ಕೋಲಾರ

ಬ್ಯಾಂಕ್‌ಗಳು ನೀಡುವ ಸಾಲ ಮರು ಪಾವತಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಡಿ.23
ಯಾವುದೇ ಗ್ಯಾರೆಂಟಿ ಇಲ್ಲದೆ ರೈತರಿಗೆ, ಕಾರ್ಮಿಕರಿಗೆ, ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಬ್ಯಾಂಕುಗಳ ಮೂಲಕ ಸಾಲ ಕಲ್ಪಿಸಲು ಸಿದ್ಧವಿದ್ದು, ಈ ಸಾಲವನ್ನು ಮರುಪಾವತಿ ಮಾಡುವಂತಹ ಪ್ರವೃತ್ತಿ ಬೆಳಸಿಕೊಳ್ಳಬೇಕೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ನಗರದ ಹೊರವಲಯದ ಎಂಡಿಕೆ ಪ್ಲಾಜ್‌ದಲ್ಲಿ ಕೆನರಾ ಬ್ಯಾಂಕ್‌ನಿಂದ ಸೋಮವಾರ ಹಮ್ಮಿಕೊಂಡಿದ್ದ ಸಾಲ ಮೇಳದಲ್ಲಿ ಆಟೋರಿಕ್ಷಾ ಖರೀದಿಗೆ ಮತ್ತು ಸ್ಕೀಲ್ ರೀಲರ್ಸ್‌ಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದನ್ವಯ ಇಲಾಖೆಯಿಂದ 25 ಲಕ್ಷದಿಂದ 1 ಕೋಟಿಯವರೆಗೆ ಯಾವುದೇ ಗ್ಯಾರಂಟಿಯಿಲ್ಲದೆ ಬ್ಯಾಂಕ್‌ಗಳಿಂದ ಸಾಲ ದೊರೆಯಲಿದೆ. ಇದನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸುವುದರ ಜೊತೆಗೆ ಸಾಲ ಮರು ಪಾವತಿ ಮಾಡುವ ಮೂಲಕ ಇತರರಿಗೆ ಅನುಕೂಲ ಮಾಡುವಂತೆ ಕರೆ ನೀಡಿದರು.
ಪಿಎಂಎಜಿಪಿ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿರುವ ಜಿಲ್ಲೆಯ ಫಲಾನುಭವಿಗಳಿಗೆ ಜನವರಿ ಒಳಗೆ ಬ್ಯಾಂಕ್‌ನವರು ಸಾಲ ಮಂಜೂರಾತಿ ಪತ್ರ ನೀಡಿ ಫಲಾನುಭವಿಗಳ ಖಾತೆಯಲ್ಲಿ ಹಣ ಜಮಾ ಮಾಡಬೇಕು ಎಂದು ಸೂಚನೆ ನೀಡಿದರು.
ಐಟಿಐ ನಿಂದ ಹಿಡಿದು ಎಂಟೆಕ್ ವರೆಗೂ ತರಬೇತಿ ನೀಡುವ ವಿವಿಯನ್ನು ಹೈದರಾಬಾದ್‌ನಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ ಜಮೀನು ನೀಡಲು ಆ ರಾಜ್ಯದ ಮುಖ್ಯಮಂತ್ರಿ ಕಿರಣ್‌ಕುಮಾರ್ ಮುಂದೆ ಬಂದಿದ್ದಾರೆ ಎಂದರು.  ತಾಂತ್ರಿಕ ತರಬೇತಿಗಳನ್ನು ನೀಡುವುದರ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾವಲಂಬನೆ ಜೀವನ ನಡೆಸುವಂತಹ ಅವಕಾಶವನ್ನು ಕಲ್ಪಿಸಿಕೊಡಲು ಕೇಂದ್ರ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀನಿವಾಸಪುರ ಶಾಸಕ ಕೆ.