ಆದರ್ಶವಿಲ್ಲದ ಆದರ್ಶ ವಿದ್ಯಾಲಯ
ಕೆ. ರಮೇಶ್
ಬಂಗಾರಪೇಟೆ: ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಮತ್ತು ಜಾಗವಿದ್ದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಪಟ್ಟಣದಲ್ಲಿ ನಿರ್ಮಾಣವಾಗಬೇಕಿದ್ದ ಆದರ್ಶ ವಿದ್ಯಾಲಯದ ಸ್ವಂತ ಕಟ್ಟಡ ನೆನೆಗುದಿಗೆ ಬಿದ್ದು ಮಕ್ಕಳಿಗೆ ಆದರ್ಶವಿಲ್ಲದಂತಾಗಿದೆ.
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಿ ಶಿಕ್ಷಣ ಮಟ್ಟ ಬಲಿಷ್ಠಗೊಳಿಸಲು ಸರ್ಕಾರ ಮಾದರಿ ಶಾಲೆಗಳನ್ನು ಆದರ್ಶ ಶಾಲೆ ಎಂಬ ಹೆಸರಲ್ಲಿ ತೆರೆದಿದೆ. ಅಂತೆಯೇ ರಾಜ್ಯದಲ್ಲಿ ಕೋಲಾರ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ್ದರೆ, ಜಿಲ್ಲೆಯಲ್ಲಿ ಬಂಗಾರಪೇಟೆ, ಶ್ರೀನಿವಾಸಪುರ ಹಾಗೂ ಮುಳಬಾಗಲು ತಾಲೂಕು ಕೊನೆ ಸ್ಥಾನ ಪಡೆದಿದೆ, ಮೂರು ತಾಲೂಕುಗಳಲ್ಲಿ ಆದರ್ಶ ವಿದ್ಯಾಲಯ ಶಾಲೆಗಳನ್ನು ಕಳೆದ 4 ವರ್ಷಗಳ ಹಿಂದೆ ಆರಂಭಿಸಿದೆ, ಆದರೆ ಇಂದಿಗೂ ಸ್ವಂತ ಕಟ್ಟಡದ ಭಾಗ್ಯವಿಲ್ಲದೆ ಕಿಷ್ಕಿಂದೆ ಕೊಠಡಿಗಳಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ.
ಕೊಠಡಿ ಕೊರತೆ: 4 ವರ್ಷಗಳ ಹಿಂದೆ ಪಟ್ಟಣದಲ್ಲಿ ಆದರ್ಶ ವಿದ್ಯಾಲಯ ಶಾಲೆ ಪ್ರಾಂರಭಿಸಿದಾಗ ಕಟ್ಟಡ ಕೊರತೆಯಿಂದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿರುವ ನಾಲ್ಕು ಕೊಠಡಿಗಳನ್ನು ಈ ಶಾಲೆಗೆ ನೀಡಲಾಯಿತು. ಇಲ್ಲಿ 282 ವಿದ್ಯಾರ್ಥಿಗಳು ದಾಖಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾರಂಭದಲ್ಲಿ ಶಿಕ್ಷಕರಿದ್ದರು. ಆದರೆ ಕೊಠಡಿಗಳ ಇಲ್ಲದೆ ಕಿರಿದಾದ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಲಾಗಿದೆ. ಬೆಂಚುಗಳಿಲ್ಲದೆ ನೆಲದ ಮೇಲೆಯೇ ಕುಳಿತು ಪಾಠ ಕೇಳಬೇಕು, ಶೌಚಾಲಯ ಸಮಸ್ಯೆ ಬೇರೆ, ಆದರೂ ಮೊದಲೆರಡು ವರ್ಷಗಳು ಫಲಿತಾಂಶ ಉತ್ತಮವಾಗಿತ್ತು. ಕಳೆದ ವರ್ಷದಿಂದ ಈ ಶಾಲೆಯಲ್ಲಿ ಶಿಕ್ಷಕರೂ ಸೇರಿಂದತೆ ಮೂಲ ಸೌಲಭ್ಯಗಳ ಕೊರತೆಯಿಂದ ಪೋಷಕರು ಈ ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಪೋಷಕರು ದುಬಾರಿ ಬೆಲೆ ಕೊಟ್ಟು ಕಾನ್ವೆಂಟ್ಗಳಿಗೆ ದಾಖಲಿಸುವ ಹಂಬಳ ಹೊಂದಿದವರು ಈ ಶಾಲೆಗೆ ಸೇರಿಸಿ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದರು. ಈಗ ಪರಿಸ್ಥಿತಿ ಬದಲಾಗಿದೆ ಕ್ರಮೇಣ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ.
ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆದರ್ಶ ಶಾಲೆಗೆ ಸ್ವಂತ ಜಾಗವನ್ನು ಜೂನಿಯರ್ ಕಾಲೇಜಿನ ಹಿಂಬಾಗದಲ್ಲಿ ಕಲ್ಪಿಸಿಕೊಟ್ಟು ಕಟ್ಟಡ ನಿರ್ಮಾಣಕ್ಕೆ ಶುಂಕುಸ್ಥಾಪನೆ ಮಾಡಿ ನಾಲ್ಕು ತಿಂಗಳಾದರೂ ಕಾಮಗಾರಿ ಪ್ರಾಂರಭವಾಗಿಲ್ಲ. ಶಾಸಕರು ಗುತ್ತಿಗೆದಾರರ ವಿರುದ್ಧ ಗರಂ ಆಗಿ ಎಚ್ಚರಿಕೆ ಕೊಟ್ಟರೂ ಕಾಮಗಾರಿ ಮುಂದೆ ಸಾಗಿಲ್ಲ.
ಅಗತ್ಯ ಅನುಕೂಲಗಳನ್ನು ಒದಗಿಸದಿದ್ದರೆ ಮುಂದಿನ ವರ್ಷಗಳಲ್ಲಿ ಈ ಶಾಲೆಗೆ ಮಕ್ಕಳ ದಾಖಲಾತಿ ಕುಗ್ಗಿ ಮುಚ್ಚಿದರೂ ಅಶ್ಚರ್ಯವಿಲ್ಲ. ಇದಕ್ಕೆ ಅವಕಾಶ ನೀಡದೆ ಶಾಸಕರು ಮೂಲ ಸೌಲಭ್ಯಗಳ ಜೊತೆ ಶಿಕ್ಷಕರ ಕೊರತೆ ನೀಗಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

