ಶಾರ್ಟ್ ಸರ್ಕ್ಯೂಟ್: ಮೊಬೈಲ್ ಟವರ್ ಎಕ್ವಿಪ್ಮೆಂಟ್ ರೂಂನಲ್ಲಿ ಬೆಂಕಿ
ಕೆಜಿಎಫ್: ಕೆಜಿಎಫ್ನ ಉರಿಗಾಂಪೇಟೆಯ ಮಂಜುನಾಥನಗರದ ಜನನಿಬಿಡ ಪ್ರದೇಶದಲ್ಲಿ ಅಳವಡಿಸಿರುವ ವೋಡಾಫೋನ್ ಮೊಬೈಲ್ ಟವರ್ನ ಎಕ್ಯುಪ್ಮೆಂಟ್ ರೂಂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಭಾರಿ ಸ್ಫೋಟಗೊಂಡು ದಟ್ಟನೆಯ ಬೆಂಕಿ ಹೊತ್ತುಕೊಂಡು ಅರ್ಧಗಂಟೆಗೂ ಹೆಚ್ಚುಕಾಲ ಉರಿದಿದ್ದು ಅಲ್ಲಿನ ನಿವಾಸಿಗಳು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಓಡಿದ ಘಟನೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಟ್ಟನೆಯ ಹೊಗೆ ಆವರಿಸಿದ್ದನ್ನು ಕಂಡ ಮಂಜುನಾಥ್ ಬಡಾವಣೆಯ ನಿವಾಸಿಗಳು ಕೂಡಲೇ ಅಗ್ನಿಶಾಮಕ ದಳ ಮತ್ತು ಬೆಸ್ಕಾಂ ಇಲಾಖೆಗೆ ಕರೆ ಮಾಡಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಅರ್ಧ ಗಂಟೆಗೂ ಹೆಚ್ಚುಕಾಲ ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿದರು. ಇದರಿಂದ ಆಗಬಹುದಾದ ದೊಡ್ಡ ಅನಾಹುತ ಸದ್ಯ ತಪ್ಪಿತು ಎಂದು ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.
ಘಟನೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುವುದಾಗಿ ತಿಳಿಸಲಾಗಿದೆ. ಸುಮಾರು ವರ್ಷಗಳಿಂದ ವಿವಿಧ ಬಡಾವಣೆಯ ನಾಗರಿಕರು ಮತ್ತು ಇತರೆ ಸಂಘ ಸಂಸ್ಥೆಗಳು ಇಂತಹ ಅಪಾಯಕಾರಿ ಮೊಬೈಲ್ ಟವರ್ಗಳಿಂದ ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆಗಳಿರುವ ಕಾರಣ ಟವರ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ಹೋರಾಟ ನಡೆಸಿದ್ದೂ ಉಂಟು. ಆದರೆ ಜನರ ಸಮಸ್ಯೆ ಮತ್ತು ತೊಂದರೆಗಳನ್ನು ಲೆಕ್ಕಿಸದೆ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ವ್ಯವಸ್ಥಾಪಕರು ಇಂತಹ ಖಾಸಗಿ ಮೊಬೈಲ್ ಸಂಸ್ಥೆಗಳೊಂದಿಗೆ ಶಾಮೀಲಾಗಿ ಲಕ್ಷಾಂತರ ಹಣ ಪಡೆದು ಟವರ್ ನಿರ್ಮಿಸಲು ಅನುಮತಿ ನೀಡುತ್ತಿದ್ದಾರೆ ಎಂದು ಜನತೆ ದೂರಿದ್ದಾರೆ.
ವೋಡಾಫೋನ್ ಮೊಬೈಲ್ ಟವರ್ನ ಎಕ್ಯೂಪ್ಮೆಂಟ್ ರೂಂಗೆ ಯಾವೊಬ್ಬ ಭದ್ರತಾ ಸಿಬ್ಬಂದಿಯನ್ನು ಸಹ ನೇಮಿಸಿಲ್ಲ. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲ ರಕ್ಷಣೆಯ ಕ್ರಮಗಳನ್ನು ಕೈಗೊಳ್ಳಬೇಕಾದ ಸಂಸ್ಥೆಯವರು ಕನಿಷ್ಟ ಪಕ್ಷ ದುರಂತ ಸಂಭವಿಸಿದ ಸ್ಥಳಕ್ಕೆ ಕಂಪನಿಯ ಯಾವ ಅಧಿಕಾರಿ ಅಥವಾ ಸಿಬ್ಬಂಧಿಗಳಾಗಿ ಆಗಮಿಸದೆ ಇದ್ದುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ರಾಬರ್ಟ್ಸನ್ಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