ಆರ್. ರಮೇಶ್ ಕುಮಾರ್ ದೇಶದ ಆರ್ಥಿಕ ವ್ಯವಸ್ಥೆ ಮತ್ತು ಸಾಲ ಕೊಡುವ ವ್ಯವಸ್ಥೆ ಶ್ರೀಮಂತರ ಪರವಿದ್ದಿಯೇ ಹೊರತು ಬಡವರ ಪರ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಡವರು ಬ್ಯಾಂಕ್‌ಗಳಲ್ಲಿ ಸಾಲ ಕೇಳಲು ಹೋದರೆ ಲಕ್ಷಾಂತರ ರುಪಾಯಿ ಬೆಲೆಬಾಳುವ ವಸ್ತುಗಳ ಗ್ಯಾರಂಟಿ ಕೇಳುವುದರ ಜತೆಗೆ ಅನುಮಾನದಿಂದ ಕಾಣುತ್ತಾರೆ. ಆದರೆ ಶ್ರೀಮಂತರು ಕೋಟು ಧರಿಸಿ, ಇಂಗ್ಲಿಷ್ ಮಾತನಾಡಿದರೆ ಸಾಲ ಸುಲಭವಾಗಿ ಸಿಗುತ್ತದೆ ಇದರ ಜೊತೆಗೆ ಬ್ಯಾಂಕಿನ ಕೆಲ ಅಧಿಕಾರಿಗಳಿಗೆ ಮಾಮೂಲಿ ಸಿಗುತ್ತದೆ ಎಂದರು.
ಕೆನರಾ ಬ್ಯಾಂಕಿನ ಉಪ ಪ್ರಬಂಧಕ ಸಂಪತ್ ಕುಮಾರ್ ಪ್ರಾಸ್ತವಿಕ ಭಾಷಣ ಮಾಡಿ, ಕೋಲಾರ ಜಿಲ್ಲೆಯಲ್ಲಿ 2013-14ನೇ ಸಾಲಿನಲ್ಲಿ ಪಿಎಂಎಜಿಪಿ ಯೋಜನೆಯಲ್ಲಿ 38 ಮಂದಿಗೆ 2.57 ಕೋಟಿ ನೀಡಲಾಗುತ್ತಿದೆ, ಉಳಿದವರಿಗೆ ಬೇರೆ ಬ್ಯಾಂಕ್‌ಗಳಿಂದ ಸಾಲ ನೀಡುವಂತೆ ತಿಳಿಸಲಾಗಿದೆ ಎಂದರು.
ಕೋಲಾರ ಜಿಲ್ಲೆಯ ಕ್ಯಾಲನೂರು, ಚನ್ನಸಂದ್ರ, ಶ್ರೀನಿವಾಸಪುರ ಸೇರಿದಂತೆ ಸುಮಾರು 350 ರೀಲರ್ಸ್‌ಗಳಿಗೆ 4.90 ಕೋಟಿಯನ್ನು ನೀಡಲಾಗಿದೆ, ಎಂಎಸ್‌ಎಂಇ ಯೋಜನೆಯಲ್ಲಿ 10 ಮಂದಿಗೆ ಆಟೋರಿಕ್ಷಾಗಳನ್ನು ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
ಮಾಜಿ ಸಚಿವ ನಿಸಾರ್ ಅಹಮದ್, ರೀಲರ್ಸ್ ಅಸೋಸಿಯೇಷನ್‌ನ ಸಾಬೀರ್ ಪಾಷ, ಸ್ಕೀಲ್‌ರೀಲರ್ಸ್ ಅಸೋಸಿಯೇಷನ್ ಆರೀಫ್, ನಗರಸಭೆ ಸದಸ್ಯೆ ಅಪ್ರೋಜ್ ಪಾಷ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್, ಆಶಾ ದೀಪ ಸಂಸ್ಥೆಯ ಕಾರ್ಯದರ್ಶಿ ರೂಪ ಶಿಶಧರ್, ಮಾಜಿ ಜಿಪಂ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ನಗರಸಭೆ ಸದಸ್ಯ ಪ್ರಸಾದ್ ಬಾಬು, ಸುರೇಶ್ ಕುಮಾರ್, ಅಬ್ದುಲ್ ಖಯ್ಯೂಂ, ಕೆನರಾ ಬ್ಯಾಂಕಿನ ಸಹಾಯಕ ಪ್ರಬಂಧಕ ಆರ್.ಜಿ. ಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.