ತೆರಿಗೆ ಸಂಗ್ರಹಣೆಯಲ್ಲಿ ಗುರಿ ಸಾಧಿಸಿ: ಜಿಪಂ ಅಧ್ಯಕ್ಷೆ ಚೌಡೇಶ್ವರಿ
ಕೋಲಾರ: ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹಣೆ ತೀರಾ ಕಡಿಮೆ ಇರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಅಡ್ಡಿಯಾಗುತ್ತಿದ್ದು, ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಿ ತೆರಿಗೆ ಸಂಗ್ರಹಣೆಯಲ್ಲಿ ಗುರಿ ಸಾಧಿಸಬೇಕೆಂದು ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ ತಾಕೀತು ಮಾಡಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗ್ರಾಪಂಗಳಲ್ಲಿ ತೆರಿಗೆ, ಕಂದಾಯ ವಸೂಲಿ ತೀರಾ ಕಡಿಮೆಯಿದೆ ಎಂದು ಜಿ.ಪಂ. ಸಿಇಒ ಜುಲ್ಫೀಖರ್ ಉಲ್ಲಾ ತಿಳಿಸಿದಾಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷರು, ತೆರಿಗೆ ಸಂಗ್ರಹಣೆ ಆಗದಿದ್ದರೆ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತದೆ ಹಾಗೂ ಸರ್ಕಾರದಿಂದ ಬರುವ ಅನುದಾನ ನಿಲ್ಲುತ್ತದೆ ಎಂದು ಸೂಚ್ಯವಾಗಿ ನುಡಿದರು.ಜಿಲ್ಲೆಯ ಗ್ರಾ.ಪಂ.ಗಳ ಪೈಕಿ ಮಾಲೂರಿನ ತಣಸಿ ಹಾಗೂ ಮುಳಬಾಗಲಿನ ಉತ್ತನೂರು ಗ್ರಾ.ಪಂಗಳಲ್ಲಿ ಮಾತ್ರ ಶೇ.20ಕ್ಕಿಂತ ಹೆಚ್ಚು ಕಂದಾಯ ವಸೂಲಿಯಾಗಿದೆ. ಈ ಎರಡು ಗ್ರಾಪಂಗಳ ಪಿಡಿಒಗೆ ಸನ್ಮಾನ ಮಾಡಿ, ಆಗಲಾದರೂ ಇತರ ಗ್ರಾಪಂಗಳಿಗೆ ಪ್ರೇರಣೆಯಾಗಲಿ ಎಂದು ಸಲಹೆ ನೀಡಿದರು.ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸದಿದ್ದಲ್ಲಿ ರೇಷನ್ ನೀಡುವುದಿಲ್ಲವೆಂದು ಹೇಳಲಾಗುತ್ತಿದೆ. ಕಂದಾಯವನ್ನು ವರ್ಷವಿಡೀ ಸಂಗ್ರಹಿಸಬಹುದು. ಆದರೆ, ಈ ತಿಂಗಳು ಪಡಿತರ ಧಾನ್ಯಗಳು ಪಡೆಯದಿದ್ದಲ್ಲಿ ಮುಂದಿನ ತಿಂಗಳಿನಿಂದ ಪಡಿತರ ಸಿಗುವುದಿಲ್ಲ. ಈ ಸಂಬಂಧ ಸಿಇಒ ಅವರು ಗ್ರಾ.ಪಂ. ಪಿಡಿಒ, ಕಾರ್ಯದರ್ಶಿಗಳಿಗೆ ಸೂಚನೆ ನೀಡಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕಿಟ್ಟಪ್ಪ ಆಗ್ರಹಿಸಿದರು.ಕಂದಾಯ ಪಾವತಿಸದಿದ್ದಲ್ಲಿ ರೇಷನ್ ನೀಡಬೇಡಿ ಎಂದು ಯಾರಿಗೂ ಹೇಳಿಲ್ಲ. ಆದರೆ ತೆರಿಗೆ ಸಂಗ್ರಹ ಶೇ. 20ಕ್ಕಿಂತಲೂ ಕಡಿಮೆ ಇರುವುದರಿಂದ ವಸೂಲಿಗೆ ಇದೊಂದು ಅವಕಾಶ ಎಂದು ಕೆಲ ಪಂಚಾಯಿತಿಗಳಲ್ಲಿ ಆ ರೀತಿ ಮಾಡಿರಬಹುದು ಎಂದು ಸಿಇಒ ಸ್ಪಷ್ಟನೆ ನೀಡಿದರು.ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಕೂಡ ಕಾರ್ಡ್ ವಿತರಣೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಹಗಲು ವೇಳೆ ಅಂತರ್ಜಾಲ ಸಂಪರ್ಕವೂ ಕಷ್ಟವಾಗುತ್ತಿದೆ ಎಂದು ಉಪನಿರ್ದೇಶಕರು ಅಳಲು ತೋಡಿಕೊಂಡರು. ವಿದ್ಯುತ್ ಇರುವಾಗ ಸಂಜೆ ಅಥವಾ ರಾತ್ರಿ ಅರ್ಧ ಗಂಟೆ ಹೆಚ್ಚುವರಿ ಕೆಲಸ ಮಾಡಿ ಕಾರ್ಡ್ ವಿತರಣೆಗೆ ಕ್ರಮ ತೆಗೆದುಕೊಳ್ಳಿ ಎಂದು ಸಿಇಒ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

