ಗ್ರಾಪಂ ಸದಸ್ಯನಿಂದ ಬೆದರಿಕೆ; ಅಧ್ಯಕ್ಷೆ ದೂರು
ಚಿಂತಾಮಣಿ: ದೊಡ್ಡಗಂಜೂರು ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಅವರ ವಿರುದ್ಧ ಕ್ಷುಲ್ಲಕ ಕಾರಣಕ್ಕಾಗಿ ಗ್ರಾಪಂ ಸದಸ್ಯನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿರುವ ಘಟನೆ ಸೋಮವಾರ ನಡೆದಿದೆ. ತಾಲೂಕಿನ ದೊಡ್ಡಗಂಜೂರು ಗ್ರಾಪಂ ಕಾರ್ಯಾಲಯದಲ್ಲಿ ಸೋಮವಾರ ಸಾಮಾನ್ಯ ಸಭೆಯನ್ನು ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಅಧ್ಯಕ್ಷತೆಯಲ್ಲಿ ಪಿಡಿಒ ಹಾಗೂ ಕಾರ್ಯದರ್ಶಿ ಸೇರಿ ಕರೆಯಲಾಗಿತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ಅಧ್ಯಕ್ಷೆ ಹಾಗೂ ಹಲವು ಸದಸ್ಯರಿದ್ದಾಗ ಸದಸ್ಯ ನಾಗಭೂಷಣಾಚಾರಿ ಕ್ಷುಲ್ಲಕ ರಾಜಕಾರಣಕ್ಕಾಗಿ ಅಧ್ಯಕ್ಷರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಚೇರಿಯ ಕುರ್ಚಿಗಳನ್ನು ಬಿಸಾಡಿ ಹಲ್ಲೆಗೆ ಮುಂದಾದ ಎನ್ನಲಾಗಿದೆ. ಗ್ರಾಪಂನಲ್ಲಿ ನಾಗಭೂಷಣಾಚಾರಿ ವರ್ತನೆ ಬಗ್ಗೆ ಬೇಸತ್ತು ತಾಪಂ ಅಧ್ಯಕ್ಷೆ ಗೌರಮ್ಮನಾಗೇಶ್ ಹಾಗೂ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಸೇರಿ ನಗರದ ಡಿವೈಎಸ್ಪಿ ಸಣ್ಣತಿಮ್ಮಪ್ಪಗೆ ದೂರು ನೀಡಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಗ್ರಾಮಾಂತರ ಠಾಣೆಗೆ ಬಂದ ಮಹಿಳೆಯರನ್ನು ಗೌರವದಿಂದ ಕಾಣದ ಸ್ಥಳೀಯ ಪೊಲೀಸರ ಕಾರ್ಯವೈಖರಿ ಬಗ್ಗೆ ತಾಪಂ ಅಧ್ಯಕ್ಷೆ ಗೌರಮ್ಮನಾಗೇಶ್ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ. ದೊಡ್ಡಗಂಜೂರು ಗ್ರಾಪಂನಲ್ಲಿ ನಡೆದ ಘಟನೆಗೆ ಸಂಬಂಧಿಸಿ ವಿಚಾರಿಸಲು ಬಂದ ತಾಪಂ ಅಧ್ಯಕ್ಷೆ ಹಾಗೂ ಹಲವು ಸದಸ್ಯರ ದೂರನ್ನು ಆಲಿಸದೆ ಪೊಲೀಸರು ಏಕ ಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಠಾಣೆಯಲ್ಲಿ ಮಾತಿನ ಚಕಮುಕಿ: ಮಾಜಿ ಶಾಸಕ ಸುಧಾಕರ್ ಬೆಂಬಲಿತ ಹಾಲಿ ಹಾಗೂ ಮಾಜಿ ಅಧ್ಯಕ್ಷರ ನಡುವಿನ ಭಿನ್ನಾಭಿಪ್ರಾಯದಿಂದ 2 ಗುಂಪುಗಳು ಸೇರಿ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರ-ವಿರೋಧ ಮಾತಿನ ಚಕಮುಖಿ ನಡೆಯಿತು. ಸಬ್ಇನ್ಸ್ಪೆಕ್ಟರ್ ರಾಘವೇಂದ್ರ 2 ಗುಂಪುಗಳು ತಾಳ್ಮೆಯಿಂದ ವರ್ತಿಸಬೇಕೆಂದು ಸೂಚಿಸಿದರು. ನಂತರ ಠಾಣೆಯಲ್ಲಿ ಹಲವು