ಕಾಡಾನೆ ಹಾವಳಿ ಪ್ರದೇಶಕ್ಕೆ ಶಾಸಕರ ಭೇಟಿ, ಪರಿಶೀಲನೆ
ಬಂಗಾರಪೇಟೆ: ಇತ್ತೀಚಿಗೆ ಕ್ಷೇತ್ರದ ಗಡಿ ಭಾಗವಾದ ಬತ್ತಲಹಳ್ಳಿ, ದೋಣಿಮಡಗು, ಚಿನ್ನಕಾಮನಹಳ್ಳಿ, ಬುವನಹಳ್ಳಿ, ಯರಗೋಳ್ ಮತ್ತಿತರ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ನುಗ್ಗಿ ಲಕ್ಷಾಂತರ ರು. ಬೆಲೆ ಬಾಳುವ ಬೆಳೆ ನಾಶ ಮಾಡಿರುವ ಸ್ಥಳಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ಧೈರ್ಯ ತುಂಬಿದರು.
ಪ್ರತಿ ವರ್ಷ ತಮಿಳುನಾಡಿನಿಂದ ಆಹಾರಕ್ಕಾಗಿ ಕಾಡಾನೆಗಳ ಹಿಂಡು ರಾಜ್ಯದ ಅರಣ್ಯ ಪ್ರದೇಶಕ್ಕೆ ಲಗ್ಗೆ ಹಾಕುತ್ತಲೆ ಇವೆಯಾದರೂ ಅವುಗಳಿಂದ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದೆ ತಮ್ಮ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಬದುಕು ವಂತಾಗಿದೆ. ತಿಂಗಳಿಂದ ಮತ್ತೆ ಬಂದಿರುವ ಸುಮಾರು 30 ಆನೆಗಳು ಕತ್ತಲಾಗುತ್ತಿದ್ದಂತೆ ರೈತರ ತೋಟಗಳಿಗೆ ನುಗ್ಗಿ ಹಿಗ್ಗಾಮುಗ್ಗ ಬೆಳೆ ನಾಶಪಡಿಸುತ್ತಿವೆ. ಇದರಿಂದ ರೈತರ ಸಂಕಷ್ಟ ಹೇಳತೀರದಾಗಿದೆ. ರೈತರಿಗೆ ಆನೆಗಳು ಸಿಕ್ಕಾಪಟ್ಟೆ ನಷ್ಟ ಮಾಡುತ್ತಿದ್ದರೂ ಸರ್ಕಾರ ನೆರವಿಗೆ ಬಂದಿಲ್ಲ ಎಂದು ರೈತರು ಆರೋಪಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದ್ದರಿಂದ ತಾವು ಸಕಾಲಕ್ಕೆ ಬರಲಾಗಲಿಲ್ಲ. ಆದ್ದರಿಂದ ಈಗ ಬಂದಿದ್ದೇನೆ ನೀವು ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ. ಆನೆಗಳಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಸರ್ಕಾರ ಪರಿಹಾರ ಕೊಡಲಿದೆ ಎಂದು ಶಾಸಕ ನಾರಾಯಣಸ್ವಾಮಿ ರೈತರಿಗೆ ಭರವಸೆ ತುಂಬಿದರು.
ಶಾಸಕರು ಬೆಳಗ್ಗೆಯಿಂದ ಸಂಜೆವರೆಗೂ ಪ್ರತಿ ಹಳ್ಳಿಗೂ ತೆರಳಿ ಪರಿಶೀಲನೆ ಮಾಡಿದರಲ್ಲದೆ ರೈತರು ಸಕಾಲಕ್ಕೆ ಅರಣ್ಯ ಇಲಾಖೆಗೆ ಅರ್ಜಿಸಲ್ಲಿಸಿದರೆ ಈ ಬಗ್ಗೆ ಅರಣ್ಯ ಸಚಿವರಲ್ಲಿ ಚರ್ಚಿಸಿ ಸೂಕ್ತ ಪರಿಹಾರ ದೊರೆಯುವಂತೆ ಮಾಡುತ್ತೇನೆ ಎಂದರು.
ಹಾಗೂ ಈಗಾಗಲೇ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದು ಕಾಡಾನೆ ಹಾವಳಿಯಿಂದ ರೈತರಿಗೆ ಶಾಶ್ವತ ಮುಕ್ತಿ ಕಾಣಿಸುವಂತೆ ಕೋರಲಾಗಿದೆ. ಅವರಿಂದಲೂ ಸಕಾರಾತ್ಮಕ ಉತ್ತರ ಬಂದಿದೆ ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿಯೂ ಸರ್ಕಾರದ ಗಮನ ಸೆಳೆಯಲಾಗಿದೆ.ಪದೇ ಪದೇ ಆನೆಗಳ ಹಾವಳಿಯಿರುವುದರಿಂದ ಕಾಮಸಮುದ್ರ ಅರಣ್ಯ ಪ್ರದೇಶವನ್ನು ವನ್ಯ ಅರಣ್ಯ ಪ್ರದೇಶವೆಂದು ಘೋಷಿಸಲು ಸರ್ಕಾರ ಒಪ್ಪಿದ್ದು ಈ ಯೋಜನೆಗೆ ಬಜೆಟ್ನಲ್ಲಿ ಸಾವಿರ ಕೋಟಿ ಸಹ ಮೀಸಲಿಡಲಾಗಿದೆ. ತಮಿಳುನಾಡು, ಆಂಧ್ರ ಮತ್ತು ರಾಜ್ಯ ಅರಣ್ಯ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಹುಡುಕುವ ಕೆಲಸ ಸಹ ಆಗಬೇಕಿದೆ ಎಂದು ಹೇಳಿದರು.
ಇದೇ ವೇಳೆ ಶಾಸಕರು ಏಪ್ರಿಲ್ ತಿಂಗಳಲ್ಲಿ ಆನೆಗಳ ದಾಳಿಯಿಂದ ನಷ್ಟ ಉಂಟಾಗಿದ್ದ ರೈತರಿಗೆ 10 ಲಕ್ಷ ರು. ಪರಿಹಾರದ ಚೆಕ್ಗಳನ್ನು ರೈತರಿಗೆ ವಿತರಿಸಿದರು. ತಹಸೀಲ್ದಾರ್ ಉಷಾ, ಅರಣ್ಯ ಉಪ ಸಂರಕ್ಷಣಾಧಿಕಾರಿ ಪುಟ್ಟಣಯ್ಯ, ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ, ಪಿಚ್ಚಹಳ್ಳಿ ಗೋವಿಂದರಾಜು, ರಾಮಪ್ಪ, ಬ್ಲಾಕ್ ಅಧ್ಯಕ್ಷ ಮಂಜುನಾಥ್, ರೇಂಜರ್ ಚಂದ್ರಶೇಖರರೆಡ್ಡಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

