ಗುತ್ತಿಗೆದಾರರ ಪರ ಮೃದು ಧೋರಣೆ ಜಿಪಂ ಅಧ್ಯಕ್ಷೆ ವಿರುದ್ಧ ವರ್ತೂರ್ ಬಣ ಕಿಡಿ
ಕೋಲಾರ: ತಾಲೂಕಿನ ದೊಡ್ಡಹಸಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಆಗ್ರಹಿಸಿ ಮತ್ತು ಪ್ರಕರಣದ ಬಗ್ಗೆ ತಿಳಿಯದೆ ಗುತ್ತಿಗೆದಾರರ ಪರ ಇತ್ತೀಚೆಗೆ ಪ್ರತಿಭಟನೆ ನಡೆಸಿ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ ಅವರು ಮನ ಬಂದಂತೆ ಮಾತನಾಡಿದ್ದಾರೆಂದು ಆರೋಪಿ ವರ್ತೂರು ಬಣದ ತಾ.ಪಂ ಮತ್ತು ಗ್ರಾ.ಪಂ ಸದಸ್ಯರು ಹಾಗೂ ಮುಖಂಡರು ಗ್ರಾಪಂ ಕಚೇರಿಗೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.
ದೊಡ್ಡಹಸಾಳ ಗ್ರಾ.ಪಂನಲ್ಲಿ ಕಾರ್ಯದರ್ಶಿಯಾಗಿರುವ ಚಂದ್ರಕಲಾ ಎಂಬುವರ ವೈಫಲ್ಯದಿಂದ ಸಿಎಲ್ಎಫ್ ಬಲ್ಬ್ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಈ ಹಿನ್ನೆಲೆಯಲ್ಲಿ ಬಿಲ್ ಪಾವತಿಸಬಾರದು ಎಂದು ಗ್ರಾಪಂ ಸದಸ್ಯರು ಪಟ್ಟು ಹಿಡಿದು ತನಿಖೆಗೆ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಬಿಲ್ ನೀಡಲಿಲ್ಲ. ಆದರೆ, ಜಿ.ಪಂ ಅಧ್ಯಕ್ಷರು ಪ್ರಕರಣದ ಪೂರ್ವಪರ ತಿಳಿಯದೆ ಜೆಡಿಎಸ್ ಮುಖಂಡರೊಂದಿಗೆ ಸೇರಿ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿ ಬಿಲ್ ಮಂಜೂರು ಮಾಡಿಸಿದ್ದಾರೆಂದು ಆರೋಪಿಸಿದರು.
ಗ್ರಾ.ಪಂ ಅಧ್ಯಕ್ಷರು ಬಲ್ಬ್ಗಳನ್ನು ಖರೀದಿಸಬಹುದು ಎಂಬುದು ಯಾವ ಕಾನೂನಿನಲ್ಲಿದೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಆದೇಶ ಮಾಡುವವರೆಗೆ ಮಾತ್ರ ಅಧ್ಯಕ್ಷರಿಗೆ ಅಧಿಕಾರವಿದ್ದು, ಅದನ್ನು ಉಲ್ಲಂಘಿಸಿ ಅಧ್ಯಕ್ಷರು ಗುತ್ತಿಗೆದಾರರಾಗಿ ಬಲ್ಬ್ ಖರೀದಿಸಿದ್ದಾರೆ. ಈ ಬಲ್ಬ್ಣಗಳು ಸಹ ಐಎಸ್ಐ ಚಿಹ್ನೆಯನ್ನು ಹೊಂದಿಲ್ಲ. ಕಳಪೆ ಗುಣಮಟ್ಟವುಳ್ಳ ಈ ಪರಿಕರಕ್ಕೆ ಬಿಲ್ ಮಂಜೂರು ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಗುತ್ತಿಗೆದಾರರ ಪರವಾಗಿ ಮಾತನಾಡುವ ಅಧ್ಯಕ್ಷರಿಗೆ ಕಾನೂನು ತಿಳುವಳಿಕೆ ಇಲ್ಲವೆ ಎಂದು ವ್ಯಂಗ್ಯವಾಡಿದ್ದಾರೆ.
