ನಂದಿಬೆಟ್ಟ ಸಮಗ್ರ ಅಭಿವೃದ್ಧಿಗೆ ಸರ್ಕ್ಯುಟ್ ಯೋಜನೆ
ಚಿಕ್ಕಬಳ್ಳಾಪುರ: ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು ಶುಕ್ರವಾರ ವಿಶ್ವವಿಖ್ಯಾತ ನಂದಿ ಗಿರಿಧಾಮ, ನಂದಿಯ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯ ಮತ್ತು ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮೊದಲು ನಂದಿ ಗಿರಿಧಾಮಕ್ಕೆ ತೆರಳಿದ ಸಚಿವರು, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಇಡೀ ವಿಶ್ವದ ಗಮನ ಸೆಳೆಯುತ್ತಿರುವ ಪ್ರವಾಸಿತಾಣ ನಂದಿ ಗಿರಿಧಾಮದ ಮತ್ತಷ್ಟು ಅಭಿವೃದ್ಧಿಗಾಗಿ ಕೈಗೊಳ್ಳಬೇಕಾಗಿರುವ ಯೋಜನೆಗಳು, ಅಗತ್ಯವಿರುವ ಅನುದಾನ, ಸದ್ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸಚಿವರು, ನಂದಿ ಗಿರಿಧಾಮವು ತನ್ನದೆ ಇತಿಹಾಸ ಹೊಂದಿರುವುದಲ್ಲದೇ ಪ್ರಾಕೃತಿಕ ಸೊಬಗಿನಿಂದ ಆಕರ್ಷಕ ಪ್ರವಾಸಿ ತಾಣ ಎನಿಸಿಕೊಂಡಿದೆ. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು ಇಲ್ಲಿ ಅಭಿವೃದ್ಧಿ ಕಾರ್ಯಗಳು ಇನ್ನೂ ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು ಗಿರಿಧಾಮ ಅಭಿವೃದ್ಧಿಪಡಿಸುವಲ್ಲಿ ಬದ್ಧತೆ ಹೊಂದಿದೆ ಎಂದರು.
ನಂದಿಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ನಂದಿ ಸರ್ಕ್ಯುಟ್ ಯೋಜನೆಯನ್ನು ರೂಪಿಸಿ, ಈ ಕುರಿತು ಚರ್ಚೆ ನಡೆಸಿದ್ದು ಈಗಾಗಲೇ ಅಂತಿಮ ಘಟಕ್ಕೆ ತಲುಪಿದೆ. ಆದಷ್ಟು ಬೇಗ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದರು.
ಪ್ರಚಾರ ಕೈಗೊಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಂದಿ ದೇವಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಾಗೆಯೇ ಪ್ರಚಾರ ಕೈಗೊಳ್ಳಬೇಕು. ಇದರಿಂದ ಇಲ್ಲಿ ಕಲೆ ಹಾಗೂ ಪ್ರವಾಸೋದ್ಯಮ ಎರಡೂ ಬೆಳೆಯುತ್ತದೆ. ಜನ ಇನ್ನೂ ಹೆಚ್ಚಿಗೆ ಭೇಟಿ ನೀಡುತ್ತಾರೆ ಎಂದರು.
ನಂದಿ ಬೆಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಟೇಟ್ ಕಾರ್ಯ 8 ತಿಂಗಳಿಗೆ ಪೂರ್ಣಗೊಳ್ಳಬೇಕಿತ್ತು. ಆದರೆ ವರ್ಷದ ಮೇಲೆ ಎಂಟು ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲೇ ಇದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು, ನವೆಂಬರ್ ಒಳಗೆ ಕಾಮಗಾರಿ ಮುಗಿಸಲು ಸೂಚನೆ ನೀಡಿದರು.
ನಂದಿ ಬೆಟ್ಟದ ಅಭಿವೃದ್ಧಿ ಅರಣ್ಯ, ಲೋಕೋಪಯೋಗಿ, ತೋಟಗಾರಿಕೆ, ಪ್ರವಾಸೋದ್ಯಮ, ಮುಜರಾಯಿ ಸೇರಿದಂತೆ ನಾನಾ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಉಂಟಾಗಿದೆ. ಒಬ್ಬರ ಮೇಲೆ ಇನ್ನೊಬ್ಬರು ಕೈ ತೋರಿಸಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಆ.27ರಂದು ಎಲ್ಲಾ ಇಲಾಖೆಯ ಸಭೆ ಕರೆದಿದ್ದೇನೆ. ಇವರೆಲ್ಲರ ಸಹಕಾರದೊಂದಿಗೆ ಅಭಿವೃದ್ಧಿಯತ್ತ ಈ ತಾಣವನ್ನು ಕೊಂಡೊಯ್ಯಲಾಗುವುದು ಎಂದರು.
