ಸರಣಿ ಪರೀಕ್ಷೆ ಮೂಲಕ ಆತ್ಮವಿಶ್ವಾಸ ತುಂಬಿ
ಕ.ಪ್ರ.ವಾರ್ತೆ ಕೋಲಾರ ಡಿ.27
ಸರಣಿ ಪರೀಕ್ಷೆಗಳನ್ನು ನಡೆಸುವ ಮೂಲಕ ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ ನಿವಾರಣೆಯ ಜೊತೆಗೆ ಆತ್ಮವಿಶ್ವಾಸ ತುಂಬಬೇಕೆಂದು ಶಿಕ್ಷಕರಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ವಿ. ಪದ್ಮನಾಭ್ ಸಲಹೆ ನೀಡಿದ್ದಾರೆ.
ಹತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ನಂತರ ಶಿಕ್ಷಕರಿಗೆ ಈ ಸೂಚನೆ ನೀಡಿರುವ ಅವರು, ಈ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಹೆಚ್ಚಿನ ಕಾಳಜಿ ಹಾಗೂ ಶ್ರದ್ಧೆ ವಹಿಸಿ ಯಾವ ವಿಷಯಗಳ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿದ್ದಾರೋ ಅಂತಹ ಮಕ್ಕಳಿಗೆ ವಿಶೇಷ ಬೋಧನೆ ಹಾಗೂ ಕೊರತೆ ತುಂಬಿ ಗುಣಾತ್ಮಕ ಫಲಿತಾಂಶ ಕಾಣಲು ಸಹಕಾರ ನೀಡಬೇಕೆಂದು ತಿಳಿಸಿದ್ದಾರೆ.
ಅನನ್ಯ ಸ್ಪೂರ್ತಿ ಮಾರ್ಗಸೂಚಿ: ಎಸ್ಎಸ್ಎಲ್ಸಿ ಫಲಿತಾಂಶವನ್ನು ಉತ್ತಮಪಡಿಸಲು ಹಾಗೂ ಗುಣಾತ್ಮಕಗೊಳಿಸುವ ನಿಟ್ಟಿನಲ್ಲಿ ಇಲಾಖೆ ವಿಶೇಷವಾಗಿ ರೂಪಿಸಿರುವ ಅನನ್ಯ ಸ್ಪೂರ್ತಿ ಮಾರ್ಗಸೂಚಿಯಲ್ಲಿನ ಎಲ್ಲಾ ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಿಳಿಸಲಾಗಿದ್ದು ಈ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರ ಮೇಲ್ಚಿಚಾರಣೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಗಣಿತ, ವಿಜ್ಞಾನ, ದ್ವಿತೀಯ ಭಾಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗಿದ್ದು, ಸದರಿ ವಿಷಯಗಳ ಶಿಕ್ಷಕರು ಹೆಚ್ಚಿನ ಗಮನಹರಿಸಬೇಕು, ಈಗಾಗಲೇ ನೀಡಿರುವ ಅಧ್ಯಾಯವಾರು ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ನೀಡಿ ಉತ್ತರ ಬರೆಸುವ ಕಾರ್ಯ ಪುನರಾವರ್ತನೆಯಾಗಬೇಕು ಎಂದಿದ್ದಾರೆ.
ಕಲಿಕೆಯ ದೃಢೀಕರಣ: ಗುಂಪು ಅಧ್ಯಯನಕ್ಕೆ ಆದ್ಯತೆ ನೀಡಿ, ಶಾಲೆಯಲ್ಲಿ ಸ್ಥಾಪಿತವಾಗಿರುವ ವಿಷಯವಾರು ಕ್ಲಬ್ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾಗಿರಲಿ ಮತ್ತು ಕಲಿಕೆಯ ದೃಢೀಕರಣ ಮಾಡಬೇಕೆಂದು ತಿಳಿಸಿದ್ದಾರೆ. ಈಗಾಗಲೇ 6 ಸೆಟ್ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನೀಡಿದ್ದು, ಪಠ್ಯ ಪುಸ್ತಕ ಅಧ್ಯಯನಕ್ಕೆ ಒತ್ತು ನೀಡಿ, ತೆರೆದ ಪುಸ್ತಕ ಪರೀಕ್ಷೆ ನಡೆಸಿ ಪಠ್ಯ ಓದುವ ಹವ್ಯಾಸ ಬಲಗೊಳಿಸಿ ಎಂದು ಶಿಕ್ಷಕರಿಗೆ ಸಲಹೆ ನೀಡಿದ್ದಾರೆ. ಮುಖ್ಯ ಸಹ ಶಿಕ್ಷಕರ ತರಗತಿ ವೀಕ್ಷಿಸಬೇಕು, ಪಾಠೋಪಕರಣಗಳ ಬಳಕೆ, ಪೂರ್ವ ಸಿದ್ಧತಾ ಪರೀಕ್ಷೆಗಳ ಮೂಲಕ ಬರವಣಿಗೆ ಕೌಶಲ್ಯ ಬೆಳೆಸುವಂತೆ ಆದೇಶಿಸಿದ್ದಾರೆ.