ಲಘುವಾಗಿ ಮಾತನಾಡಬೇಡಿ:ಗುತ್ತಿಗೆದಾರರ ಪರವಾಗಿ ಪ್ರತಿಭಟನೆ ಮಾಡುವುದು ದೊಡ್ಡ ಸಾಧನೆ ಎಂದು ಜಿ.ಪಂ ಅಧ್ಯಕ್ಷರು ತಿಳಿದಿದ್ದಾರೆ. ಅಭಿವೃದ್ಧಿಯ ಅರ್ಥಗೊತ್ತಿಲ್ಲದ ಇಂತಹವರು ಜಿ.ಪಂ ಅಧ್ಯಕ್ಷರಾಗಿರುವುದು ಜನತೆಯ ದುರ್ದೈವ ಎಂದಿರುವ ಪ್ರತಿಭಟನಾಕಾರರು,ವಕ್ಕಲೇರಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಪಂ ಸಿಇಓರನ್ನು ಆಗ್ರಹಿಸಲಾಗುವುದು. ಜಿಪಂ ಅಧ್ಯಕ್ಷರು ಸಚಿವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ತಾಕೀತು ಮಾಡಿದರು. ಕಳ್ಳ ಬಿಲ್ಗಳನ್ನು ಮಾಡಿಕೊಂಡು ಬದುಕುವಷ್ಟು ಕರ್ಮ ಸಚಿವರ ಬೆಂಬಲಿಗರಿಗೆ ಹಿಡಿದಿಲ್ಲ, ಅದೇ ಸಚಿವರ ಬೆಂಬಲಿಗರ ಮತಗಳನ್ನು ಪಡೆದು ಜಿ.ಪಂ ಸದಸ್ಯೆಯಾಗಿರುವುದನ್ನು ಚೌಡೇಶ್ವರಿ ಮರೆಯದಿರಲಿ. ಅಧಿಕಾರದ ಆಸೆಯಿಂದ ಕಳ್ಳರಂತೆ ರಾತ್ರೋರಾತ್ರಿ ಜೆಡಿಎಸ್ಗೆ ಓಡಿ ಹೋಗಿ ಜಿಪಂ ಅಧ್ಯಕ್ಷೆಯಾಗಿರುವುದನ್ನು ಮರೆಯದಂತೆ ಸಲಹೆ ಮಾಡಿದರು. ಮಾಜಿ ಸಚಿವ ಶ್ರೀನಿವಾಸಗೌಡ, ಜಿಪಂ ಅಧ್ಯಕ್ಷೆ ಭ್ರಷ್ಟರಾಗಿರುವುದರಿಂದ ಬೇರೆಯವರು ಇವರ ಕಣ್ಣಿಗೆ ಭ್ರಷ್ಟರಂತೆ ಕಾಣುತ್ತಾರೆ. ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿ ಎಂಬಂತಿರುವ ಈ ವರ್ತನೆಗೆ ಜನ ತಿರುಗಿ ಬೀಳುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು. ಗ್ರಾ.ಪಂ ಕಾರ್ಯದರ್ಶಿ ಚಂದ್ರಕಲಾ ಜೆಡಿಎಸ್ ಏಜೆಂಟ್ನಂತೆ ವರ್ತಿಸುತ್ತಿದ್ದು, ಪೇಟೆ ಚಾಮನಹಳ್ಳಿಯಲ್ಲಿ ಭೂ ಪರಿವರ್ತನೆಯಾಗದ ಜಮೀನುಗಳಿಗೆ ವಸತಿ ಉದ್ದೇಶಕ್ಕಾಗಿ ಖಾತೆ ಮಾಡಿದ್ದಾರೆ. ಗ್ರಾಪಂಯಲ್ಲಿನ ಸಾಕಷ್ಟು ಅವ್ಯವಹಾರಗಳಿಗೆ ಇವರೇ ನೇರ ಹೊಣೆ ಎಂದು ಆರೋಪಿಸಿದರು.
ಬಿಲ್ ಸ್ಥಗಿತ: ಜಿಪಂ ಅಧ್ಯಕ್ಷೆ ಚೌಡೇಶ್ವರಿ ಪ್ರತಿಭಟನೆ ನಡೆಸಿ ಮಂಜೂರು ಮಾಡಿಸಿಕೊಂಡಿದ್ದ ಬಿಲ್ ಗೆ ಜಿಪಂ ಲೆಕ್ಕಪರಿಶೋಧನಾಧಿಕಾರಿಗಳು ಮತ್ತು ತಾಪಂ ಇಓ ಹಣ ಮಂಜೂರಾಗದಂತೆ ತಡೆ ಹಿಡಿದಿದ್ದಾರೆ ಎಂಬ ಸುದ್ದಿ ತಿಳಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದರು. ಪ್ರತಿಭಟನೆಯಲ್ಲಿ ತಾಪಂ ಸದಸ್ಯೆ ನಂದಿನಿ ರಾಜಗೋಪಾಲ್, ಗ್ರಾಪಂ ಮಾಜಿ ಅಧ್ಯಕ್ಷರಾದ ಛತ್ರಕೋಡಿಹಳ್ಳಿ ಮಂಜುನಾಥ್, ನಾರಾಯಣಸ್ವಾಮಿ, ಕೆ. ರಘುಕುಮಾರ್, ಮಂಜುನಾಥ್, ವೆಂಕಟಲಕ್ಷ್ಮಮ್ಮ, ಸುಗುಣ, ಆನಂದ್, ಜಾನಕೀಬಾಯಿ, ಸರಸ್ವತಿ ವೆಂಕಟೇಶ್ಗೌಡ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

