ಕೋಲಾರ

ಪೊಲೀಸರಿಗೆ ದೈಹಿಕ ಸದೃಢತೆ ಅಗತ್ಯ: ಡಿಸಿ ರವಿ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಡಿ. 22
ಸಮಾಜದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಅಪರಾಧ, ದೌರ್ಜನ್ಯಗಳನ್ನು ತಡೆದು ಜನತೆ ಶಾಂತಿ ನೆಮ್ಮದಿಯಿಂದ ಬದುಕುವುದಕ್ಕೆ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಗೆ ಹೆಚ್ಚಿನ ಸಹಕಾರ ನೀಡುವುದು ಸಾರ್ವಜನಿಕರ ಅಧ್ಯ ಕರ್ತವ್ಯವಾಗಿದೆ. ಅದೇ ರೀತಿ ಸಮಾಜಘಾತುಕರನ್ನು ಮಟ್ಟ ಹಾಕಲು ಎದುರಾಗುವ ಸವಾಲುಗಳನ್ನು ನಿಬಾಯಿಸಲು ಪೊಲೀಸರಿಗೆ ಮನಸು, ಬುದ್ದಿಶಕ್ತಿ ಇದ್ದರೆ ಸಾಲದು ದೈಹಿಕ ಸದೃಢತೆಯು ಅತ್ಯಗತ್ಯವೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಸಮುದಾಯದ ಹಕ್ಕುಗಳನ್ನು ಕಾಪಾಡುವಲ್ಲಿ ಮತ್ತು ಉತ್ತಮ ಜೀವನ ನಡೆಸಲು ಬೇಕಾದ ರಕ್ಷಣೆಯನ್ನು ನೀಡುವುದಕ್ಕೆ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಜನರ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟು ಕಾಪಾಡುವ ಪೊಲೀಸರ ಸೇವೆಗೆ ಸಾರ್ವಜನಿಕರಿಂದ ಪ್ರೋತ್ಸಾಹ, ಧೈರ್ಯ ಹಾಗೂ ಸಹಕಾರ ಸಿಗದಿದ್ದರೆ ಅಪರಾಧಗಳ ಸಂಖ್ಯೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಆಧುನಿಕತೆ ಮತ್ತು ತಂತ್ರಜ್ಞಾನ ಹೆಚ್ಚಾದಂತೆ ಸಮಾಡದಲ್ಲಿ ದೌರ್ಜನ್ಯಗಳು ಹೇರಳವಾಗಿತ್ತಿವೆ. ಪೊಲೀಸರು ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸಬೇಕಾದರೆ ಮನಸು, ಬುದ್ದಿಯ ಜತೆ ದೇಹವು ಸ್ಪಂದಿಸಬೇಕಾಗಿದೆ, ಇದಕ್ಕಾಗಿ ಪೊಲೀಸರು ಕ್ರೀಡೆ, ವ್ಯಾಯಾಮದ ಮೂಲಕ ದೈಹಿಕ ಕ್ರಿಯಾಶೀಲನೆ ಹೆಚ್ಚಿಸಿಕೊಳ್ಳಲು ಆಸಕ್ತಿ ತೋರಬೇಕೆಂದರು.
ಪೊಲೀಸರಿಗೆ ಇತರೆ ಇಲಾಖೆಗಳ ಸಿಬ್ಬಂದಿಗೆ ಸಿಗುವಂತೆ ರಜೆ ಸಿಗುವುದಿಲ್ಲ, ಆದರೂ ಸಮಾಜದಲ್ಲಿ ಶಾಂತಿ ಸುವವ್ಯಸ್ಥೆಯನ್ನು ಕಾಪಾಡಲು ಯೋಧನಂತೆ ಕೆಲಸ ನಿರ್ವಹಿಸುವ ಪೊಲೀಸರು ವರ್ಷದಲ್ಲಿ ಎರಡು ದಿನ ತನ್ನ ಎಲ್ಲಾ ಒತ್ತಡಗಳಿಂದ ಮುಕ್ತಿಗೊಳ್ಳಲು ಕ್ರೀಡಾ ಚುಟುವಟೆಕೆಗಳು ಸಹಕಾರಿಯಾಗಲಿದೆ, ಪೊಲೀಸರು ತಮ್ಮ ಕುಟುಂಬ ವರ್ಗದೊಂದಿಗೆ ಈ ಎರಡು ದಿನ ಕಲಿತು ಬೆರೆತು ಇಲಾಖೆಯ ಪ್ರತಿಷ್ಠೆ ಹೆಚ್ಚಿಸಬೇಕೆಂದರು.
