ಕೋಲಾರ

ಜಿಪಂ ಅಧ್ಯಕ್ಷ, ಸಿಇಒ ವಿರುದ್ಧ ಸದಸ್ಯರು ಕೆಂಡಾಮಂಡಲ

Published On :

ಚಿಕ್ಕಬಳ್ಳಾಪುರ: ಅನುಪಾಲನಾ ವರದಿಯಲ್ಲಿ ಬೇಕಾಬಿಟ್ಟಿ ಉತ್ತರ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜಿಪಂ ಸದಸ್ಯರು ಸಭೆಯಲ್ಲಿ ಜಿಪಂ ಅಧ್ಯಕ್ಷ ಮತ್ತು ಸಿಇಒ ವಿರುದ್ಧ ಕೆಂಡ ಕಾರಿದರು.
ಸಮರ್ಪಕವಾಗಿ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಲು ಇಬ್ಬರೂ ಅಸಮರ್ಥರಾಗಿದ್ದು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಬಗ್ಗೆ ಪದೇ ಪದೆ ಗಮನ ಸೆಳೆಯುತ್ತಿದ್ದರೂ ಮೌನವಾಗಿಯೇ ಇರುವ ಅಧ್ಯಕ್ಷರು ಮತ್ತು ಸಿಇಒರವರೇ ಜವಾಬ್ದಾರಿ ಹೊತ್ತುಕೊಂಡು ಕ್ಷಮೆ ಕೇಳಬೇಕು. ಈ ಸಭೆಯನ್ನು ಮುಂದೂಡಬೇಕು. ಇಲ್ಲವೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.
ಪಂಚಾಯತ್‌ರಾಜ್ ಆದ್ವಾನ ಇಲಾಖೆ: ಕಳೆದ ಆ.12ರಂದು ನಡೆದ ಸಾಮಾನ್ಯ ಸಭೆಯಲ್ಲಿ ಬಾಗೇಪಲ್ಲಿ ತಾಲೂಕಿನಲ್ಲಿ ಒಟ್ಟು 14 ಜಿಎಲ್‌ಎಸ್‌ಆರ್ ( ನೀರಿನ ಟ್ಯಾಂಕು ನಿರ್ಮಾಣ) ಕೆಲಸ ನಡೆದಿದೆ ಎಂದು ತಿಳಿಸಿದಂತೆ ಕಾಮಗಾರಿಯನ್ನು ಕೈಗೊಂಡಿಲ್ಲ. ಆದರೆ, ಹಣ ಪೂರ್ತಿಯಾಗಿ ಡ್ರಾ ಆಗಿದೆ. ಈ ಬಗ್ಗೆ ಉತ್ತರ ನೀಡಬೇಕೆಂಬ ಕೇಳಲಾದ ಪ್ರಶ್ನೆಗೆ ಅಧಿಕಾರಿಗಳು, ವರ್ಗಾವಣೆಯಾಗಿರುವ ಕಿರಿಯ ಎಂಜಿನಿಯರ್ ವೆಂಕಟರಮಣಪ್ಪ ಮಾಹಿತಿ ನೀಡಿಲ್ಲ ಎಂದು ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ ಎಂದು ಜಿಪಂ ಸದಸ್ಯ ಅಶ್ವತ್ಥಪ್ಪ ಕಿಡಿಕಾರಿದರು. ಇದಕ್ಕೆ ಸದಸ್ಯರಾದ ನರಸಿಂಹಮೂರ್ತಿ, ಶ್ರೀರಾಮರೆಡ್ಡಿ, ಮುನೇಗೌಡ, ನಾರಾಯಣಸ್ವಾಮಿ ಧ್ವನಿಗೂಡಿಸಿದರು.
ಸದಸ್ಯ ಶ್ರೀರಾಮರೆಡ್ಡಿ ಮಾತನಾಡಿ, ಪಂಚಾಯತ್ ರಾಜ್ ಆಧ್ವಾನ ಇಲಾಖೆಯಾಗಿದ್ದು ಕಾಮಗಾರಿಗಳನ್ನು ಕೈಗೊಳ್ಳದೇ ಹಣವನ್ನು ನುಂಗಲಾಗುತ್ತಿದೆ. ಇದರ ಮೇಲೆ ಆಡಳಿತ ಯಂತ್ರಾಂಗದ ಹಿಡಿತವೇ ಇಲ್ಲ. ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಆಡಳಿತ ವೈಫಲ್ಯವೇ ಕಾರಣವಾಗಿದೆ ಎಂದು ಟೀಕಿಸಿದರು.
