ಬರ ಸೀಮೆ ಕಲ್ಯಾಣಕ್ಕೆ ಆಘ್ಘನ್ ನಿಯೋಗ ಮೆಚ್ಚುಗೆ
ಕೋಲಾರ: ಅಫ್ಫಾನಿಸ್ತಾನದ ಮಾದರಿಯಲ್ಲೇ ಕೋಲಾರ ಜಿಲ್ಲೆಯ ಬಣಭೂಮಿ ಪ್ರದೇಶವಾಗಿದ್ದರೂ ಇಲ್ಲಿನ ರೈತರು ಹೈನುಗಾರಿಕೆ, ತೋಟಗಾರಿಕೆ ಹಾಗೂ ಸ್ವಸಹಾಯ ಗುಂಪುಗಳ ರಚನೆ ಮೂಲಕ ಅಭಿವೃದ್ಧಿ ಸಾಧಿಸುತ್ತಿರುವುದು ಸಂತಸ ಉಂಟು ಮಾಡಿದೆ ಎಂದು ಆಫ್ಘಾನಿಸ್ತಾನದ ಗ್ರಾಮೀಣ ಪುನರ್ವಸತಿ ಮತ್ತು ಅಭಿವೃದ್ಧಿ ಸಚಿವಾಲಯದ 11 ಹಿರಿಯ ಅಧಿಕಾರಿಗಳ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.
ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿ ಇರುವ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ನಡೆದ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಲು ದೇಶಕ್ಕೆ ಆಗಮಿಸಿದ ನಿಯೋಗವು ಕೋಲಾರ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿತ್ತು. ಹಿರಿಯ ಅಧಿಕಾರಿಗಳ ನಿಯೋಗ ಜಿಲ್ಲಾ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮೀಣ ಅಭಿವೃದ್ಧಿಯಲ್ಲಿ ಸಾಧಿಸಿರುವ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಪಿಖಾರ್ಉಲ್ಲಾ ಅವರಿಂದ ಸಂಗ್ರಹಣೆ ಮಾಡಿತು.
ಹೈನುಗಾರಿಕೆ ಬಗ್ಗೆ ವಿವರ: ಜಿಲ್ಲೆಯ ಜನತೆಯ ಮುಖ್ಯ ಕಾರ್ಯಚಟುವಟಿಕೆಗಳನ್ನು ಜಿಪಂ ಸಿಇಒ ನಿಯೋಗಕ್ಕೆ ವಿವರಿಸಿದರು. ಜಿಲ್ಲೆಯಲ್ಲಿ ಹಣ್ಣು, ತರಕಾರಿ, ರೇಷ್ಮೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಡೇರಿ ಉದ್ಯಮದಿಂದ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ವಹಿಸಿರುವ ಪಾತ್ರದ ಕುರಿತು ಮನವರಿಕೆ ಮಾಡಿಕೊಟ್ಟರು.
ಆಲಿಸಿದ ನಿಯೋಗ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಕಾಡುತ್ತಿರುವ ನಿರಂತರ ಬರ, ಕುಡಿಯುವ ನೀರಿಗೆ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಿಇಒ ಈ ಹಿಂದಿನ ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ತಮ್ಮ ಅವಧಿಯಲ್ಲಿ ಕೈಗೊಂಡ ಕಲ್ಯಾಣಿಗಳ ಪುನಶ್ಚೇತನ ಹಾಗೂ ಈ ಕಾರ್ಯದಲ್ಲಿ ಸ್ವತಃ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಖುದ್ದು ಶ್ರಮದಾನ ನಡೆಸಿದ್ದನ್ನು ವಿವರಿಸಿದಾಗ, ನಿಯೋಗ ಅಚ್ಚರಿಯ ಜೊತೆಗೆ ಮೆಚ್ಚುಗೆ ಸೂಚಿಸಿತು.
ನಿಯೋಗ ತಾಲೂಕಿನ ಕುಂಬಾರಹಳ್ಳಿಯಲ್ಲಿನ ಎಸ್ಜಿಎಸ್ ವೈ ಯೋಜನೆಯಡಿ ಸ್ವಸಹಾಯ ಸಂಘ ನಡೆಸುತ್ತಿರುವ ರೇಷ್ಮೆ ಸೀರೆ ನೇಯ್ಗೆ ಕೇಂದ್ರಕ್ಕೆ ಭೇಟಿ ನೀಡಿತು. ಅಲ್ಲಿಂದ ಹೊನ್ನೇನಹಳ್ಳಿಯಲ್ಲಿನ ರುಡ್ಸೆಟ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಿಯೋಗಕ್ಕೆ ಕೇಂದ್ರದ ನಿರ್ದೇಶಕ ಆರ್.ಬಾಲಸುಬ್ರಮಣ್ಯಂ ಇಲ್ಲಿನ ಕಾರ್ಯಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಗ್ರಾಮೀಣ ಕೈಗಾರಿಕಾ ತರಬೇತಿ ಕೇಂದ್ರದಲ್ಲಿನ ಕಾರ್ಯಚಟುಟಿಕೆಗಳು ಬಗ್ಗೆ ವೀಕ್ಷಿಸಿದ ನಿಯೋಗ, ಗ್ರಾಮೀಣ ಪ್ರದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉತ್ತಮ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿತಲ್ಲದೆ, ಬಣಭೂಮಿ ಪ್ರದೇಶವಾದ ಅಫ್ಘಾನಿಸ್ತಾನದಲ್ಲೂ ಅಂತರ್ಜಲ ಅಭಿವೃದ್ಧಿಗೆ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಕೋಲಾರ ಜಿಲ್ಲೆಯನ್ನು ಮಾದರಿಯಾಗಿ ಪರಿಗಣಿಸುವುದಾಗಿ ಹೇಳಿತು.
ಗ್ರಾಮೀಣ ಪುನರ್ವಸತಿ ಮತ್ತು ಅಭಿವೃದ್ಧಿ ಸಚಿವಾಲಯದ ಪಿಆರ್ಆರ್ಡಿ ನಿರ್ದೇಶಕ ಬೆಸೆಟ್ ಐನಿ, ಎಂಆರ್ಆರ್ಡಿ ನಿರ್ದೇಶಕ ಮಹಮದ್ ಸಿದ್ಧಿಕಿ, ಶಫೀಕ್ ಅಹಮದ್ ಅಲ್ಮಿಯಾರ್, ಅಬ್ದುಲ್, ಜಿಯಾವುದ್ದೀನ್ ಅಮ್ರಿ, ಅಬ್ದುಲ್ ರೆಹಮಾನ್ ಮತ್ತಿತರರು ನಿಯೋಗದಲ್ಲಿದ್ದರು. ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ ನಿಯೋಗಕ್ಕೆ ಜಿಲ್ಲೆಯ ಸ್ಥಿತಿಗತಿ ಕುರಿತು ಹೆಚ್ಚಿನ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