ಬ್ರಿಟಿಷರ ಕಾಲದಲ್ಲಿ ಬಳಸುತ್ತಿದ್ದ ಸಶಸ್ತ್ರಗಳು ಈಗ ಪ್ರಯೋಜನಕ್ಕೆ ಬರುತ್ತಿಲ್ಲ, ಆಧುನಿಕ ಯುಗದಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದರಿಂದ ಪೊಲೀಸ್ ಇದಕ್ಕೆ ಹೊಂದಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಡಿಎಆರ್‌ನ ನಂಜುಂಡಪ್ಪ, ಕೋಲಾರ ಉಪವಿಭಾಗ ಕೆ.ಚಂದ್ರಪ್ಪ, ಮುಳಬಾಗಲು ಉಪವಿಭಾಗ ಎಂ. ಶಂಕರಪ್ಪ, ಜಿಲ್ಲಾ ಮಹಿಳಾ ತಂಡ ವರಲಕ್ಷ್ಮೀ ಹಾಗೂ ಆರ್.ಪಿ.ಐನ ಬಸವರಾಜು ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಈ ತಂಡದಿಂದ ಕ್ರೀಡಾಪಟುಗಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಡಿಎಆರ್ ತಂಡದ ಆರ್‌ಎಸ್‌ಐ ನಂಜುಡಪ್ಪ ಕ್ರೀಡಾ ಪ್ರಮಾಣ ವಚನ ಬೋಧಿಸಿದರು. ಕಳೆದ ಬಾರಿಯ ಚಾಂಪಿಯನ್ ರಾಜೇಂದ್ರಕುಮಾರ್ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಡಿವೈಎಸ್ಪಿ ಅಶೋಕ ಕುಮಾರ್, ಗುಪ್ತಚಾರ ವಿಭಾಗದ ಡಿವೈಎಸ್ಪಿ ಅಬ್ದುಲ್ ರೆಹಮಾನ್, ಗೃಹ ರಕ್ಷಕ ದಳದ ಕಮಾಂಡೆಂಟ್ ಮರಿಸ್ವಾಮಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮುನಿ ಆಂಜನಪ್ಪ ಇದ್ದರು.
ಪತ್ರಕರ್ತರ ತಂಡಕ್ಕೆ ಜಯ
ಕೋಲಾರ: ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ತಂಡದ ನಡುವೆ ನಡೆದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ ರೋಚಕ ಜಯ ಗಳಿಸಿತು. ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಜಿಲ್ಲಾ ಪೊಲೀಸ್ ಇಲಾಖೆ ನಿಗಧಿತ 10 ಓವರ್‌ಗಳಲ್ಲಿ 7 ವಿಕಟ್ ನಷ್ಟಕ್ಕೆ 82 ರನ್ ಮಾಡಿತು. ಈ ಮೊತ್ತವನ್ನು ಬೆನ್ನಟ್ಟಿದ ಪತ್ರಕರ್ತರ ತಂಡ ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಗೆಲವಿನ ನಗೆ ಬೀರಿತು.ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲಾ ಎಸ್ಪಿ ಡಾ. ರಾಮ್‌ನಿವಾಸ್ ಸಫೆಟ್, ಪಿಎಸ್‌ಐಗಳಾದ ಜಗದೀಶ್, ಯಶವಂತ್ ಉತ್ತಮ ಬ್ಯಾಟಿಂಗ್ ನಡೆಸಿದರು. ಪತ್ರಕರ್ತರ ತಂಡದಲ್ಲಿ ಸುಜನ್, ರಾಜೇಂದ್ರ ಸಿಂಹ, ಸುರೇಶ್, ಚಂದ್ರು, ಗಣೇಶ್ ಉತ್ತಮ ಬೌಲಿಂಗ್ ಮಾಡಿದರು. ಪತ್ರಕರ್ತರ ತಂಡದಲ್ಲಿ ರವಿ, ಸಂದೇಶ್, ಚಂದ್ರು ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಜಯ ತಂದುಕೊಟ್ಟರು. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ, ಮಂಜುನಾಥ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.