ಸಮಯ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಓವರ್ಹೆಡ್ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಶಿಡ್ಲಘಟ್ಟ: ತಾದೂರಿನಲ್ಲಿ ಓವರ್ಹೆಡ್ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಶಾಸಕ ಎಂ. ರಾಜಣ್ಣ ನೆರವೇರಿಸಿದರು. ತಾದೂರು ಗ್ರಾಪಂ ಅನುದಾನದಲ್ಲಿ 13.5 ಲಕ್ಷ ರು. ವೆಚ್ಚದಲ್ಲಿ ಓವರ್ಟ್ಯಾಂಕ್ ನಿರ್ಮಾಣವನ್ನು 4 ತಿಂಗಳ ಒಳಗೆ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ರಾಜಣ್ಣ, ಬಂಕ್ ಮುನಿಯಪ್ಪ. ಮೇಲೂರು ರವಿ ಮತ್ತಿತತರು ಇದ್ದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಗುಡಿಬಂಡೆ: ತಾಲೂಕಿನ ಹಂಪಸಂದ್ರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಂಪಸಂದ್ರ ಗ್ರಾಪಂ, ಜಿಲ್ಲಾ ಮಾಜಿ ಸೈನಿಕರ ಟ್ರಸ್ಟ್ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಆಶ್ರಯಲ್ಲಿ ಮಾಜಿ ಸೈನಿಕ ದಿ. ಚೌಡಪ್ಪ ಸ್ಮರಣಾರ್ಥ ಹೋಬಳಿ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಶೈಲಜ, ಯುವಜನತೆ ಸೇವಾ ಮನೋಭಾವದಿಂದ ಗ್ರಾಮೀಣ ಜನತೆಯನ್ನು ನಾಗರಿಕತೆಯತ್ತ ಕರೆದೊಯ್ಯಲು ಶ್ರಮಿಸಬೇಕು ಎಂದರು. ಶಿಬಿರ ಉದ್ಘಾಟಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಮಹಿಮಾ, ಗ್ರಾಮೀಣ ಜನತೆಗೆ ಆರೋಗ್ಯದ ಅರಿವಿನ ಕೊರತೆಯಿರುತ್ತದೆ. ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿ, ಪೌಷ್ಟಿಕ ಆಹಾರ ಸೇವನೆ ಮತ್ತು ಉತ್ತಮ ವ್ಯಾಯಾಮದಲ್ಲಿ ತೊಡಗಿ ಆರೋಗ್ಯವಂತರಾಗಿರಬೇಕೆಂದರು. ಹಂಪಸಂದ್ರ ಗ್ರಾಪಂ ಉಪಾಧ್ಯಕ್ಷೆ ಅಶ್ವತ್ಥಮ್ಮ, ಆರೋಗ್ಯವಂತರಾಗಿ ಬಾಳಲು ಗ್ರಾಮೀಣ ಜನತೆ ಮುಂದಾಗಬೇಕು ಎಂದರು. ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಕಾರ್ಯದರ್ಶಿ ಜಿ.ವಿ. ವಿಶ್ವನಾಥ ಹಾಗೂ ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಅಮರನಾಥಬಾಬು ಅರಿವು ಮೂಡಿಸಿದರು. 50ಕ್ಕೂ ಹೆಚ್ಚು ಮಂದಿಯಿಂದ 32 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ, ವೈದ್ಯೆ ಡಾ. ಸ್ವಾತಿ, ರವಿ ಲಂಬಾಣಿ, ಬಿ. ವಿಶ್ವನಾಥ್, ಅಮರನಾರಾಯಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

