ಕೋಲಾರ

ಕಾರ್ಮಿಕರ ಕಾಯಂ ಮಾಡಿ, ಉದ್ಯೋಗ ಭತ್ಯೆ ನೀಡಿ

Published On :

ಬಾಗೇಪಲ್ಲಿ: ಕಾಯಂ ಉದ್ಯೋಗ ಇಲ್ಲವೇ ನಿರುದ್ಯೋಗ ಭತ್ಯೆ ನೀಡಬೇಕೆನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ತಾಲೂಕು ಕಚೇರಿಗಳ ಮುಂದೆ 24 ಗಂಟೆಗಳ ಪ್ರತಿಭಟನಾ ಧರಣಿ ಅಂಗವಾಗಿ ಸೋಮವಾರ ಬಾಗೇಪಲ್ಲಿ ಘಟಕದ ಡಿವೈಎಫ್‌ಐ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಶ್ರೀನಿವಾಸರೆಡ್ಡಿ, ನಿರುದ್ಯೋಗ ಸಮಸ್ಯೆ ಬಗೆಹರಿಸುವ ಬದಲಾಗಿ ಇನ್ನಷ್ಟು ನಿರುದ್ಯೋಗ ಸಮಸ್ಯೆ ಉಲ್ಬಣಗೊಳಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನತೆಯನ್ನು ವಂಚಿಸುತ್ತಿವೆಯೆಂದು ಆರೋಪಿಸಿದರು.
ಸರ್ಕಾರಿ ಇಲಾಖೆಗಳು ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಸೇರಿದಂತೆ ವಿವಿಧ ರೀತಿಯಲ್ಲಿ ಕಡಿಮೆ ಸಂಬಳದಲ್ಲಿ ಅಧಿಕ ಸಮಯ ದುಡಿಸಿಕೊಳ್ಳುತ್ತಿದ್ದಾರೆ. ಕೆಲಸಗಾರರಿಗೆ ಯಾವುದೇ ರೀತಿಯ ಉದ್ಯೋಗ ಭದ್ರತೆಯಿಲ್ಲ, ಕನಿಷ್ಠ ವೇತನ ನಿಗದಿಯಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಶೇ.90ಕ್ಕೂ ಹೆಚ್ಚಾಗಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರನ್ನು ಕಾರ್ಮಿಕ ಕಾನೂನುಗಳಿಂದ ದೂರ ಸರಿಸುವ ಮೂಲಕ ಅವರಿಗೆ ಕಾಯಂ ಉದ್ಯೋಗ ನಿರಾಕರಿಸಲಾಗುತ್ತಿದೆಯೆಂದು ದೂರಿದರು.  ನಿರುದ್ಯೋಗ ನಿವಾರಣೆಗೆ ಸ್ಥಳೀಯವಾಗಿ ಲಭ್ಯವಾಗುವಂತಹ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪನೆ ಮಾಡುವ ಬದಲಿಗೆ ಭೂಮಿ, ಗಣಿ, ಅರಣ್ಯ, ಕೃಷಿ ಯೋಗ್ಯ ಭೂಮಿಯನ್ನು ಮುಂದಿನ ಪೀಳಿಗೆಗಳಿಗೆ ಗಂಭೀರ ಪರಿಣಾಮ ಬೀರುವಂತಹ ರೀತಿಯಲ್ಲಿ ಖಾಸಗಿ ಕಂಪನಿಗಳಿಗೆ ವಿಶ್ವ ಬಂಡವಾಳ ಹೂಡಿಕೆಯ ಹೆಸರಿನಲ್ಲಿ ಸೂರೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ವಿವಿಧ ರೀತಿಯ ಶ್ರೀಮಂತ ಕಂಪನಿಗಳಿಗೆ ತೆರಿಗೆ ಮತ್ತಿತರ ರಿಯಾಯಿತಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಮೂಲಕ 5.28 ಲಕ್ಷ ಕೋಟಿಗಳನ್ನು ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟಿವೆ ಎಂದು ಟೀಕಿಸಿದರು.
ಚುನಾವಣೆಯ ಸಮಯದಲ್ಲಿ ನಿರುದ್ಯೋಗಿಗಳಿಗೆ ನಿರುದ್ಯೋಗಿ ಭತ್ಯೆಯನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ನೀಡಿದ್ದು ಆದರೆ ಭರವಸೆ ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ.
ಧರಣಿಯಲ್ಲಿ ಮುಖಂಡರಾದ ವಿಶ್ವನಾಥರೆಡ್ಡಿ, ಎ.ಎನ್.ಲಕ್ಷ್ಮಣ್, ಜಿಕ್ರೀಯಾ, ನರಸಿಂಹಪ್ಪ, ಜಭೀವುಲ್ಲಾ, ನರಸಿಂಹಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.