ಕೋಲಾರ

ಟಿಎಪಿಸಿಎಂಎಸ್ ಅವ್ಯವಹಾರ: 8 ವರ್ಷದ ಬಳಿಕ ಸಾಬೀತು

Published On :

ಬಂಗಾರಪೇಟೆ: ಇಲ್ಲಿನ ಟಿಎಪಿಸಿಎಂಎಸ್ ಹಿಂದಿನ ಆಡಳಿತ ಮಂಡಳಿಯಲ್ಲಿ ನಡೆದಿದ್ದ ಕೋಟ್ಯಂತರ ರು. ಅವ್ಯವಹಾರ 8ವರ್ಷಗಳ ಬಳಿಕ ಸಾಬೀತಾಗಿದ್ದು ಬಡ್ಡಿ ಸಮೇತ ಸಂಸ್ಥೆಗೆ ಹಣ ಪಾವತಿಸುವಂತೆ ಬೆಂಗಳೂರಿನ ಕೆಎಟಿ ನ್ಯಾಯಾಲಯ ಆದೇಶ ನೀಡಿದೆ.
2005ರಲ್ಲಿ ಆಡಳಿತದಲ್ಲಿದ್ದ ಮಂಡಳಿಯ ಅಧ್ಯಕ್ಷರೂ ಸೇರಿದಂತೆ ಎಲ್ಲಾ ನಿರ್ದೇಶಕರು ಸೇರಿ ಸುಮಾರು 26ಲಕ್ಷ ರು. ಅವ್ಯವಹಾರ ಮಾಡಿದ ಪರಿಣಾಮ ಸಂಸ್ಥೆ ದಿವಾಳಿಯತ್ತ ಸಾಗಿ ಸಂಸ್ಥೆಯನ್ನು ಸೂಪರ್ ಸೀಡ್ ಮಾಡಲಾಗಿತ್ತು.2005ರಲ್ಲಿ ಕೋಲಾರ ಉಪನಿಬಂಧಕರು ಪ್ರಕರಣವನ್ನು ಭೇದಿಸಿ ಅವ್ಯವಹಾರವನ್ನು ಬೆಳಕಿಗೆ ತಂದು ಬಡ್ಡಿ ಸಮೇತ ಅಸಲು ಪಾವತಿಸುವಂತೆ ಅಂದಿನ ಆಡಳಿತ ಮಂಡಳಿಗೆ ಸೂಚಿಸಲಾಗಿತ್ತಾದರೂ ಅಂದಿನ ಸಂಸ್ಥೆ ಅದನ್ನು ಪ್ರಶ್ನಿಸಿ ಅಂದು ಕೆಎಟಿ ಮೊರೆ ಹೋಗಿದ್ದರು. ಈಗ ಅದೇ ಕೆಎಟಿ ಅಸಲೊಂದಿಗೆ ಬಡ್ಡಿ ಸಮೇತ ಹಣ ಸಂಸ್ಥೆಗೆ ಪಾವತಿಸುವಂತೆ ಆದೇಶ ನೀಡಿರುವುದು ಅಂದಿನ ಆಡಳಿತ ಮಂಡಳಿ ಸದಸ್ಯರಿಗೆ ಪೀಕಲಾಟಕ್ಕೆ ಸಿಲುಕಿದ್ದಾರೆ.
2005ರಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿದ್ದ ಹುಲಿಬೆಲೆ ಸುರೇಶ್, ನಿರ್ದೇಶಕರಾದ ರಾಮಪ್ಪ, ಅಧಿನಾರಾಯಣಪ್ಪ, ರವಿನಾರಾಯಣರೆಡ್ಡಿ, ನಾಗರಾಜ್, ವೆಂಕಟೇಶ್ ಸೇರಿದಂತೆ ಅಂದಿನ ಕಾರ್ಯದರ್ಶಿ ಟಿಎಪಿಎಸಿಎಂಎಸ್ ಮೂಲಕ ವಿತರಣೆ ಮಾಡುತ್ತಿದ್ದ ಪಡಿತರ ಅಕ್ಕಿ ಹಾಗೂ ಗೊಬ್ಬರ ದಾಸ್ತಾನು ಲೆಕ್ಕಾಚಾರದಲ್ಲಿ ಅವ್ಯವಹಾರ ನಡೆಸಿ ಸುಮಾರು 26ಲಕ್ಷ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅಂದಿನ ಕೋಲಾರ ಉಪನಿಬಂಧಕರು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ನಂತರ ಮಂಡಳಿಯನ್ನು ಸೂಪರ್ ಸೀಡ್ ಮಾಡಲಾಗಿತ್ತು.