ತಾವು ಕ್ರಿಯಾಯೋಜನೆಯ ಅಂದಾಜು ಪಟ್ಟಿ ನೀಡಬೇಕೆಂದು ಕೇಳಿ ಮೂರ್ನಾಲ್ಕು ತಿಂಗಳೇ ಕಳೆದಿದ್ದರೂ ಇದುವರೆಗೂ ಉತ್ತರ ನೀಡಿಲ್ಲ. ಜಿಪಂ ಸದಸ್ಯರು ಕಮೀಷನ್ ಹಣಕ್ಕಾಗಿಯೇ ರೇಗಾಡುತ್ತಾರೆ ಎಂದು ಕೆಲ ಅಧಿಕಾರಿಗಳು ಜನರಿಗೆ ಹೇಳುತ್ತಾರೆ. ಎಷ್ಟು ಕಮೀಷನ್ ತೆಗೆದುಕೊಂಡಿದ್ದೇವೆ ಎನ್ನುವುದನ್ನು ತೋರಿಸಲಿ ಎಂದು ಕಿಡಿಕಾರಿದರು. ಜಿಪಂ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕೊರೆದಿರುವ ಕೊಳವೆ ಬಾವಿಗಳ ಸಂಖ್ಯೆ, ಸಫಲ ಮತ್ತು ವೈಫಲ್ಯದ ಸಂಖ್ಯೆಯನ್ನು ತಿಳಿಸಬೇಕೆಂಬ ತಮ್ಮ ಪ್ರಶ್ನೆಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಆದರೆ, ನನಗೆ ಇದುವರೆಗೂ ಯಾರೂ ಮಾಹಿತಿ ಕೊಟ್ಟಿಲ್ಲ ಎಂದು ಆರೋಪಿಸಿದರು.
ಆಡಳಿತ ಯಂತ್ರಾಂಗ ಯಕ್ಕುಟ್ಟಿದೆ:  ಅಧಿಕಾರಿಗಳಿಂದ ಕೆಲಸ ಮಾಡಿಸಲು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕೈಯಲ್ಲಿ ಆಗುತ್ತಿಲ್ಲ. ಅಧ್ಯಕ್ಷರು ಭ್ರಷ್ಟಾಚಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಮೌನವಾಗಿದ್ದಾರೆ ಎಂದು ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ಮುನೇಗೌಡ ಮಾತನಾಡಿ, ಪ್ರತಿ ಸಭೆಯಲ್ಲೂ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ. ಸಿಇಒರವರು ಇಲ್ಲಿಗೆ ಲಾಯಕ್ಕಿಲ್ಲ. ಬೆಂಗಳೂರಿಗೋ ಇಲ್ಲವೋ ಎಲ್ಲಿಗಾದರೂ ವರ್ಗಾವಣೆ ಮಾಡಿಸಿಕೊಂಡು ಹೋಗಲಿ. ಇಲ್ಲಿ ಸುಮ್ಮನೆ ನೋಡಿಕೊಂಡು ಹೆಸರಿಗೆ ಮಾತ್ರ ಇರಬೇಕಾದ ಅವಶ್ಯಕತೆ ಇಲ್ಲ ಎಂದು ಟೀಕಿಸಿದರು. ಜಿಪಂ ಸದಸ್ಯ ಶ್ರೀರಾಮರೆಡ್ಡಿ ಮಾತನಾಡಿ, ಅಧ್ಯಕ್ಷರು ಮತ್ತು ಸಿಇಒರವರ ವೈಫಲ್ಯವೇ ಆಡಳಿತ ಯಕ್ಕುಟ್ಟಿ ಹೋಗಲು ಕಾರಣವಾಗಿದೆ. ಬಂದ ಕಮೀಷನ್ ಪಡೆದುಕೊಂಡು ಹೇಗೆ ಬೇಕೋ ಹಾಗೆ ಆಡಳಿತ ನಡೆಸಬೇಕೆಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯೆ ಪ್ರವೇಶಿಸಿದ ಜಿಪಂ ಅಧ್ಯಕ್ಷ ಚಿನ್ನಪ್ಪ, ಸುಮ್ಮನೆ ಆರೋಪ ಮಾಡುವುದು ಬೇಡ. ಅಧಿಕಾರಿಗಳಿಂದಾಗಿರುವ ಲೋಪಗಳ ವಿರುದ್ಧ ಕ್ರಮ ಕೈಗೊಳ್ಳೋಣ. ಇಲ್ಲವೇ ಸಭೆಯನ್ನು ಮುಂದೂಡೋಣ ಎಂದು ಸಮಾಧಾನಪಡಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಶಿಡ್ಲಘಟ್ಟ ಶಾಸಕ ಎಂ.ರಾಜಣ್ಣ ಮುಂತಾದವರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.