ಅರ್ಧ ವಾರ್ಷಿಕ ಪರೀಕ್ಷೆ: ಎಸ್ಎಸ್ಎಲ್ಸಿ ಅರ್ಧವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಿಂದ 10,461 ಬಾಲಕರು, 10,343 ಬಾಲಕಿಯರು ಸೇರಿದಂತೆ 20,804 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 13,369 ಮಂದಿ ತೇರ್ಗಡೆಯಾಗುವ ಮೂಲಕ ಶೇ.64.21 ರಷ್ಟು ಫಲಿತಾಂಶ ಬಂದಿದೆ. ಇದು ತೃಪ್ತಿದಾಯಕವಾಗಿಲ್ಲ, ಕನಿಷ್ಠ ಶೇ.75 ರಿಂದ 80 ರಷ್ಟು ಫಲಿತಾಂಶ ಬರಬೇಕಾಗಿತ್ತು, ಇನ್ನು ಕಾಲ ಮಿಂಚಿಲ್ಲ, ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಕಡೆ ಹೆಚ್ಚಿನ ಗಮನ ನೀಡಿ, ಅದೇ ರೀತಿ ಶೇ.70ಕ್ಕಿಂತ ಹೆಚ್ಚು ಗಳಿಸಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಸ್ಫೂರ್ತಿ ತುಂಬುವ ಮೂಲಕ ಗಣಿತ ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯದಲ್ಲಿ ಹೆಚ್ಚು ಅಂಕ ಪಡೆಯಲು ಅಗತ್ಯ ಮಾರ್ಗದರ್ಶ ನೀಡುವಂತೆ ಸೂಚಿಸಿದ್ದಾರೆ.
ಗಮನ ಹರಿಸಬೇಕು: ಕೆಜಿಎಫ್ ಶೈಕ್ಷಣಿಕ ವಲಯದಲ್ಲಿ ತೃತೀಯ ಭಾಷೆ ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣತೆ ಪ್ರಮಾಣ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಿಸಿದ ವಿಷಯದ ಶಿಕ್ಷಕರು ವಿಶೇಷ ಗಮನ ಹರಿಸಬೇಕೆಂದಿದ್ದಾರೆ. ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲೂ ಗಣಿತ ವಿಷಯದಲ್ಲೇ ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಶಿಕ್ಷಕರು ಗುಂಪು ಅಧ್ಯಯನ, ಪುನರಾವರ್ತಿತ ಪರೀಕ್ಷೆಗಳ ಮೂಲಕ ಕಲಿಕೆಯ ದೃಢೀಕರಣ ಮಾಡಬೇಕೆಂದು ಸೂಚಿಸಿದ್ದಾರೆ. ಪ್ರತಿ ಪರೀಕ್ಷೆ ನಂತರ ಪೋಷಕರ ಹಾಗೂ ತಾಯಂದಿರ ಸಭೆ ಕಡ್ಡಾಯವಾಗಿ ನಡೆಸಿ ಫಲಿತಾಂಶದ ಮಾಹಿತಿ ನೀಡಬೇಕು ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಮಹತ್ವದ ಕುರಿತು ಮನವರಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಪೂರ್ವಸಿದ್ಧತಾ ಪರೀಕ್ಷೆ: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಜ.3 ರಿಂದ ಮೊದಲನೇ ಪೂರ್ವಸಿದ್ಧತಾ ಪರೀಕ್ಷೆ ಆರಂಭಗೊಳ್ಳಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಅದರಂತೆ ಜನವರಿ 3 ರಂದು ಪ್ರಥಮ ಭಾಷೆ, 4 ರಂದು ಸಮಾಜ ವಿಜ್ಞಾನ, ಜ.6 ರಂದು ಗಣಿತ, 7ರಂದು ತೃತೀಯ ಭಾಷೆ, ಜ.8 ರಂದು ವಿಜ್ಞಾನ ಮತ್ತು ಜ.9 ರಂದು ದ್ವಿತೀಯ ಭಾಷಾ ಪರೀಕ್ಷೆಗಳು ನಡೆಯಲಿದ್ದು, ಹಿಂದಿ ಮತ್ತು ದ್ವಿತೀಯ ಭಾಷೆ ಪರೀಕ್ಷೆಗಳು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12-15 ರವರೆಗೂ ಮತ್ತು ಉಳಿದ ವಿಷಯಗಳ ಪರೀಕ್ಷೆ 9.30 ರಿಂದ ಮಧ್ಯಾಹ್ನ 12.45 ರವರೆಗೂ ನಡೆಯುತ್ತದೆ ಎಂದು ಎಸ್ಎಸ್ಎಲ್ಸಿ ಪರೀಕ್ಷೆಯ ನೋಡೆಲ್ ಅಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