ಅಂದಿನಿಂದ ಮಂಡಳಿಗೆ ಹಣ ನೀಡದೆ ಸತಾಯಿಸುತ್ತಿದ್ದ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಕಾರ್ಯದರ್ಶಿ ಕಾನೂನು ಹೋರಾಟದಲ್ಲಿ ತೊಡಗಿದ್ದರು.ಆದರೆ ಇಡೀ ಸಂಸ್ಥೆಯಲ್ಲಿಯೇ ಆಡಳಿತ ಮಂಡಳಿ ಸೇರಿದಂತೆ ಅಲ್ಲಿನ ನೌಕರರು ಹಾಗೂ ಸಿಬ್ಬಂದಿ ಬರೋಬರಿ 1ಕೋಟಿ 20ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗವಾಗಿದ್ದು ನಂತರ ತಿಳಿದು ಬಂದಿತ್ತು. 2005ರಲ್ಲಿ ಸಂಸ್ಥೆಯ ಅವ್ಯವಹಾರ ಬೆಳಕಿಗೆ ಬಂದರೂ ಅಧಿಕಾರಿಗಳು ಈ ವಿಷಯವನ್ನು ಬಹಿರಂಗಪಡಿಸದೆ ಗೌಪ್ಯವಾಗಿಟ್ಟಿದ್ದರು.ಆದರೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ. ಶ್ರೀನಿವಾಸಗೌಡ ಇಲ್ಲಿನ ತಾಪಂ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವ್ಯವಹಾರ ಬೆಳಕಿಗೆ ಬಂದಿತ್ತು ನಂತರ ಸಚಿವರು ಈ ಪ್ರಕರಣವನ್ನು ಸಿಓಡಿಗೆ ಒಪ್ಪಿಸಿದ್ದರು. ತನಿಖೆ ಬಳಿಕ ಕಾರ್ಯದರ್ಶಿ ಚಂದ್ರಶೇಖರ್ ವಿರುದ್ಧ 15ಲಕ್ಷ, ಮತ್ತ್ತೊಬ್ಬ ಕಾರ್ಯದರ್ಶಿ ಜಗದೀಶ್ 36ಲಕ್ಷ ಅವ್ಯವಹಾರ ನಡೆಸಿರುವುದು ಹಾಗೂ ನೌಕರರಾಗಿದ್ದ ಉದಯಕುಮಾರ್ ವಿರುದ್ಧ 36ಲಕ್ಷ, ರಾಮಚಂದ್ರ ಎಂಬುವರು 10ಲಕ್ಷ ಲಪಟಾಯಿಸಿರುವುದು ತನಿಖೆಯಿಂದ ಬಹಿರಂಗವಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಪ್ರಕರಣ ಈಗಲೂ ನಡೆಯುತ್ತಿದೆ. ಈಗ ಈ ಪ್ರಕರಣಕ್ಕೆ ಕೆಎಟಿ ಅವ್ಯವಹಾರ ನಡೆಸಿರುವ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡುವಂತೆ ಆದೇಶ ನೀಡುವ ಮೂಲಕ ಹೊಸ ಮಂಡಳಿ ಸದಸ್ಯರಿಗೆ ಎಚ್ಚರಿಕೆ ಗಂಟೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.