ಅರಣ್ಯಾಭಿವೃದ್ಧಿಗೆ ಕ್ಯಾರೆ ಎನ್ನದ ಗ್ರಾಪಂಗೆ ನೋಟಿಸ್
ಕನ್ನಡಪ್ರಭ ವಾರ್ತೆ, ಕೋಲಾರ, ಡಿ.3
ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರದೆ ನಿರ್ಲಕ್ಷ್ಯ ವಹಿಸಿರುವ ಗ್ರಾಮ ಪಂಚಾಯಿತಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲು ಕೋಲಾರ ತಾಪಂ ಕಾರ್ಯ ನಿರ್ವಹಣಾಧಿಕಾರಿ ಜಾನಕಿರಾಮ್ ತಾಪಂ ಕಚೇರಿ ವ್ಯವಸ್ಥಾಪಕರಿಗೆ ಸೂಚಿಸಿದರು.
ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ರಾಮಚಂದ್ರೇಗೌಡ, ಕೃಷ್ಣಮೂರ್ತಿ ಇತರರು ಸಾಮಾಜಿಕ ಅರಣ್ಯ ಇಲಾಖೆಯು ತಾಪಂ ವ್ಯಾಪ್ತಿಗೆ ಸೇರಿದೆ ಎಂಬುದೇ ತಿಳಿಯದಂತಾಗಿದೆ. ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಿಲ್ಲ, ತಾಲೂಕಿನಲ್ಲಿ ಯಾವ ಯಾವ ಕಾರ್ಯಕ್ರಮಗಳು ಅನುಷ್ಠಾನದಲ್ಲಿದೆ, ಅದರ ಪ್ರಗತಿ ಏನಾಗಿದೆ ಎಂಬುದು ತಿಳಿಸುತ್ತಿಲ್ಲವೆಂದು ಆರೋಪಿಸಿದರು.
ಸಭೆಗೆ ಇಲಾಖೆಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಬಿಂಧು, ನಮ್ಮ ಇಲಾಖೆಯ ಕಾರ್ಯಕ್ರಮಗಳು ಗ್ರಾಮ ಪಂಚಾಯಿತಿ ಮೂಲಕ ನಡೆಯಬೇಕಾಗಿದೆ. ಅರಣ್ಯೀಕರಣ ಯೋಜನೆಯಡಿ ವಿವಿಧ ಬಗೆಯ ಸಸಿಗಳನ್ನು ನೆಡುವುದಕ್ಕೆ ಗ್ರಾಪಂಗಳಿಗೆ ಕಾರ್ಯಕ್ರಮ ನೀಡಲಾಗಿದೆ. ಇದಕ್ಕೆ ಸಾಕಷ್ಟು ಅನುದಾನ ಸಹ ಬಿಡುಗಡೆ ಮಾಡಲಾಗಿದೆ. ಆದರೆ ಗ್ರಾಪಂಗಳಿಂದ ನಮಗೆ ಯಾವುದೇ ಮಾಹಿತಿ ಬರುತ್ತಿಲ್ಲವೆಂದು ಹೇಳಿದರು.
ಗ್ರಾಪಂಗಳು ಮಾಹಿತಿ ನೀಡುತ್ತಿಲ್ಲವೆಂದಾಗ ಕ್ರಮ ಕೈಗೊಳ್ಳಬಹುದಲ್ಲವೇ, ಎಷ್ಟು ಬಾರಿ ಗ್ರಾಪಂಗಳಿಗೆ ನೋಟಿಸ್ ನೀಡಿದ್ದೀರಾ ಎಂದು ಸದಸ್ಯರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಬಿಂಧು, ಗ್ರಾಪಂ ಪಿಡಿಓಗಳಿಗೆ ಈಗಾಗಲೇ ಅನೇಕ ಬಾರಿ ಪತ್ರ ಬರೆಯಲಾಗಿದೆ ಎಂದರು. ಮಧ್ಯ ಪ್ರವೇಶ ಮಾಡಿದ ತಾಪಂ ಇಒ ಜಾನಕಿರಾಮ್, ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯಕ್ರಮಗಳನ್ನು ನರೇಗಾ ಯೋಜನೆಯಡಿ ಅನುಷ್ಠಾನಕ್ಕೆ ತರಬೇಕಾದ ಹೊಣೆ ಗ್ರಾಪಂಗಳಿಗೆ ಇದೆ. ಒಂದು ವೇಳೆ ಯಾರಾದರೂ ಲೋಪವೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ತಮಗಿದೆ. ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದ ಗ್ರಾಪಂಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿ ಬೇಗನೆ ವರದಿ ತರಿಸಿಕೊಳ್ಳಿ ಎಂದು ತಾಪಂ ವ್ಯವಸ್ಥಾಪಕರಿಗೆ ತಿಳಿಸಿದರು.
