ಕೋಲಾರ

ಇಂದು ಕ್ಯಾಲನೂರಿನಲ್ಲಿ ವರ್ತೂರು ಬಲಪ್ರದರ್ಶನ

Published On :

ಕೋಲಾರ:  ವೇಮಗಲ್ ಜಿಲ್ಲಾ ಪಂಚಾಯಿತಿ ಉಪ ಚುನಾವಣೆಯಲ್ಲಿ ತಮ್ಮ ಬಣದ ಅಭ್ಯರ್ಥಿ ಭಾಗ್ಯಮ್ಮ ಕುಮಾರ್ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತ ಬಳಿಕ ವೇಮಗಲ್ ಮತ್ತು ಕ್ಯಾಲನೂರು ಹೋಬಳಿಯಲ್ಲಿ ಕೊಂಚಮಟ್ಟಿಗೆ ಹಿನ್ನಡೆ ಕಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್ ಪ್ರಕಾಶ್ ತಮಗಿರುವ ಜನ ಬೆಂಬಲ ಸಾಬೀತುಪಡಿಸಲು ನಿರ್ಧರಿಸಿದ್ದಾರೆ.
ತಮಗೆ ಕೈ ಕೊಟ್ಟು ಜೆಡಿಎಸ್ ಸೇರಿ ಜಿಪಂ ಅಧ್ಯಕ್ಷ ಸ್ಥಾನ ಅಲಂಕರಿಸಿದ ವಕ್ಕಲೇರಿಯ ಚೌಡೇಶ್ವರಿ ರಾಮಚಂದ್ರ ಅವರಿಗೆ ಶಾಕ್ ನೀಡಲು ಜ.29ರಂದು ಬೆಂಬಲಿಗರ ಬೃಹತ್ ಸಮಾವೇಶ ನಡೆಸಿ ಗಮನ ಸೆಳೆದಿರುವ ಸಚಿವ ವರ್ತೂರ್ ಪ್ರಕಾಶ್ 17ರಂದು ಭಾನುವಾರ ವೇಮಗಲ್ ಮತ್ತು ಕ್ಯಾಲನೂರು ಹೋಬಳಿಯ ಬೆಂಬಲಿಗರ ಮಹಾ ಸಮಾವೇಶ ಹಮ್ಮಿಕೊಂಡಿದ್ದಾರೆ.
ವಕ್ಕಲೇರಿಯಲ್ಲಿ ನಡೆದ ಸಮಾವೇಶಕ್ಕೆ 7ರಿಂದ 8 ಸಾವಿರ ಮಂದಿ ಬೆಂಬಲಿಗರನ್ನು ಸೇರಿ ಶಕ್ತಿ ಪ್ರದರ್ಶಿಸಿದ್ದ ಸಚಿವರು ಈಗ ಎರಡೂ ಹೋಬಳಿಯಿಂದ ಕನಿಷ್ಠ 15 ರಿಂದ 20 ಸಾವಿರ ಜನರನ್ನು ಸೇರಿಸುವ ಉದ್ದೇಶದಿಂದ ಸಕಲ ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಸಚಿವರ ಅಪ್ತರು ಸಹ ಶ್ರಮಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ನೀತಿ ಸಂಹಿತೆ ಅನ್ವಯಿಸಲಿರುವುದರಿಂದ ಭಾನುವಾರ ನಡೆಯುವ ಸಮಾವೇಶಕ್ಕೆ ಯಾವುದೇ ಕೊರತೆ ಇಲ್ಲದಂತೆ ಸಿದ್ಧತೆ ನಡೆಯುತ್ತಿದೆ. ಸುಮಾರು 15 ಸಾವಿರ ಜನರಿಗೆ ಆಸನಗಳು, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.
ವೇಮಗಲ್ ಜಿಪಂ ಕ್ಷೇತ್ರಕ್ಕೆ 2010ರಲ್ಲಿ ನಡೆದ ಚುನಾವಣೆಯಲ್ಲಿ ಭಾರತಿ ಪುಟ್ಟಸ್ವಾಮಾಚಾರಿ ಅವರ ಪತ್ನಿಯನ್ನು ಕಣಕ್ಕೆ ಇಳಿಸಿ ಗೆಲ್ಲಿಸಲಾಗಿತ್ತು. ಆದರೆ, ಅನಾರೋಗ್ಯ ಕಾರಣದಿಂದ ಭಾರತಿ ನಿಧನರಾದ ಕಾರಣ ನಡೆದ ಉಪ ಚುನಾವಣೆಯಲ್ಲಿ ಸಚಿವರು ಕುರುಬರಹಳ್ಳಿಯ ಭಾಗ್ಯಮ್ಮ ಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಜಿಪಂ ಚುನಾವಣೆಯಲ್ಲೂ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲಾಗದೆ ಜೆಡಿಎಸ್ ಮುಖಂಡ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತೀವ್ರ ಮುಖಭಂಗ ಅನುಭವಿಸಿದ್ದರು. ಅವರು ವೇಮಗಲ್ ಉಪಚುನಾವಣೆಯಲ್ಲಿ ಸಚಿವರ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಆಶಾ ಲೋಕೇಶ್ ಎಂಬುವನ್ನು ಕಣಕ್ಕೆ ಇಳಿಸಿದ್ದರು. ಗೆಲುವಿಗಾಗಿ ಎಲ್ಲ ರೀತಿಯ ರಾಜಕೀಯ ಶಕ್ತಿ ಪಣವಾಗಿಟ್ಟಿದ್ದರು. ಜತೆಗೆ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಹ ಪ್ರಚಾರಕ್ಕೆ ಕರೆ ತಂದಿದ್ದರು. ಸಚಿವರ ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ ಕುಮಾರ್ ಅವರನ್ನು ಕೇವಲ 417 ಮತಗಳ ಅಂತರದಿಂದ ಸೋಲಿಸಿ ತಾವೇ ಗೆದ್ದಿರುವಷ್ಟು ಸಂಭ್ರಮ ಪಟ್ಟಿದ್ದರು.
ಅತಿಯಾದ ವಿಶ್ವಾಸ, ಕ್ಯಾಲನೂರಿನಲ್ಲಿ ಮುಸ್ಲಿಂ ಸಮುದಾಯ ಕೈ ಕೊಟ್ಟಿದ್ದು ಹಾಗೂ ಇನ್ನಿತರ ಕಾರಣಗಳಿಂದ ಸೋಲು ಅನುಭವಿಸಿದ ವರ್ತೂರ್ ಪ್ರಕಾಶ್ ಅವರು ವೇಮಗಲ್ ಮತ್ತು ಕ್ಯಾಲನೂರು ಹೋಬಳಿಯಲ್ಲಿ ತಮಗೆ ಆದ ಹಿನ್ನಡೆಯಿಂದ ದೃತಿಗೇಡದೆ ಅಹಿಂದ ಸಂಘಟನೆ ಮೂಲಕ ಮತ್ತೆ ಈ ಭಾಗದಲ್ಲಿ ರಾಜಕೀಯ ಶಕ್ತಿ ವೃದ್ಧಿಗೆ ಮುಂದಾಗಿದ್ದಾರೆ.
ವೇಮಗಲ್ ಜಿಪಂ ಕ್ಷೇತ್ರ ಕಳೆದುಕೊಂಡ ನಂತರ ಇದಕ್ಕೆ ಪರ್ಯಾಯವಾಗಿ ವೇಮಗಲ್ ತಾಪಂ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬಣಕ್ಕೆ ಸೇರಿದ ಭಾಗ್ಯಲಕ್ಷ್ಮಿ ನಾರಾಯಣಮೂರ್ತಿ ಅವರನ್ನು ಕೂರಿಸಿ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ವೇಗಮಲ್ ಮತ್ತು ಕ್ಯಾಲನೂರು ಹೋಬಳಿಗಳಲ್ಲಿ ಅಹಿಂದ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ವರ್ಗದ ಜನರನ್ನು ಸೆಳೆಯಲು ಪ್ರಯತ್ನ ಮುಂದುವರಿದಿದೆ.  ವಿಧಾನಸಭೆಗೂ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುವುದರಿಂದ ಈ ಎರಡೂ ಹೋಬಳಿಯಲ್ಲಿ ಹೆಚ್ಚಿನ ನಿಗಾ ವಹಿಸಿದ್ದಾರೆ. ಸಮಾವೇಶದ ಮೂಲಕ ತಮ್ಮ ಚುನಾವಣಾ ಪ್ರಚಾರಕ್ಕೂ ಅಧಿಕೃತ ಚಾಲನೆ ನೀಡಲು ನಿರ್ಧರಿಸಿದ್ದಾರೆ.
ನರಸಾಪುರ ಹೋಬಳಿ ವ್ಯಾಪ್ತಿಯ ಸಮಾವೇಶ ನಡೆಸಿ, ನಂತರ ಕೋಲಾರದಲ್ಲಿ ಬೆಂಬಲಿಗರ ಸಭೆ ನಡೆಸಲು ಉದ್ದೇಶಿಸಿದ್ದು, ಕೋಲಾರ ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಅಕಾಂಕ್ಷಿಗಳಾಗಿರುವ ತಮ್ಮ ಎಲ್ಲಾ ಬೆಂಬಲಿಗರನ್ನು ಸಂಘಟನೆಗಾಗಿ ಬಳಸಿಕೊಳ್ಳುತ್ತಿರುವುದು ಗಮನಾರ್ಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.