ಕೋಲಾರ

ಭೇದ ಭಾವವಿಲ್ಲದೆ ಮಕ್ಕಳಿಗೆ ಶಿಕ್ಷಣ ಕೊಡಿಸಿ

Published On :

ಕೋಲಾರ: ಹೆಣ್ಣು ಗಂಡೆಂಬ ಭೇದಭಾವವಿಲ್ಲದೆ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಅದೇ ಅವರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಮಕ್ಕಳಿಗಾಗಿ ಅನೇಕ ಯೋಜನೆಗಳು ಜಾರಿಗೆಯಾಗಿದ್ದು ಈ ಯೋಜನೆಗಳನ್ನು ಸಂಪೂರ್ಣವಾಗಿ ಬಳಸಿಕೊಂಡರೆ ಮಕ್ಕಳು ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಬಂಗಾರಪೇಟೆಯ ಫೋಕಸ್ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲೆಯ ಮಕ್ಕಳ ಸ್ಥಿತಿಗತಿಗಳ ಅಧ್ಯಯನ ಕುರಿತಾಗಿ ನಿರ್ಧಿಷ್ಟ ಗುಂಪು ಚರ್ಚೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಇತ್ತೀಚಿನ ದಿನಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ಶಾಲೆಗಳಲ್ಲಿ ನೀಡುತ್ತಿರುವ ಒತ್ತಡ ಎದುರಿಸುವುದೇ ಸಮಸ್ಯೆಯಾಗಿದೆ. ಶಾಲೆಗೆ ಹೋಗಬೇಕಾದರೆ ಹೊರೆಯಲಾಗದಷ್ಟು ಪುಸ್ತಕಗಳನ್ನು ಹೊತ್ತು ಹೋಗುವುದು ಮತ್ತು ಮನೆಯ ಕೆಲಸ ನೀಡುವುದೆ ಅವರಿಗೆ ಸಮಸ್ಯೆಯಾಗಿ ಕಾಣುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಣದಿಂದ ದೂರ ಉಳಿಯುತ್ತಿರುವ ಮಕ್ಕಳನ್ನು ಗುರ್ತಿಸಿ ಶಿಕ್ಷಣ ಕೊಡಿಸಬೇಕಾದರೆ ಶಿಕ್ಷಣ ನೀತಿಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕೆಂದು ತಿಳಿಸಿದರು.
ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳು, ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕರನ್ನು ತಡೆಯುವ ಉದ್ದೇಶದಿಂದ ಚರ್ಚಾ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೌಟುಂಬಿಕ ಕಲಹ, ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಯನ್ನು ತೊರೆಯಬೇಕಾದರೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕಲ್ಪಿಸಿಕೊಡಲು, ಜಿಲ್ಲೆಯ ಮಕ್ಕಳ ಸಮಸ್ಯೆಗಳ ಸಮಿಕ್ಷೆಯ ನಂತರ ಕ್ರಿಯಾಯೋಜನೆ ಸಂಬಂಧವಾಗಿ ಚರ್ಚಾ ಕಾರ್ಯಕ್ರಮಗಳಲ್ಲಿ ಉದ್ಬವಿಸುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತದೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳು ಪ್ರೌಢ ವಿದ್ಯಾಭ್ಯಾಸ ಮುಗಿಸಿ ನಗರಪ್ರದೇಶಕ್ಕೆ ಬಂದ ನಂತರ ನಗರ ಸಂಸ್ಕೃತಿಗೆ ಹೊಂದಿಕೊಳ್ಳಲು ಆಗದೆ ಮಾನಸಿಕ ತೊಂದರೆಗಳಿಗೆ ಒಳಗಾಗುವುದನ್ನು ತಡೆಯಬೇಕು ಎಂದರು. ನಂತರ ಮಕ್ಕಳ ಸಾಗಾಣಿಕೆ, ಭ್ರೂಣ ಹತ್ಯೆ, ಅನಾಥ ನವಜಾತ ಶಿಶು ಪತ್ತೆ, ಬಾಲ್ಯ ವಿವಾಹ, ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕಾರಣಗಳು ಹಾಗೂ ಪರಿಹಾರಗಳ ಕುರಿತು ಗುಂಪು ಚರ್ಚೆಗಳು ನಡೆದವು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾರಾಯಣಮೂರ್ತಿ, ಮಹಿಳಾ ಜಾಗೃತಿ ವೇದಿಕೆಯ ಮಮತಾರೆಡ್ಡಿ, ಶಿಶು ಅಭಿವೃದ್ಧಿ ಯೋಜನೆಯ ರತ್ನಮ್ಮ, ಕಾನೂನು ಸಲಹೆಗಾರ ಮಹೇಶ್ ಬಾಬು, ಫೋಕಸ್ ಟ್ರಸ್ಟ್‌ನ ಎ. ಹರೀಶ್, ಶಿಕ್ಷಣಾಧಿಕಾರಿ ಕೆಂಪೇಗೌಡ, ರಕ್ಷಣಾ ಘಟಕದ ಸಾಂಸ್ಥಿಕ ಅಧಿಕಾರಿ ಜಗದೀಶ್, ಬೀರೇಶ್, ಮಲ್ಲೇಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.