ಕೋಲಾರ

ಎಳೆದಾಡಿ ಮಹಿಳೆಯರ ಮೇಲೆ ಹಲ್ಲೆ; ಸಿಪಿಎಂ ಖಂಡನೆ

Published On :

ಚಿಕ್ಕಬಳ್ಳಾಪುರ: ಸುಸಂಸ್ಕೃತ ಪಾಂಡಿತ್ಯ ಗಳಿಸಿದವರೆ ಮಡೆಸ್ನಾನ ಆಚರಣೆ ವಿರೋಧಿಸಿದ ಮಹಿಳೆಯರನ್ನು ಬೀದಿಯಲ್ಲಿ ಎಳೆದಾಡಿ ಹಲ್ಲೆ ನಡೆಸಿರುವುದು ಯಾವ ಸುಸಂಸ್ಕೃತಿ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯ ಮಾತನಾಡಿ, ಅವೈಜ್ಞಾನಿಕ, ಮೂಢನಂಬಿಕೆಯ ಮಡೆಸ್ನಾನ ಪದ್ಧತಿ ನಿಷೇಧಿಸಲು ಒತ್ತಾಯಿಸಿ ಸಿಪಿಎಂ ಹೋರಾಟ ನಡೆಸುತ್ತಿದ್ದು, ಭಾನುವಾರ ನಗರದ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದ ಬಳಿ ಧರಣಿ ಕುಳಿತುಕೊಳ್ಳಲಾಯಿತು. ಬದಲಿಗೆ ದೇವಸ್ಥಾನದ ಒಳಗೆ ನುಗ್ಗಲಿಲ್ಲ. ನಾವು ಕರೆಯದಿದ್ದರೂ ಧರಣಿ ಸ್ಥಳಕ್ಕೆ ಮಡೆಸ್ನಾನ ಆಚರಣೆ ಸಂಘಟಕರು ಖುದ್ದಾಗಿ ಆಗಮಿಸಿ ಮಡೆಸ್ನಾನ ಆಚರಿಸುತ್ತಿಲ್ಲ ಎಂದು ಭರವಸೆ ನೀಡಿದರು.
ಆದರೆ, ನಾವು ಹೋಗುತ್ತಿದ್ದಂತೆ ಮಡೆಸ್ನಾನ ಮಾಡಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದಿರುವುದು ಒಳ್ಳೆಯ ಸಂಸ್ಕೃತಿಯ ಲಕ್ಷಣವೇ ಎಂದು ಪ್ರಶ್ನಿಸಿದರು. ಈ ನಡುವೆ ಮಡೆಸ್ನಾನ ಆಚರಿಸಿರುವುದನ್ನು ಖಂಡಿಸಿ ನಮ್ಮ ಪಕ್ಷದ ಕೆಲವರು ಸಂಜೆ ದೇವಾಲಯದ ಹೊರಗೆ ಪ್ರತಿಭಟನೆ ಕುಳಿತುಕೊಂಡಾಗ ಮಹಿಳೆಯರು ಎನ್ನದೆ ಎಳೆದಾಡಿ ಪಂಡಿತರು ಹಲ್ಲೆ ನಡೆಸಿದ್ದಾರೆ. ಪೊಲೀಸರು ಮೂಕಪ್ರೇಕ್ಷಕರಾಗಿ ನೋಡಿದರು ಎಂದು ಕಿಡಿಕಾರಿದರು.
ಹಲ್ಲೆ ನಡೆಸಿರುವವರನ್ನು ಕೂಡಲೇ ಪೊಲೀಸ್ ಇಲಾಖೆ ಬಂಧಿಸಬೇಕು. ಎದುರಿಗೆ ಹಲ್ಲೆ ನಡೆಯುತ್ತಿದ್ದರೂ ನೋಡುತ್ತಿದ್ದ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಪಡಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಮುಖಂಡ ಎಂ.ಪಿ. ಮುನಿವೆಂಕಟಪ್ಪ, ಬಿ.ಎನ್. ಮುನಿಕೃಷ್ಣಪ್ಪ, ವರಲಕ್ಷ್ಮಿ, ಮಧುಲತಾ, ಮುನೀಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.