ಇನ್ನು ನಂದಿಬೆಟ್ಟ ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆ ಉಂಟಾಗಲು ಸಿಬ್ಬಂದಿ ಕೊರತೆ ಕಾರಣ. ವ್ಯವಸ್ಥಿತ ಕಾರ್ಯ ಆಗುತ್ತಿಲ್ಲ. ಸಿಬ್ಬಂದಿ ನೇಮಕದ ಅಗತ್ಯವಿದೆ ಎಂಬ ವಿಷಯವನ್ನು ಅಧಿಕಾರಿಗಳು ಸಭೆಯಲ್ಲಿ ಸಚಿವರಿಗೆ ತಿಳಿಸಿದರು.
ಬಳಕೆಯಾಗದ ಅನುದಾನ: ಶಾಸಕ ಕೆ.ಸುಧಾಕರ್ ಮಾತನಾಡಿ, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಗೆ ಹತ್ತಿರವಿರುವ ನಂದಿ ಗಿರಿಧಾಮವು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದಿಲ್ಲ. ಈ ಹಿಂದೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾಗುತ್ತ ಬಂದಿದ್ದರೂ ಸಹ ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ನಂದಿ ಗಿರಿಧಾಮದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಕೈಗೊಂಡು ಪ್ರವಾಸಿಗರನ್ನು ಸೆಳೆಯುವಂತೆ ಮಾಡಬೇಕೆಂದು ಮನವಿ ಮಾಡಿದರು.
ಸಭೆಗೆ ತೆರಳುವ ಮುನ್ನ ನಂದಿ ಬೆಟ್ಟದ ಸುತ್ತ ವೀಕ್ಷಿಸಿದ ಸಚಿವರು, ಗಿರಿಧಾಮದ ವಿವಿಧೆಡೆ ಕಂಡು ಬಂದ ಅಸ್ವಚ್ಛತೆಗೆ ಕಿಡಿಕಾರಿದರು. ಇಲ್ಲಿನ ಸ್ವಚ್ಛತೆ ಜತೆ ರಸ್ತೆ ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅರವಿಂದ ಜಾದವ್, ವ್ಯವಸ್ಥಾಪಕ ನಿರ್ದೇಶಕ ಸಿ.ಡಿ.ದ್ಯಾವಯ್ಯ, ಉಪ ನಿರ್ದೇಶಕ ಎಸ್.ಕೆ. ಹುಸೇನಿ, ಜಂಗಲ್ ರೆಸಾರ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಅವತಾರ್ ಸಿಂಗ್, ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ಮುಂತಾದವರು ಉಪಸ್ಥಿತರಿದ್ದರು.
ಗಣಿಗಾರಿಕೆಯಿಂದ ಧಕ್ಕೆ: ಕಲ್ಲು ಗಣಿಗಾರಿಕೆಯಿಂದಾಗಿ ಐತಿಹಾಸಿಕ ಪ್ರಸಿದ್ಧ ನಂದಿ ದೇವಾಲಯಕ್ಕೆ ಧಕ್ಕೆ ಉಂಟಾಗುತ್ತಿದ್ದು, ಇದನ್ನು ಕೂಡಲೇ ಸ್ಥಗಿತಗೊಳಿಸಲು ಆದೇಶಿಸಬೇಕೆಂದು ದೇವಾಲಯದ ಅರ್ಚಕರು ಹಾಗೂ ಸಾರ್ವಜನಿಕರು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಮನವಿ ಮಾಡಿದರು.
ಗಣಿಗಾರಿಕೆಯ ಪರಿಣಾಮ ದೇವಾಲಯದ ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆ ಬಂದಾಗ ಸೋರುತ್ತವೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ದೇವಾಲಯದ ರಥಕ್ಕೆ ಸ್ಥಳೀಯರೆಲ್ಲಾ ಸೇರಿ 40 ಲಕ್ಷ ವಿನಿಯೋಗಿಸಿದ್ದು, ಪೂರ್ಣಗೊಳಿಸಲು ಇನ್ನೂ 40 ಲಕ್ಷ ಹಣದ ಅಗತ್ಯವಿದೆ. ಅದನ್ನು ಸರ್ಕಾರದಿಂದ ನೀಡಬೇಕೆಂದು ಸ್ಥಳೀಯರು ಮನವಿ ಮಾಡಿದರು.
ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಗೆ ಹತ್ತಿರವಿರುವ ನಂದಿ ಗಿರಿಧಾಮವು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದಿಲ್ಲ. ಹಿಂದೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾಗುತ್ತ ಬಂದಿದ್ದರೂ ಸಹ ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ನಂದಿ ಗಿರಿಧಾಮದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಕೈಗೊಂಡು ಪ್ರವಾಸಿಗರನ್ನು ಸೆಳೆಯುವಂತೆ ಮಾಡಬೇಕು.
- ಶಾಸಕ ಕೆ. ಸುಧಾಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

