾವಣೆ ಆಗಬೇಕಾಗಿದೆ, ಉಪ ಚುನಾವಣೆ ನಂತರ ಜಿಲ್ಲೆಗೆ ಭೇಟಿ ನೀಡಿ ಆಡಳಿತಕ್ಕೆ ಚುರುಕು ಮುಟ್ಟಿಸುವೆ ಎಂದರು. ಸಮಸ್ಯೆಗಳು ಸಾಕಷ್ಟು ಇವೆ. ಜನತೆಯ ನಿರೀಕ್ಷೆಗಳು ಹೆಚ್ಚಾಗಿದೆ. ಹೊಸ ಸರ್ಕಾರ ಬಂದ ನಂತರ ಒತ್ತಡಗಳ ನಡುವೆ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಎಲ್ಲವನ್ನು ಒಮ್ಮೆಗೆ ಬಗೆಹರಿಸುವುದು ಕಷ್ಟ, ಆದ್ಯತೆಯ ಮೇರೆಗೆ ಸಮಸ್ಯೆ ನಿವಾರಣೆ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ, ಜಿಪಂ ಸಿಇಒ ಜುಲ್ಫಿಖಾರ್ ಉಲ್ಲಾ, ಜಿಲ್ಲಾ ಎಸ್ಪಿ ಡಾ.ರಾಮ್ನಿವಾಸ್ ಸಫಟ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

