ಕೋಲಾರ

ನರ ಬಲಿ ನೀಡಲು ಮುಂದಾದ ಮಾಂತ್ರಿಕನಿಗೆ ಜನರಿಂದ ಗೂಸಾ

Published On :

ಚಿಂತಾಮಣಿ: ಮಂತ್ರವಾದಿ ಮಾತು ಕೇಳಿ ತಾತ ಮತ್ತು ಸಂಬಂಧಿಕರು ಸೇರಿ ಬಾಲಕಿಯೊಬ್ಬಳನ್ನು ಕ್ಷುದ್ರ ದೇವತೆಗೆ ನರಬಲಿ ಕೊಡಲು ಮುಂದಾದಾಗ ಬಾಲಕಿ ಕಣ್ಣು ತಪ್ಪಿಸಿ ಪೋಷಕರ ಮಡಲಿಗೆ ಸೇರಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯರ್ರಯ್ಯಗಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಗರದ ತಪತೇಶ್ವರ ಕಾಲೋನಿ ನಿವಾಸಿ ಜನಾರ್ದನ್ ಎಂಬವರ ಮಗಳಾದ ಅನಿಕೇತನಾ (10) ಬಲಿಯಾಗ ಬೇಕಿದ್ದ ಬಾಲಕಿ. ಆಕೆಯ ತಾಯಿಯ ತಂದೆ ಬೆಂಗಳೂರು ವೆಂಕಟರವಣಪ್ಪ ಎಂಬಾತ ಕಳಾವತಿ ಹಾಗೂ ಅಂಬಿಕಾ ಎಂಬವರೊಂದಿಗೆ ಸೇರಿ ನರಬಲಿಗೆ ಸಿದ್ಧತೆ ನಡೆಸಿರುವುದು ಬೆಳಕಿಗೆ ಬಂದಿದೆ.
ಇವರು ಬಾಲಕಿಯನ್ನು ಊರಿಗೆ ಕರೆದುಕೊಂಡು ಹೋಗುವುದಾಗಿ ಪೋಷಕರಿಗೆ ಹೇಳಿ ಸೋಮವಾರ ಬಾಲಕಿಯನ್ನು ಕರೆದೊಯ್ದಿದ್ದಾರೆ. ಮೋಟಮಾಕಲಹಳ್ಳಿಯ ಬಾಷಾ ಎಂಬ ಮಂತ್ರವಾದಿ ಕಳೆದ 1 ತಿಂಗಳ ಹಿಂದೆ ಬೆಂಗಳೂರು ವೆಂಕಟರವಣಪ್ಪನಿಗೆ ಯರ್ರಯ್ಯಗಾರಹಳ್ಳಿ ಗ್ರಾಮದ ಹೊರ ವಲಯದ ನಿರ್ಜನ ಪ್ರದೇಶವೊಂದರಲ್ಲಿ ಕ್ಷುದ್ರ ದೇವತೆಗೆ ನರಬಲಿ ಕೊಟ್ಟಲ್ಲಿ ಇಷ್ಟಾರ್ಥ ನೆರವೇರುವುದಾಗಿ ಹೇಳಿದ್ದ ಎಂದು ಪೊಲೀಸರ ವಿಚಾರಣೆ ವೇಳೆ ಬಂಧಿತ ಬಾಷಾ ಬಾಯಿ ಬಿಟ್ಟಿರುವುದಾಗಿ ತಿಳಿದು ಬಂದಿದೆ.
ಯರ್ರಯ್ಯಗಾರಹಳ್ಳಿ ಗ್ರಾಮಕ್ಕೆ ತಾತನ ಜೊತೆ ಹೋಗಿದ್ದ ಬಾಲಕಿಯನ್ನು ಕಳೆದ ಡಿ.2ರ ರಾತ್ರಿ ಕಾರ್ತಿಕ ಮಾಸದ ಕಡೆ ದಿನ ಪೂಜೆ ಸಲ್ಲಿಸಲು ಎಂದು ನಂಬಿಸಿ ಗ್ರಾಮದ ಹೊರ ವಲಯಕ್ಕೆ ಕರೆದೊಯ್ದು, ಬಾಲಕಿಗೆ ಅರಿಶಿನ ಕುಂಕುಮ ಇಟ್ಟು ಕುತ್ತಿಗೆಗೆ ಹೂಮಾಲೆ ಹಾಕಿ ನರಬಲಿ ಕೊಡಲು ಪಿಸುಮಾತಿನಲ್ಲಿ ಮಾತನಾಡಿಕೊಳ್ಳುತ್ತಿರುವಾಗ ಬಾಲಕಿ ಭಯದಿಂದ ಓಡಿ ಬಂದು ಪೋಷಕರಿಗೆ ವಿಷಯದ ಬಗ್ಗೆ ತಿಳಿಸಿದ್ದಾಳೆ.
ಮೋಟಮಾಕಲಹಳ್ಳಿ ಬಾಷಾ ಎಂಬಾತನು ಮಾಟ ಮಂತ್ರಗಳಿಂದ ಅಮಾಯಕ ಜನರಿಂದ ಹಣ ಕಿತ್ತು ತಿನ್ನುತ್ತಿದ್ದ, ಕ್ಷುದ್ರ ಪೂಜೆ ನಡೆಸಿ ಬಾಲಕಿಯನ್ನು ಬಲಿ ಕೊಡಲು ಮುಂದಾಗಿರುವ ಘಟನೆಗೆ ಸಂಬಂಧಿಸಿ ಪೋಷಕರು ಬುಧವಾರ ಬೆಳಿಗ್ಗೆ ನಗರದ ಗೋಪಸಂದ್ರ ಕೆರೆ ಬಳಿ ಬಾಷಾನನ್ನು ಹಿಡಿದುತಂದು ಗೂಸ ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಬಾಷಾನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.