ಕೋಲಾರ

ಎಸಿ ಕಚೇರಿ ಜಪ್ತಿಗೆ ಆದೇಶ; ಸಂಧಾನ ಮಾಡಿಕೊಂಡ ಎಸಿ

Published On :

ಕೋಲಾರ: ರೈತನಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದೆ ಉಪ ವಿಭಾಗಾಧಿಕಾರಿ ಕಚೇರಿಯ ಜಪ್ತಿ ಆದೇಶಕ್ಕೆ ಒಳಗಾಗಿ, ಮುಜುಗರದಿಂದ ತಪ್ಪಿಸಿಕೊಳ್ಳಲು ಉಪವಿಭಾಗಾಧಿಕಾರಿ ದೂರುದಾರ ಮತ್ತು ವಕೀಲರೊಂದಿಗೆ ಸಂಧಾನ ಮಾತುಕತೆ ನಡೆಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.
ತಾಲೂಕಿನ ಬ್ಯಾಲಹಳ್ಳಿಯ ವ್ಯಾಪ್ತಿಯಲ್ಲಿ ಆಶ್ರಯ ಬಡಾವಣೆ ನಿರ್ಮಿಸಲು 3 ಎಕರೆ 20 ಗುಂಟೆ ಜಮೀನನ್ನು ರೈತ ದೇವರಾಜ್ ಎಂಬವರಿಂದ 1996ರಲ್ಲಿ ಆಗಿನ ಉಪ ವಿಭಾಗಾಧಿಕಾರಿಗಳು ಸ್ವಾಧೀನ ಮಾಡಿಕೊಂಡು ಪರಿಹಾರ ನೀಡಲು ವಿಳಂಬ ಮಾಡಿದ್ದರು.
ಈ ಸಂದರ್ಭದಲ್ಲಿ 1 ಎಕರೆಗೆ 92 ಸಾವಿರ ಪರಿಹಾರ ಬೆಲೆ ನಿಗದಿ ಪಡಿಸಲಾಗಿತ್ತು. ಈ ಬೆಲೆ ಕಡಿಮೆ ಎಂದು ಜಮೀನು ನೀಡಿದ ರೈತ ಆಕ್ಷೇಪಿಸಿದ್ದರು. ಆದರೆ, ಪರಿಹಾರ ನಿಗದಿ ಸರಿಯಿದೆ ಎಂದು ಉಪ ವಿಭಾಗಾಧಿಕಾರಿ ಅವರು ವಾದಿಸಿದ್ದರಿಂದ ನ್ಯಾಯಾಲಯದಲ್ಲಿ ಎರಡೂ ಕಡೆಯಿಂದ ಅರ್ಜಿ ಸಲ್ಲಿಸಲಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ಎಕರೆಗೆ 1.50 ಲಕ್ಷ ಬೆಲೆ ನಿಗದಿ ಪಡಿಸಲಾಯಿತು.
ಇದು ಸಾಲದು ಎಂದು ಅರ್ಜಿದಾರರು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋದಾಗ ಇಲ್ಲಿ ಎಕರೆಗೆ 2 ಲಕ್ಷ ನಿಗದಿ ಪಡಿಸಿ ಪರಿಹಾರದ ಮೊತ್ತ ಬಡ್ಡಿ ಸೇರಿಸಿ ಒಟ್ಟು 23,30,779 ಪಾವತಿಸುವಂತೆ ಉಪ ವಿಭಾಗಾಧಿಕಾರಿಗೆ ಆದೇಶ ನೀಡಲಾಗಿತ್ತು.
ಆದರೆ ಅಂದಿನಿಂದ ಇಂದಿನವರೆಗೂ ಜಮೀನು ನೀಡಿದ ರೈತನಿಗೆ ಪರಿಹಾರದ ಮೊತ್ತ ಪಾವತಿ ಮಾಡಲಾಗದ ಕಾರಣ ಇಲ್ಲಿನ ಜಿಲ್ಲಾ ನ್ಯಾಯಾಲಯದ ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶೆ ಪ್ರಭಾವತಿ ಅವರು ಎಸಿ ಕಚೇರಿಯ ಜಪ್ತಿಗೆ ಆದೇಶಿಸಿದ್ದರು.
ಜಮೀನು ನೀಡಿದ ರೈತನ ಪರವಾಗಿ ಹಿರಿಯ ವಕೀಲ ಎನ್.ಜಿ. ವಾಸುದೇವ್ ಮೂರ್ತಿ ಅವರು ವಕಾಲತ್ತು ವಹಿಸಿದ್ದರು.
ನ್ಯಾಯಾಲಯದ ಅಮೀನ ಹಾಗೂ ದೂರುದಾರರ ಪರ ವಕೀಲರ ನೇತೃತ್ವದ ತಂಡ ಶನಿವಾರ ಬೆಳಗ್ಗೆ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಬಂದು ರೈತನಿಗೆ ಪರಿಹಾರ ನೀಡಲು ವಿಳಂಬ ಮಾಡಿರುವುದರಿಂದ ನ್ಯಾಯಾಲಯವು ಉಪವಿಭಾಗಾಧಿಕಾರಿ ಕಚೇರಿಯ ಬೆಲೆಬಾಳುವ ವಾಹನ, ಪೀಠೋಪಕರಣಗಳು ಹಾಗೂ ಇತರೆ ವಸ್ತುಗಳ ಜಪ್ತಿ ಮಾಡಲು ಆದೇಶ ನೀಡಿದೆ ಎಂದು ದಾಖಲೆಗಳನ್ನು ತೋರಿಸಿದಾಗ ಉಪ ವಿಭಾಗಾಧಿಕಾರಿ ಆಯಿಷಾ ಫರ್ವೀನ್ ಸೇರಿದಂತೆ ಕಚೇರಿಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ನೌಕರರು ಗಲಿಬಿಲಿಗೊಳ್ಳುವಂತಾಯಿತು.
ಉಪವಿಭಾಗಾಧಿಕಾರಿ ಆಯಿಷಾ ಫರ್ವೀನ್ ಅವರು ದೂರುದಾರ ದೇವರಾಜ್ ಮತ್ತು ಈತನ ಪರ ವಕೀಲ ವಾಸುದೇವಮೂರ್ತಿ ಅವರೊಂದಿಗೆ ಸಂಧಾನದ ಚರ್ಚೆ ನಡೆಸಿ ಬಾಕಿ ಹಣ ಪಾವತಿಗೆ 15 ದಿನಗಳವರೆಗೆ ಕಾಲಾವಕಾಶ ಕೋರಿದಾಗ ಜಪ್ತಿದಾರರು ಕಡೆಯ ಅವಕಾಶ ನೀಡಿದ್ದರಿಂದ ಉಪವಿಭಾಗಾಧಿಕಾರಿಯ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.