ಎಷ್ಟು ಗಿಡಗಳನ್ನು ಬೆಳೆದಿದ್ದೀರಿ: ಅರಣ್ಯೀಕರಣದಡಿಯಲ್ಲಿ ತಾಲೂಕಿನಲ್ಲಿ ಎಷ್ಟು ಗಿಡಗಳನ್ನು ಬೆಳೆಯಲಾಗಿದೆ. ಈಗ ಗಿಡಗಳ ಪರಿಸ್ಥಿತಿ ಏನಾಗಿದೆ ಎಂಬುದನ್ನು ತಿಳಿಯಲು ಗಾರ್ಡುಗಳನ್ನು ನೇಮಿಸಲಾಗಿದೆಯೇ ಎಂದು ಸದಸ್ಯ ರಾಮಚಂದ್ರೇಗೌಡ ಕೇಳಿದಾಗ, ನಮ್ಮ ಇಲಾಖೆಯಲ್ಲಿ ಗಾರ್ಡುಗಳ ಕೊರತೆ ಇದೆ. ಆದರೂ ಸಾಧ್ಯವಾದಷ್ಟು ಮಟ್ಟಿಗೆ ಕೆಲಸ ನಡೆಯುತ್ತಿದೆ ಎಂದು ಬಿಂಧು ಉತ್ತರಿಸಿದರು.
ಕೋಲಾರ ತಾಲೂಕು ವಿಸ್ತೀರ್ಣ ಹೆಚ್ಚಾಗಿದೆ. ನಾಲ್ಕೈದು ಗಾರ್ಡುಗಳನ್ನು ಇಟ್ಟುಕೊಂಡು ಇಡೀ ತಾಲೂಕು ಸುತ್ತಲು ಸಾಧ್ಯವಿಲ್ಲ. ಸರ್ಕಾರಕ್ಕೆ ಪ್ರಸ್ತಾಪನೆ ಕಳುಹಿಸಿ ಗಾರ್ಡುಗಳನ್ನು ಅಗತ್ಯಕ್ಕೆ ತಕ್ಕಷ್ಟು ನೇಮಕ ಮಾಡಿಕೊಳ್ಳಿ ಎಂದು ಸದಸ್ಯರು ಸಲಹೆ ನೀಡಿದರು.
ನರಸಾಪುರದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಭೂಮಿ ಗುರುತಿಸಲಾಗಿದ್ದು ಗುಡಿಸಲು ನಿವಾಸಿಗಳಿಂದ ಕಿಮ್ಮತ್ತು ವಸೂಲಿ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಲು ಹಾಗೂ ಈ ಸಂಬಂಧ ಸರ್ಕಾರದ ಆದೇಶಗಳನ್ನು ಪಾಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯ ನಾಗರಾಜು ಅವರು ನಿವೇಶನ ರಹಿತರಿಂದ ಕಿಮ್ಮತ್ತು ವಸೂಲಿ ಮಾಡುವುದಕ್ಕೆ ನನ್ನ ಒಪ್ಪಿಗೆ ಇದೆ ಒಂದು ವೇಳೆ ಅವರಿಂದ ಹಣ ಕಟ್ಟಲು ಆಗದಿದ್ದರೆ ನಾನೇ ಭರಿಸುತ್ತೇನೆಂದು ಹೇಳಿದರು. ಪುಕ್ಕಟೆ ನಿವೇಶನ ನೀಡುವುದರಲ್ಲಿ ಅರ್ಥವಿಲ್ಲ ಕನಿಷ್ಠ ಮೊತ್ತದ ಕಿಮ್ಮತ್ತು ವಸೂಲಿ ಮಾಡಿ ಎಂದು ಸದಸ್ಯ ಕೃಷ್ಣಮೂರ್ತಿ ತಿಳಿಸಿದರು.
ಉಪಾಧ್ಯಕ್ಷೆ ಸರಸ್ವತಿ, ಲೆಕ್ಕಾಧಿಕಾರಿ ಪ್ರಕಾಶ್ರಾವ್, ತಾ.ಪಂ ನಿರ್ಮಲ ಯೋಜನೆ ಸಮನ್ವಯಾಧಿಕಾರಿ ಜಿ.ಶ್ರೀನಿವಾಸ್, ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ರವಿಚಂದ್ರ, ಕೃಷಿ ಇಲಾಖೆಯ ಸಹಾಯ ನಿರ್ದೇಶಕಿ ಗಾಯಿತ್ರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

